ADVERTISEMENT

ಬ್ರಾಹ್ಮಣ್ಯ ಸರಿಯಿದ್ದರೆ ಬಸವಣ್ಣ ಏಕೆ ಲಿಂಗ ದೀಕ್ಷೆ ನೀಡುತ್ತಿದ್ದರು: ನಂಜಾವಧೂತ

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 9:29 IST
Last Updated 18 ಜೂನ್ 2022, 9:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬ್ರಾಹ್ಮಣ್ಯದಲ್ಲಿ ಸಮಾನತೆ, ಕರುಣೆ, ಪ್ರೀತಿ ಉಕ್ಕಿ ಹರಿದು ಎಲ್ಲವೂ ಸರಿ ಇದ್ದರೆ ಬಸವಣ್ಣನವರು ಏಕೆ ಬ್ರಾಹ್ಯಣ್ಯವನ್ನು ಧಿಕ್ಕರಿಸಿ ಎಲ್ಲರಿಗೂ ಲಿಂಗದೀಕ್ಷೆ ನೀಡುತ್ತಿದ್ದರು ಎಂದು ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಪೀಠದ ನಂಜಾವಧೂತ ಸ್ವಾಮೀಜಿ ಪ್ರಶ್ನಿಸಿದರು.

ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ರೂಪಿಸಿರುವ ಪರಿಷ್ಕೃತ ಪಠ್ಯಪುಸ್ತಕಗಳನ್ನು ವಿರೋಧಿಸಿ ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಶನಿವಾರ ಆಯೋಜಿಸಿರುವ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಠ್ಯಪುಸ್ತಕಗಳಲ್ಲಿನ ತಪ್ಪು ಸರಿಪಡಿಸಲು ಶಿಕ್ಷಣ ಸಚಿವರಿಗೆ ನಿರ್ದೇಶನ ನೀಡಿರುವುದಾಗಿ ಹೇಳುತ್ತಾರೆ. ಆದರೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಪರಿಷ್ಕೃತ ಪಠ್ಯಪುಸ್ತಕಗಳ ವಿತರಣೆಗೆ ಆದೇಶ ಹೊರಡಿಸಿದ್ದಾರೆ. ಇಂತಹ ನಡೆಯನ್ನು ಒಪ್ಪಿಕೊಂಡರೆ ಮುಂದೆ ಒಂದು ದಿನ ಇವರು ಹೇಳಿದ್ದನ್ನೇ ಸಂವಿಧಾನ ಎಂದು ಒಪ್ಪಬೇಕಾಗಬಹುದು ಎಂದರು.

ADVERTISEMENT

ನಾಡ ಬಾವುಟವನ್ನು ಒಳ ಉಡುಪಿಗೆ ಹೋಲಿಸಿದ ವ್ಯಕ್ತಿಯನ್ನು ಪಠ್ಯಪುಸ್ತಕಗಳ ಪರಿಷ್ಕರಣಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನೇಮಿಸುವಾಗ ಸರ್ಕಾರ ಯೋಚಿಸದಿರುವುದೇ ತಪ್ಪು. ಬಸವಣ್ಣ, ನಾರಾಯಣ ಗುರು ಮುಂತಾದವರಿಗೆ ಗೌರವವೇ ಇಲ್ಲವೆ ಎಂದು ಕೇಳಿದರು.

ಮೆಕಾಲೆ ಸಮಾನ ಶಿಕ್ಷಣ ನೀತಿಯನ್ನು ಜಾರಿಗೊಳಿಸದೇ ಇದ್ದರೆ ನಾವೆಲ್ಲರೂ ಎಲ್ಲೋ ಜೀತದಲ್ಲೇ ಕಳೆಯಬೇಕಿತ್ತು. ಈಗ ಈ ರೀತಿ ಒಂದು ಸಿದ್ಧಾಂತದ ಹೇರಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.‌ಇದು ಹೋರಾಟದ ಆರಂಭ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಪರಿಷ್ಕೃತ ಪಠ್ಯಪುಸ್ತಕಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.