ಬೆಂಗಳೂರು: ವಿಧಾನಸೌಧದ ಆವರಣದಲ್ಲಿ ‘ನಾಡದೇವಿ ಭುವನೇಶ್ವರಿ ಕಂಚಿನ ಪ್ರತಿಮೆ’ ಜನವರಿ 27ರಂದು ಅನಾವರಣವಾಗಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ವಿಧಾನಸೌಧ ಪಶ್ಚಿಮ ದ್ವಾರದಲ್ಲಿ ಭುವನೇಶ್ವರಿಯ 25 ಅಡಿ ಎತ್ತರದ ಕಂಚಿನ ಪ್ರತಿಮೆ ಸ್ಥಾಪನೆಯಾಗಲಿದೆ ಎಂದರು.
ನಾಡದೇವಿ ಪ್ರತಿಮೆಯ ಹಿಂದೆ ಕರ್ನಾಟಕ ನಕ್ಷೆ ಹಾಗೂ ಉಬ್ಬು ಶಿಲ್ಪ ಇರಲಿದೆ. ಮುಂಭಾಗದಲ್ಲಿ ಭೌಗೋಳಿಕ ನಕ್ಷೆ ಇದ್ದರೆ, ಹಿಂಬದಿಯಲ್ಲಿ ನಾಡಗೀತೆಯನ್ನು ಕೆತ್ತಲಾಗಿದೆ. ಹೊಯ್ಸಳ, ಚಾಲುಕ್ಯ ಕದಂಬ ಹಾಗೂ ಆಧುನಿಕ ನೈಜ ಶಿಲ್ಪಗಳ ಶೈಲಿಗಳನ್ನು ಅಳವಡಿಸಿ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಹೊಯ್ಸಳ ಲಾಂಛನ, ವೈಜಯಂತಿ ಮಾಲೆ, ಕಂಠಿಹಾರ, ಗಂಡ ಭೇರುಂಡ ಇರಲಿದೆ ಎಂದು ಮಾಹಿತಿ ನೀಡಿದರು.
ಪ್ರತಿಮೆಯ ಸುತ್ತಲೂ ಉದ್ಯಾನ ನಿರ್ಮಿಸಲಾಗಿದ್ದು, ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದೆ. ವಿಧಾನಸೌಧದ ಪಶ್ಚಿಮ ದ್ವಾರದಿಂದ ನಾಡದೇವಿ ವೀಕ್ಷಣೆಗೆ ಸಾರ್ವಜನಿಕರಿಗೆ ದಿನಪೂರ್ತಿ ಮುಕ್ತ ಅವಕಾಶ ಕಲ್ಪಿಸಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದರು.
ಜನವರಿ 27ರ ಬೆಳಿಗ್ಗೆಯಿಂದ ನಗರದಲ್ಲಿ ಹಬ್ಬದ ರೀತಿಯಲ್ಲಿ ಉತ್ಸವ ಆಚರಿಸಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಜೆ ಪ್ರತಿಮೆ ಅನಾವರಣ ಮಾಡಲಿದ್ದಾರೆ. ಸಾರ್ವಜನಿಕರು ಹಾಗೂ ಕನ್ನಡಪರ ಸಂಘಟನೆಗಳು ಪಾಲ್ಗೊಳ್ಳಲಿವೆ ಎಂದರು.
ಪ್ರತಿಮೆ ಅನಾವರಣದ ಕಾರ್ಯಕ್ರಮದಂದು, ಜ್ಞಾನಪೀಠ ಪ್ರಶಸ್ತಿ ಪುರಸ್ಕತರು, ರಾಷ್ಟ್ರಕವಿಗಳು, ರಾಜರು, ಇತಿಹಾಸ ಪುರುಷರು, ಹೆಸರಾಂತ ವ್ಯಕ್ತಿಗಳ ಪಲ್ಲಕ್ಕಿಗಳೊಂದಿಗೆ ಬೆಂಗಳೂರಿನ ನಾಲ್ಕು ದಿಕ್ಕುಗಳಿಂದ ಮೆರವಣಿಗೆಗಳು ಸಾಗಿ, ವಿಧಾನಸೌಧಕ್ಕೆ ಬರಲಿವೆ. ಪ್ರತಿ ದಿಕ್ಕಿನಲ್ಲೂ ಸ್ಥಳೀಯ ಶಾಸಕರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ ಎಂದು ವಿವರಿಸಿದರು.
ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಜ.27ರಂದು ಕನ್ನಡದ ಧ್ವಜ ಹಾರಾಡಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಎಲ್ಲರಿಗೂ ಕನ್ನಡದ ಧ್ವಜವನ್ನು ಉಚಿತವಾಗಿ ವಿತರಿಸಲಾಗುವುದು ಎಂದರು.
ನಾಡದೇವಿ ಭುವನೇಶ್ವರಿ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಹಬ್ಬದ ರೀತಿಯಲ್ಲಿ ಆಚರಿಸಲಾಗುವುದು. ಸಾರ್ವಜನಿಕರು ಹಾಗೂ ಕನ್ನಡಪರ ಸಂಘಟನೆಗಳು ಪಾಲ್ಗೊಂಡು ಸಂಭ್ರಮ ಹೆಚ್ಚಿಸಬೇಕು.–ಶಿವರಾಜ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಸಚಿವ
ಭುವನೇಶ್ವರಿ ಪ್ರತಿಮೆ ಮಾಹಿತಿ
25 ಅಡಿ; ಭುವನೇಶ್ವರಿ ಕಂಚಿನ ಪ್ರತಿಮೆ ಎತ್ತರ
30 ಅಡಿ; ಕರ್ನಾಟಕ ಕಂಚಿನ ನಕ್ಷೆಯ ಉಬ್ಬು ಶಿಲ್ಪದ ಎತ್ತರ
41 ಅಡಿ; ಒಟ್ಟಾರೆ ನೆಲಮಟ್ಟದಿಂದ ಎತ್ತರ
31.5 ಟನ್; ಭುವನೇಶ್ವರಿ ಪ್ರತಿಮೆ ಕರ್ನಾಟಕ ನಕ್ಷೆಯ ಒಟ್ಟು ತೂಕ
4500 ಚದರ ಅಡಿ; ಭುವನೇಶ್ವರಿ ಪ್ರತಿಮೆ ಫೆಡಸ್ಟಾಲ್ ಉದ್ಯಾನದ ಒಟ್ಟು ವಿಸ್ತೀರ್ಣ
₹21.24 ಕೋಟಿ; ಪ್ರತಿಮೆ ಅನುಷ್ಠಾನಕ್ಕೆ ಒಟ್ಟು ವೆಚ್ಚ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.