ಹಣ
ಬೆಂಗಳೂರು: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ರಾಜ್ಯದ ಅಲ್ಪಾವಧಿ ಕೃಷಿಗೆ ನೀಡುವ ಸಾಲದ ಪ್ರಮಾಣ ಶೇ 70.65ರಷ್ಟು ಕಡಿಮೆಯಾಗಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್‌ನ ದಿನೇಶ್ ಗೂಳಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಕೇಂದ್ರ ಸರ್ಕಾರದ ನೀತಿಗೆ ಅನುಗುಣವಾಗಿ ಡಿಸಿಸಿ ಬ್ಯಾಂಕ್‌ಗಳ ವಾಸ್ತವಿಕ ಸಾಲ ಯೋಜನೆಗೆ ನಬಾರ್ಡ್ ರಿಯಾಯಿತಿ ಬಡ್ಡಿ ದರದಲ್ಲಿ ಶೇ 40ರಷ್ಟು ಪುನರ್ಧನ ನೀಡುತ್ತದೆ. ಪ್ರಸಕ್ತ ವರ್ಷ ರಾಜ್ಯಕ್ಕೆ ₹9,160.80 ಕೋಟಿ ನಿಗದಿಯಾಗಿದೆ. ಆದರೆ, ನೀಡಿರುವುದು ₹3,236.11 ಕೋಟಿ. ₹5,924.69 ಕೋಟಿ ಕೊರತೆಯಾಗಿದೆ. ಕಳೆದ ಐದು ವರ್ಷಗಳಿಂದಲೂ ಇದೇ ಸ್ಥಿತಿ ಮುಂದುವರಿದಿದೆ ಎಂದು ವಿವರ ನೀಡಿದರು.
2020–24ರ ಅವಧಿಯ ಸಾಲದ ಮಿತಿ ಕಡಿಮೆಯಾಗಿದ್ದರೂ ನಿಶ್ಚಿತ ಬಡ್ಡಿ ದರದ ಸಾಲದ ಶೇ 60ರಷ್ಟು ಪುನರ್ಧನವನ್ನು ಡಿಸಿಸಿ ಬ್ಯಾಂಕ್‌ಗಳು ಬಳಸಿಕೊಳ್ಳುತ್ತಿವೆ. ಬಡ್ಡಿ ದರ ಹೆಚ್ಚಳದ ಕಾರಣ ಈ ಯೋಜನೆಯ ಸಾಲಕ್ಕೆ ಅರ್ಜಿ ಸಲ್ಲಿಸಲು ಹೆಚ್ಚಿನ ಸಹಕಾರ ಸಂಘಗಳು ಹಿಂದೇಟು ಹಾಕಿವೆ ಎಂದರು.
ಹಿಂದೆ ನೀಡುತ್ತಿದ್ದಂತೆ ಶೇ 4.50 ಬಡ್ಡಿ ದರದಲ್ಲಿ ಶೇ 40ರಷ್ಟು ಪುನರ್ಧನ ನೀಡುವಂತೆ ಮನವಿ ಮಾಡಲು ಕೇಂದ್ರದ ಬಳಿಗೆ ಸರ್ವಪಕ್ಷಗಳ ನಿಯೋಗವನ್ನು ಕರೆದುಕೊಂಡು ಹೋಗಲು ನಿರ್ಧರಿಸಲಾಗಿದೆ ಎಂದು ಹೇಳಿದರು.
‘ಫಲಾನುಭವಿ ಆಯ್ಕೆ: ಹಳೆಯ ಅರ್ಜಿ ಪರಿಗಣನೆ’
ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ನಿಗಮಗಳ ಫಲಾನುಭವಿಗಳ ಆಯ್ಕೆಗೆ ಹಿಂದಿನ ವರ್ಷ ಸಲ್ಲಿಸಿದ ಅರ್ಜಿ ಮತ್ತು ದಾಖಲೆಗಳನ್ನು ಪರಿಗಣಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಧಾನಸಭೆಯಲ್ಲಿ ಬಿಜೆಪಿಯ ಯಶ್‌ಪಾಲ್ ಸುವರ್ಣ ಅವರ ಪ್ರಶ್ನೆಗೆ ಮಂಗಳವಾರ ಉತ್ತರ ನೀಡಿದ ಅವರು, ‘ಪದೇ ಪದೇ ಅರ್ಜಿ ಸಲ್ಲಿಸಬೇಕಾದ ತೊಂದರೆ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ವಿವಿಧ ಯೋಜನೆಗಳಲ್ಲಿ ಬಳಕೆಯಾಗದೇ ಉಳಿದ ಅನುದಾನವನ್ನು ಬೇಡಿಕೆ ಇರುವ ಯೋಜನೆಗಳಿಗೆ ವರ್ಗಾವಣೆ ಮಾಡುವುದಕ್ಕೂ ಅವಕಾಶ ಕಲ್ಪಿಸಲಾಗಿದೆ’ ಎಂದರು.
ವಿವಿಧ ಯೋಜನೆಗಳಿಗೆ ನಿಗದಿಪಡಿಸಿದ್ದ ಭೌತಿಕ ಗುರಿಗಿಂತಲೂ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿವೆ. 2024–25ನೇ ಆರ್ಥಿಕ ವರ್ಷದಲ್ಲಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ 16,932 ಫಲಾನುಭವಿಗಳ ಗುರಿಗೆ ಪ್ರತಿಯಾಗಿ 18,206, ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದಲ್ಲಿ 1,000 ಫಲಾನುಭವಿಗಳ ಗುರಿಗೆ ಪ್ರತಿಯಾಗಿ 6,646 ಮತ್ತು ಕರ್ನಾಟಕ ಮೇದಾರ ಅಲೆಮಾರಿ ಅಭಿವೃದ್ಧಿ ನಿಗಮದಲ್ಲಿ 300 ಫಲಾನುಭವಿಗಳ ಗುರಿಗೆ ಪ್ರತಿಯಾಗಿ 3,097 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಮಾಹಿತಿ ನೀಡಿದರು.
‘ಗುರಿಗೆ ಸೀಮಿತವಾಗಿ ಮಂಜೂರಾತಿ ನೀಡುತ್ತಿಲ್ಲ. ಈ ಮೂರೂ ನಿಗಮಗಳಿಗೆ ಆರಂಭದಲ್ಲಿ ₹140 ಕೋಟಿ ಅನುದಾನ ಒದಗಿಸಲಾಗಿತ್ತು. ಆದರೆ, ₹167 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದರು.
2,127 ಪೌರಕಾರ್ಮಿಕರು ಕಾಯಂ
ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಕೆಲಸ ಮಾಡುತ್ತಿರುವ 2,127 ಪೌರ ಕಾರ್ಮಿಕರನ್ನು ಮೂರು ತಿಂಗಳ ಒಳಗೆ ಕಾಯಂ ಮಾಡಲಾಗುವುದು ಎಂದು ಪೌರಾಡಳಿತ ಸಚಿವ ರಹೀಂ ಖಾನ್ ಹೇಳಿದರು.
ಬಿಜೆಪಿಯ ಎನ್. ರವಿಕುಮಾರ್ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, 9,155 ಕಾಯಂ ಪೌರ ಕಾರ್ಮಿಕರು ಇದ್ದಾರೆ. 2017ರಿಂದ ಸ್ವಚ್ಛತಾ ಕಾರ್ಯಕ್ಕೆ ಹೊರಗುತ್ತಿಗೆ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ. ಹಾಗಾಗಿ, ಹೊರಗುತ್ತಿಗೆ ಆಧಾರದಲ್ಲಿ ಪೌರ ಕಾರ್ಮಿಕರನ್ನೂ ತೆಗೆದುಕೊಳ್ಳುತ್ತಿಲ್ಲ. ಈಗಿರುವ ನೇರಪಾವತಿ ಆಧಾರಿತ ಸಿಬ್ಬಂದಿ ಕಾಯಂಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.