ADVERTISEMENT

ನಂದಿನಿ: 10 ಉತ್ಪನ್ನಗಳ ಬಿಡುಗಡೆ

ಗುಡ್‌ಲೈಫ್ ತುಪ್ಪ, ಮಾವು, ಸ್ಟ್ರಾಬೆರಿ ಲಸ್ಸಿ ಪರಿಚಯ, ತುಪ್ಪ ಸುರಕ್ಷೆತೆಗೆ ಕ್ಯೂಆರ್ ಕೋಡ್‌

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 23:30 IST
Last Updated 23 ಜನವರಿ 2026, 23:30 IST
ನಂದಿನಿ ಬ್ರಾಂಡ್‌ನ ನೂತನ ಉತ್ಪನ್ನಗಳನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದರು. ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ, ಶಾಸಕ ಅಶೋಕಕುಮಾರ್ ರೈ, ಕೆಎಂಎಫ್ ಆಡಳಿತಾಧಿಕಾರಿ ಟಿ.ಎಚ್‌.ಎಂ.ಕುಮಾರ್‌ ಉಪಸ್ಥಿತರಿದ್ದರು.
ನಂದಿನಿ ಬ್ರಾಂಡ್‌ನ ನೂತನ ಉತ್ಪನ್ನಗಳನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದರು. ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ, ಶಾಸಕ ಅಶೋಕಕುಮಾರ್ ರೈ, ಕೆಎಂಎಫ್ ಆಡಳಿತಾಧಿಕಾರಿ ಟಿ.ಎಚ್‌.ಎಂ.ಕುಮಾರ್‌ ಉಪಸ್ಥಿತರಿದ್ದರು.   

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಲವು (ಕೆಎಂಎಫ್‌) ಗುಡ್‌ಲೈಫ್‌ ತುಪ್ಪ, ಪ್ರೊಬಯಾಟಿಕ್‌ ಮೊಸರು, ಮೀಡಿಯಂ ಫ್ಯಾಟ್‌ ಪನೀರ್‌, ಮಾವು–ಸ್ಟ್ರಾಬೆರಿ ಲಸ್ಸಿ ಸಹಿತ ನಂದಿನಿಯ 10 ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಉತ್ಪನ್ನಗಳನ್ನು ಶುಕ್ರವಾರ ಬಿಡುಗಡೆ ಮಾಡಿದರು.

ಗುಡ್‌ಲೈಫ್‌ ಹೈ ಅರೋಮಾ ಶುದ್ದ ತುಪ್ಪ ಪರಿಚಯಿಸಲಾಗಿದೆ. ಲೀಟರ್ ತುಪ್ಪಕ್ಕೆ ₹ 760, ಅರ್ಧ ಲೀಟರ್‌ಗೆ ₹360 ನಿಗದಿಪಡಿಸಲಾಗಿದೆ. ನಂದಿನಿ ಶುದ್ದ ತುಪ್ಪವನ್ನು ಒಂದು, ಅರ್ಧ ಲೀಟರ್ ಹಾಗೂ 200 ಮಿಲಿ ಜಾರ್‌ನಲ್ಲಿ  ಪರಿಚಯಿಸಲಾಗಿದೆ. ಇದು ಒಂದು ಲೀಟರ್‌ಗೆ ₹720, ಅರ್ಧ ಲೀಟರ್‌ಗೆ ₹360, 200 ಮಿಲಿಗೆ ₹165 ದರ ಇರಲಿದೆ.

ADVERTISEMENT

ಸಾಮಾನ್ಯ ಹಾಲಿಗಿಂತ ಶೇ 18ರಷ್ಟು ಪ್ರೊಟೀನ್ ಪ್ರಮಾಣ ಹೆಚ್ಚಿರುವ ಎನ್‌ ಪ್ರೊ ಅರ್ಧಲೀಟರ್ ಹಾಲು (₹27),  ಪ್ರೊ ಬಯಾಟಿಕ್‌ 200 ಗ್ರಾಂ ಪ್ಯಾಕ್‌ ಮೊಸರು (₹35), ಪ್ರೊಬಯಾಟಿಕ್‌ ಮಾವು ಹಾಗೂ ಸ್ಟ್ರಾಬೆರಿ ಲಸ್ಸಿ (160 ಮಿಲಿಗೆ ₹15), ಮೀಡಿಯಂ ಫ್ಯಾಟ್‌ ಪನೀರ್‌ 200 ಗ್ರಾಂ (₹90) ಪರಿಚಯಿಸಲಾಗಿದೆ.

ಸಕ್ಕರೆ ಸೇರಿಸಿದ, ತಾಜಾ ಹಾಲಿಗೆ ಪರ್ಯಾಯವಾದ ಡೇರಿ ವೈಟ್ನರ್‌ ಹಾಲಿನ ಪುಡಿ 200 ಗ್ರಾಂ(₹5), 500 ಗ್ರಾಂ(₹90), 1 ಕೆ.ಜಿ (₹355) ಹಾಗೂ 10 ಕೆ.ಜಿ(₹3,400) ಪ್ಯಾಕ್‌ಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಕಡಿಮೆ ಆದಾಯ ಇರುವವರಿಗೂ ಹಾಲಿನ ಉತ್ಪನ್ನ ಸಿಗಲೆಂದು ಹಸುವಿನ ಹಾಲು 160 ಮಿಲಿ (₹10), ಮೊಸರು 140 ಮಿಲಿ (₹10)  ಪರಿಚಯಿಸಲಾಗಿದೆ.

‘ತುಪ್ಪದ ಗುಣಮಟ್ಟವನ್ನು ಖಾತ್ರಿಪಡಿಸುವ ಉದ್ದೇಶದಿಂದ ಮೊದಲ ಬಾರಿಗೆ ನಂದಿನಿ ತುಪ್ಪದ ಜಾರ್‌, ಕವರ್ ಮೇಲೆ ಕ್ಯೂಆರ್ ಕೋಡ್‌ ವ್ಯವಸ್ಥೆಯನ್ನು ಮಾಡಲಾಗಿದ್ದು, ಹಂತ ಹಂತವಾಗಿ ಇತರೆ ಉತ್ಪನ್ನಗಳ ಮೇಲೂ ಈ ವ್ಯವಸ್ಥೆ ಜಾರಿಯಾಗಲಿದೆ’ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.