ADVERTISEMENT

ಮೈಸೂರಿನಲ್ಲಿ ‘ನಮ್ದು ರೈತರ ಮಾರುಕಟ್ಟೆ’: ಏನಿದರ ವಿಶೇಷತೆ?

ಜಯಲಕ್ಷ್ಮಿಪುರಂನಲ್ಲಿ ಸಾವಯವ ಆಹಾರ ವಸ್ತುಗಳ ಮಾರಾಟ ಮಳಿಗೆ ಆರಂಭ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2022, 3:10 IST
Last Updated 17 ಫೆಬ್ರುವರಿ 2022, 3:10 IST
‘ನಮ್ದು’ ಬ್ರ್ಯಾಂಡ್‌ನ ಲೋಗೊ
‘ನಮ್ದು’ ಬ್ರ್ಯಾಂಡ್‌ನ ಲೋಗೊ   

ಮೈಸೂರು: ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ತರಕಾರಿ, ಬೆಳೆಗಳನ್ನು ನೇರವಾಗಿ ಗ್ರಾಹಕರ ಮನೆಗೇ ತಲುಪಿಸುವ ಮಾರುಕಟ್ಟೆ ವ್ಯವಸ್ಥೆಯನ್ನು ರೈತರೇ ರೂಪಿಸಿಕೊಂಡಿದ್ದು, ಮೈಸೂರಿನ ಜಯಲಕ್ಷ್ಮಿಪುರಂನಲ್ಲಿ ‘ನಮ್ದು ರೈತರ ಮಾರುಕಟ್ಟೆ’ ಆರಂಭವಾಗಿದೆ.

ರಾಜ್ಯದ 400ಕ್ಕೂ ಹೆಚ್ಚು ಸಾವಯವ ಕೃಷಿಕರು ಬೆಳೆದ ವಿಷಮುಕ್ತ ಆಹಾರ ಪದಾರ್ಥಗಳು ಲಭ್ಯವಿದ್ದು, ಲಾಭ ಅವರಿಗೇ ನೇರವಾಗಿ ತಲು‍ಪಲಿದೆ.

‘ರೈತರು ತಮ್ಮದೇ ಮಾರುಕಟ್ಟೆಯನ್ನು ರೂಪಿಸಿಕೊಂಡರಷ್ಟೇ ಅಭಿವೃದ್ಧಿ ಎಂಬುದು ರೈತ ಹೋರಾಟಗಾರ ಪ್ರೊ.ಎಂ.ಡಿ.ನಂಜುಂಡ ಸ್ವಾಮಿಯವರ ಕನಸಾಗಿತ್ತು. ಅದನ್ನು ರೈತ ಚಳವಳಿಯ ಎಲ್ಲ ಬಣಗಳು ನನಸಾಗಿಸಿವೆ. 2020ರಲ್ಲಿ ಚಾಮರಾಜನಗರದಲ್ಲಿ ಮೊದಲು ‘ನಮ್ದು’ ಬ್ರ್ಯಾಂಡ್‌ ಆರಂಭಿಸಿದೆವು’ ಎಂದು ರೈತ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ ತಿಳಿಸಿದರು.

ADVERTISEMENT

‘ಭೂಮಿ ಬಾಸ್ಕೆಟ್‌’: ‘ನಮ್ದು’ ರೈತರ ಮಾರುಕಟ್ಟೆಯಿಂದ ಗ್ರಾಹಕರ ಮನೆಬಾಗಿಲಿಗೆ ತಲುಪಿಸಲು ‘ಭೂಮಿ ಬಾಸ್ಕೆಟ್‌’ ವ್ಯವಸ್ಥೆ ಇದ್ದು, ಮೊ: 89046 41631ಕ್ಕೆ ಸಂಪರ್ಕಿಸಿದರೆ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬೆಳೆದ ಎಲ್ಲ ಉತ್ಪನ್ನಗಳು ಸಿಗಲಿವೆ.

ಉದ್ಘಾಟನೆ ಇಂದು: ಜಯಲಕ್ಷ್ಮಿಪುರಂನ ಗೋಕುಲಂ ರಸ್ತೆಯ ಎಂಟನೇ ಮುಖ್ಯರಸ್ತೆಯಲ್ಲಿ ಮಳಿಗೆಯ ಉದ್ಘಾಟನೆ ಫೆ.17ರಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ.

ಅದೇ ಕಟ್ಟಡದಲ್ಲಿಯೇ ‘ತುಲಾ ಸಾವಯವ ಕೈಮಗ್ಗ’ ಮಳಿಗೆಯೂ ಆರಂಭವಾಗಲಿದ್ದು, ಮೇಲುಕೋಟೆಯ ‘ಜನಪದ ಸೇವಾ ಟ್ರಸ್ಟ್‌’ನ ಕೈಮಗ್ಗದ ಖಾದಿ ಬಟ್ಟೆಗಳು ದೊರೆಯಲಿವೆ. ಮಳೆಯಾಶ್ರಿತ ಪ್ರದೇಶದ ಹತ್ತಿ ಬೆಳೆವ ಕೃಷಿಕರಿಗೂ ಪ್ರೋತ್ಸಾಹ ಸಿಗಲಿದೆ. ಫೆ.17ರಿಂದ 19ರ ವರೆಗೆ ಕೃಷಿ ಹಾಗೂ ಕೈ ಮಗ್ಗದ ಕುರಿತು ಉಪನ್ಯಾಸ, ಸಂವಾದವೂ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.