ವಿಜಯೇಂದ್ರ
(ಸಂಗ್ರಹ ಚಿತ್ರ)
ಬೆಂಗಳೂರು: ‘ಮತ ಕಳ್ಳತನ ಮಾಡುವವರು ಯಾರು? ಚುನಾವಣಾ ಅಕ್ರಮ ಎಸಗುವವರು ಯಾರು ಎಂಬುದಕ್ಕೆ ಕರ್ನಾಟಕ ಹೈಕೋರ್ಟ್‌ನ ತೀರ್ಪು ಪುರಾವೆ ಒದಗಿಸಿದೆ. ಮಾಲೂರಿನ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡರ ಶಾಸಕ ಸ್ಥಾನದ ಆಯ್ಕೆಯನ್ನು ಅಸಿಂಧುಗೊಳಿಸಿರುವುದು ಮತ ಕಳ್ಳತನಕ್ಕೆ ಸ್ಪಷ್ಟ ನಿದರ್ಶನ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಹೈಕೋರ್ಟ್ ತೀರ್ಪಿನ ಕುರಿತ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಅವರು, ‘ರಾಹುಲ್ ಗಾಂಧಿ ಅವರು ಕರ್ನಾಟಕದ ಮಹದೇವಪುರ ಕ್ಷೇತ್ರವನ್ನು ಉಲ್ಲೇಖಿಸಿ ಚುನಾವಣಾ ಆಯೋಗದ ಮೇಲೆ ಮತ ಕಳ್ಳತನದ ಆರೋಪ ಮಾಡಿ ದೇಶದೆಲ್ಲೆಡೆ ಸುಳ್ಳಿನ ಕಂತೆ ಹೊತ್ತು ಜನರಲ್ಲಿ ಗೊಂದಲು ಮೂಡಿಸುತ್ತಿರುವಾಗಲೇ ಮತ ಕಳ್ಳರು ಯಾರು ಎಂಬುದು ಬಯಲಿಗೆ ಬಂದಿದೆ’ ಎಂದಿದ್ದಾರೆ.
‘ಮತ ಪತ್ರವಿರಲಿ, ಇವಿಎಂ ಇರಲಿ ಚುನಾವಣಾ ಅಕ್ರಮ ಎಸಗುವುದು, ಮತ ಕಳ್ಳತನ ಮಾಡುವುದು ಹೇಗೆ ಎನ್ನುವುದರಲ್ಲಿ ಕಾಂಗ್ರೆಸ್ಸಿಗರು ನಿಷ್ಣಾತರು. ಚುನಾವಣಾ ನಿಯಮಗಳ ಎದುರು ಚಾಪೆ ಕೆಳಗೆ ನುಸುಳಿ ರಂಗೋಲಿ ಕೆಳಗೆ ತೂರುವ ಕಾಂಗ್ರೆಸಿಗರ ಮತ ಚೋರತನವನ್ನು ಈ ನೆಲದ ಕಾನೂನು ಕುಣಿಕೆ ಬಿಗಿದು ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿ ಹಿಡಿದಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.