ADVERTISEMENT

ಪಾಲಿಕೆಗಳ ಚುನಾವಣೆಗೆ ಸಿದ್ಧತೆ: ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 21:13 IST
Last Updated 21 ಆಗಸ್ಟ್ 2025, 21:13 IST
<div class="paragraphs"><p>ಡಿ.ಕೆ.ಶಿವಕುಮಾರ್</p></div>

ಡಿ.ಕೆ.ಶಿವಕುಮಾರ್

   

ಬೆಂಗಳೂರು: ನಗರ ಪಾಲಿಕೆಗಳ ಚುನಾವಣೆಗೆ ಸಿದ್ಧತೆ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ. ನವೆಂಬರ್ 1ರ ವೇಳೆಗೆ ಐದು ನಗರ ಪಾಲಿಕೆಗಳ ವಾರ್ಡ್ ಮರುವಿಂಗಡಣೆ ಪ್ರಕ್ರಿಯೆ ನಡೆಯಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ನ ಟಿ.ಎನ್ ಜವರಾಯಿ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2025ರ ಮೇ 15ರಿಂದ ಜಾರಿಯಾಗಿದ್ದು, ಬಿಬಿಎಂಪಿ ಪ್ರದೇಶವನ್ನು ಗ್ರೇಟರ್‌ ಬೆಂಗಳೂರು ಪ್ರದೇಶ ಎಂದು ಹೆಸರಿಸಲಾಗಿದೆ. ಜುಲೈ 19ರಂದು ಐದು ನಗರ
ಪಾಲಿಕೆ ರಚಿಸಲಾಗಿದ್ದು, ಆಕ್ಷೇಪಣೆ ಸಲ್ಲಿಸಲು ಗಡುವು ಮುಗಿದಿದೆ. ಸೆ.2ರಂದು ಅಂತಿಮ ಅಧಿಸೂಚನೆ ಹೊರಡಿಸಿ, ನವೆಂಬರ್‌ 1ರೊಳಗೆ ವಾರ್ಡ್‌ ವಿಂಗಡಣೆ ಕಾರ್ಯ ಮಾಡಲಾಗುವುದು. ಇದಕ್ಕಾಗಿ ಪಾಲಿಕೆಯಲ್ಲಿ ಆಯುಕ್ತರ ನೇತೃತ್ವದ ಪ್ರತ್ಯೇಕ ತಂಡ ಇದೆ. ನಾವು ನ್ಯಾಯಾಲಯಕ್ಕೆ ಕಾಲ ಮಿತಿಯಲ್ಲಿ ಪ್ರಮಾಣ ಪತ್ರ ಸಲ್ಲಿಸಿದ್ದೇವೆ’ ಎಂದರು.

ADVERTISEMENT

ಶೇ 25ರಷ್ಟು ಮಾತ್ರ: ‘ಕೇಂದ್ರ ಸರ್ಕಾರದ ಆದೇಶದಂತೆ ಘನತ್ಯಾಜ್ಯ ಸೇವಾ ಶುಲ್ಕವನ್ನು ವಿಧಿಸಲಾಗಿದೆ. ಕೇಂದ್ರದ ಮಾರ್ಗಸೂಚಿಯಲ್ಲಿ ಶೇ 25ರಷ್ಟು ಶುಲ್ಕವನ್ನು ಮಾತ್ರ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಗ್ರಹಿಸಲಾಗುತ್ತಿದೆ’ ಎಂದು ಡಿ.ಕೆ. ಶಿವಕುಮಾರ್‌ ಅವರು ತಿಳಿಸಿದರು.

ಬಿಜೆಪಿಯ ಕೇಶವ ಪ್ರಸಾದ್‌ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಕಸವನ್ನು ತಾವೇ ವಿಲೇವಾರಿ ಮಾಡಿಕೊಳ್ಳುವುದಾಗಿ 35 ಸಾವಿರ ಜನರು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಅವರಿಗೆ ಶುಲ್ಕ ಇರುವುದಿಲ್ಲ’ ಎಂದರು.

ಹೈಕೋರ್ಟ್‌ನಲ್ಲಿ ಅಫಿಡವಿಟ್‌ ಸಲ್ಲಿಸಿರುವಂತೆ 33 ಪ್ಯಾಕೇಜ್‌ಗಳಲ್ಲಿ ಘನತ್ಯಾಜ್ಯ ವಿಲೇವಾರಿಗೆ ಟೆಂಡರ್‌ ಕರೆಯಲಾಗಿದೆ. ನೈಸ್‌ ಸಂಸ್ಥೆಯಿಂದ ಬಿಡಿಸಿಕೊಂಡಿರುವ ಎರಡು ಜಾಗ ಹಾಗೂ ದೊಡ್ಡಬಳ್ಳಾಪುರದಲ್ಲಿ ತಲಾ 100 ಎಕರೆಯಲ್ಲಿ ಸಮಗ್ರ ತ್ಯಾಜ್ಯ ವಿಲೇವಾರಿ, ಸಂಸ್ಕರಣೆ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.