ADVERTISEMENT

ಈಡಿಗರ ಹಕ್ಕೊತ್ತಾಯ ಸಮಾವೇಶ: ಮೀಸಲಾತಿ, ಮುಳುಗಡೆ ಸಂತ್ರಸ್ತರ ನೆರವಿಗೆ ಕೂಗು

ಶಿವಮೊಗ್ಗ: ಈಡಿಗ ಸಮುದಾಯದ ಹಕ್ಕೊತ್ತಾಯ ಸಮಾವೇಶ

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 19:14 IST
Last Updated 22 ಜನವರಿ 2023, 19:14 IST
ಶಿವಮೊಗ್ಗದಲ್ಲಿ ಶ್ರೀನಾರಾಯಣಗುರು ವಿಚಾರ ವೇದಿಕೆಯಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನರು – ಪ್ರಜಾವಾಣಿ ಚಿತ್ರ/ ಶಿವಮೊಗ್ಗ ನಾಗರಾಜ್
ಶಿವಮೊಗ್ಗದಲ್ಲಿ ಶ್ರೀನಾರಾಯಣಗುರು ವಿಚಾರ ವೇದಿಕೆಯಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನರು – ಪ್ರಜಾವಾಣಿ ಚಿತ್ರ/ ಶಿವಮೊಗ್ಗ ನಾಗರಾಜ್   

ಶಿವಮೊಗ್ಗ: ಈಡಿಗ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪಿಸಿ ಕೂಡಲೇ ₹500 ಕೋಟಿ ಅನುದಾನ ಮೀಸಲಿರಿಸು ವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಭಾನು ವಾರ ಶ್ರೀನಾರಾಯಣ ಗುರು ವಿಚಾರ ವೇದಿಕೆಯಿಂದ (ಎಸ್‌ಎನ್‌ಜಿವಿ) ಬೃಹತ್ ಹಕ್ಕೊತ್ತಾಯ ಸಮಾವೇಶ ನಡೆಯಿತು.

ಈಡಿಗ, ಬಿಲ್ಲವ, ನಾಮಧಾರಿ ಸೇರಿದಂತೆ ಸಮುದಾಯದ 26 ಉಪ ಪಂಗಡಗಳ ಸಾವಿರಾರು ಮಂದಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಪ್ರವರ್ಗ 2 ‘ಎ’ ಮೀಸಲಾತಿ ಪಟ್ಟಿಗೆ ಪ್ರಬಲ ಸಮುದಾಯಗಳ ಸೇರ್ಪಡೆ ವಿರೋಧಿಸಲಾಯಿತಲ್ಲದೆ, ಶರಾವತಿ ಮುಳುಗಡೆ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಲಾಯಿತು.

ADVERTISEMENT

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರ ಹೆಸರಿಡಬೇಕು. ಸಿಗಂದೂರಿನ ಚೌಡೇಶ್ವರಿ ದೇವಸ್ಥಾನದ ಆಡಳಿತದಲ್ಲಿ ಸರ್ಕಾರ ಅನಗತ್ಯ ಹಸ್ತಕ್ಷೇಪ ಮಾಡಬಾರದು ಎಂಬುದೂ ಒಳಗೊಂಡಂತೆ ಸಮುದಾಯದ ಪ್ರಮುಖ 5 ಹಕ್ಕೊತ್ತಾಯಗಳನ್ನು ಎಸ್‌ಎನ್‌ಜಿವಿ ರಾಜ್ಯ ಘಟಕದ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಂಡಿಸಿದರು.

ಸಮಾವೇಶಕ್ಕೆ ಮುನ್ನ ಇಲ್ಲಿನ ಸಾಗರ ರಸ್ತೆಯ ಈಡಿಗರ ಭವನದಿಂದ ಬಿ.ಎಚ್‌. ರಸ್ತೆಯ ಸೈನ್ಸ್‌ ಮೈದಾನದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆ ಯಿತು. ಶಿವಮೊಗ್ಗ ಹಾಗೂ ಸುತ್ತಲಿನ
ಜಿಲ್ಲೆಗಳಿಂದ ಬಂದಿದ್ದ ಸಮುದಾಯ ದವರು ಹಳದಿ ಬಾವುಟ ಹಿಡಿದು
ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಸಿಗಂದೂರು ದೇವಸ್ಥಾನದ ಧರ್ಮ ದರ್ಶಿ ರಾಮಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶದಲ್ಲಿ ನಿಟ್ಟೂರು ಶ್ರೀನಾರಾಯಣಗುರು ಪೀಠಾಧ್ಯಕ್ಷ ರೇಣುಕಾನಂದ ಸ್ವಾಮೀಜಿ, ನಿಪ್ಪಾಣಿಯ ಅರುಣಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು ಇದ್ದರು.

‘ಮೀಸಲಾತಿ ಪ್ರಮಾಣಕ್ಕೆ ಚ್ಯುತಿ ಇಲ್ಲ’

‘ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರೊಂದಿಗೆ ಸಮುದಾಯದ ಏಳು ಮಂದಿ ಶಾಸಕರು ಚರ್ಚಿಸಿದ್ದೇವೆ. ಪ್ರವರ್ಗ 2 ‘ಎ’ ಅಡಿ ಸಮುದಾಯಕ್ಕೆ ಈಗ ಇರುವ ಮೀಸಲಾತಿ ಪ್ರಮಾಣ ಕಡಿಮೆ ಆಗುವುದಿಲ್ಲ ಎಂಬ ಭರವಸೆ ದೊರೆತಿದೆ. ಕಾನೂನಾತ್ಮಕ ತೊಡಕು ನಿವಾರಿಸಿಕೊಂಡು ಶರಾವತಿ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು. ಈ ಬಾರಿಯ ಬಜೆಟ್‌ನಲ್ಲಿ ನಿಗಮ–ಮಂಡಳಿ ಘೋಷಿಸಲಾಗುವುದು. ಉಳಿದ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ಹಕ್ಕೊತ್ತಾಯಕ್ಕೆ ಪ್ರತಿಕ್ರಿಯಿಸಿದ ಶಾಸಕ ಎಚ್‌. ಹರತಾಳು ಹಾಲಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.