ADVERTISEMENT

ಸಿದ್ದರಾಮಯ್ಯ ಪಂಡಿತರು, ತತ್ವಜ್ಞಾನಿಗಳು: ಕಟೀಲ್‌ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 18:03 IST
Last Updated 18 ಅಕ್ಟೋಬರ್ 2019, 18:03 IST
ಸಿದ್ದರಾಮಯ್ಯ ಮತ್ತು ನಳಿನ್ ಕುಮಾರ್ ಕಟೀಲ್
ಸಿದ್ದರಾಮಯ್ಯ ಮತ್ತು ನಳಿನ್ ಕುಮಾರ್ ಕಟೀಲ್   

ಮಂಡ್ಯ: ವೀರ ಸಾವರ್ಕರ್‌ ಕುರಿತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಇಲ್ಲಿ ಶುಕ್ರವಾರ ವ್ಯಂಗ್ಯವಾಡಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸಿದ್ದರಾಮಯ್ಯ ಅವರು ಹಿರಿಯರು, ತತ್ವಜ್ಞಾನಿಗಳು, ಪಂಡಿತರು. ಅವರು ಇತಿಹಾಸವನ್ನು ಬಹಳ ಚೆನ್ನಾಗಿ ಓದಿಕೊಂಡಿದ್ಧಾರೆ. ಅವರು ಮಾತನಾಡುವುದು ಒಳ್ಳೆಯದು’ ಎಂದರು.

ನಳಿನ್‌ ಕುಮಾರ್‌ ಕಟೀಲ್‌ಗೆ ಜ್ಞಾನವಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ‘ನಾನು ಜ್ಞಾನವಂತ ಎಂದು ಎಲ್ಲೂ ಹೇಳಿಕೊಂಡಿಲ್ಲ. ಈ ದೇಶದಲ್ಲಿ ಬಹಳ ಜ್ಞಾನವಂತರು ಇದ್ದರು ಎಂಬು ಪುರಾಣಗಳು ಹೇಳುತ್ತವೆ. ರಾವಣ ಕೂಡ ಒಬ್ಬ ಪಂಡಿತನಾಗಿದ್ದ, ಜ್ಞಾನವಂತನಾಗಿದ್ದ’ ಎಂದು ಪರೋಕ್ಷವಾಗಿ ರಾವಣನಿಗೆ ಹೋಲಿಕೆ ಮಾಡಿದರು.

ADVERTISEMENT

‘ನೆರೆ ಪರಿಹಾರ ಕುರಿತು ದೇಶದ 13 ರಾಜ್ಯಗಳಲ್ಲಿ ಕರ್ನಾಟಕಕ್ಕೆ ಅತೀ ಹೆಚ್ಚು ಪರಿಹಾರ ಸಿಕ್ಕಿದೆ. ಮಧ್ಯಂತರ ಪರಿಹಾರದಲ್ಲಿ ಮತ್ತಷ್ಟು ಹಣ ರಾಜ್ಯಕ್ಕೆ ದೊರೆಯಲಿದೆ. ಪ್ರವಾಹ ಸಂತ್ರಸ್ತರ ಪರಿಹಾರಕ್ಕೆ ಯಾವುದೇ ತೊಂದರೆ ಇಲ್ಲ. ಪರಿಸ್ಥಿತಿಯನ್ನು ಬಹಳ ಚೆನ್ನಾಗಿ ನಿಭಾಯಿಸಲಾಗುತ್ತಿದೆ’ ಎಂದರು.

‘32 ಜಿಲ್ಲೆ ಕುರಿತ ಹೇಳಿಕೆಗೆ ನಾನು ಈಗಾಗಲೇ ಸ್ಪಷ್ಟನೆ ನಿಡಿದ್ದೇನೆ. ಈ ಬಗ್ಗೆ ನಾನು ಮತ್ತೊಮ್ಮೆ ಮಾತನಾಡುವುದಿಲ್ಲ’ ಎಂದರು.

‘ಸಾವರ್ಕರ್‌ ಗಾಂಧಿ ಹತ್ಯೆಯ ಆರೋಪಿ’

ಮಂಗಳೂರು: ‘ಸಂಘ ಪರಿವಾರದ ನಾಯಕ ವೀರ್‌ ಸಾವರ್ಕರ್‌ಗೆ ಭಾರತ ರತ್ನ ನೀಡುವುದಾಗಿ ನರೇಂದ್ರ ಮೋದಿ ಹೇಳಿದ್ದಾರೆ. ಮಹಾತ್ಮ ಗಾಂಧೀಜಿ ಹತ್ಯೆ ಪ್ರಕರಣದಲ್ಲಿ ಸಾವರ್ಕರ್‌ ಆರೋಪಿಯಾಗಿದ್ದರು. ಪ್ರಧಾನಿಯ ಟೊಳ್ಳು ದೇಶಭಕ್ತಿಗೆ ಇದು ಸಾಕ್ಷಿ’ ಎಂದು ಸಿದ್ದರಾಮಯ್ಯ ಟೀಕಿಸಿದರು.

ಸ್ವಾಮೀಜಿಗೆ ಕೊಡಿ: ‘ಸಾವರ್ಕರ್‌ಗೆ ನೀಡುವ ಮೊದಲು ಸಾಮಾಜಿಕ ಸೇವೆಗಾಗಿ ತನ್ನ ಬದುಕನ್ನು ತೇದು ಲಿಂಗೈಕ್ಯವಾಗಿರುವ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡಲಿ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.