ADVERTISEMENT

370ನೇ ವಿಧಿ ವಿಚಾರದಲ್ಲಿ ಮಾತು ತಪ್ಪಿದ್ದ ಕಾಂಗ್ರೆಸ್‌: ಪ್ರಧಾನಿ ಮೋದಿ ಆರೋಪ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 17:26 IST
Last Updated 19 ಅಕ್ಟೋಬರ್ 2019, 17:26 IST
   

ರೇವರಿ/ಎಲನಾಬಾದ್ (ಹರಿಯಾಣ):‘ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ತೆಗೆದುಹಾಕುತ್ತೇವೆ ಎಂದು ಕಾಂಗ್ರೆಸ್‌ 1964ರಲ್ಲೇ ಹೇಳಿತ್ತು. ಆದರೆ ಆ ಕೆಲಸವನ್ನು ಯಾವತ್ತೂ ಮಾಡಲಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಇಲ್ಲಿ ಶನಿವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್‌ ವಿರುದ್ಧ ಅವರು ಹರಿಹಾಯ್ದರು.

‘1964ರಲ್ಲಿ ಸಂಸತ್ತಿನಲ್ಲಿ ಚರ್ಚೆ ನಡೆಯುವಾಗ, 370ನೇ ವಿಧಿಯನ್ನು ರದ್ದು ಮಾಡಬೇಕು ಎಂಬ ಬೇಡಿಕೆ ಎದ್ದಿತ್ತು. ಈ ವಿಚಾರದಲ್ಲಿ ಕಾಂಗ್ರೆಸ್‌ನಲ್ಲೇ ಎರಡು ಬಣಗಳಾಗಿದ್ದವು. ಕಾಂಗ್ರೆಸ್‌ನ ನಾಯಕರು ಸಂಸದರ ಎದುರು ಕೈಜೋಡಿಸಿ, ‘ಒಂದು ವರ್ಷದಲ್ಲಿ ಈ ವಿಧಿಯನ್ನು ತೆಗೆದುಹಾಕುತ್ತೇವೆ’ ಎಂದು ಭರವಸೆ ನೀಡಿದ್ದರು. ಆದರೆ ಆ ಕೆಲಸ ಆಗಲೇ ಇಲ್ಲ’ ಎಂದು ಮೋದಿ ವಿವರಿಸಿದ್ದಾರೆ.

ADVERTISEMENT

‘ಕಾಂಗ್ರೆಸ್‌ನ ತಪ್ಪು ನೀತಿಗಳು ದೇಶವನ್ನು ಹಾಳುಮಾಡಿದವು. ದೆಹಲಿಯ ಗದ್ದುಗೆ ಏರುವವರ ಹಿತಾಸಕ್ತಿಗಾಗಿ ಕಾಶ್ಮೀರಿ ಜನರನ್ನು ಬಲಿಹಾಕಬೇಕೆ? ಕಾಶ್ಮೀರ ಮುಖ್ಯವೋ ಅಥವಾ ಪ್ರಧಾನಿ ಹುದ್ದೆ ಮುಖ್ಯವೋ? ಪ್ರಧಾನಿ ಬರುತ್ತಾನೆ ಹೋಗುತ್ತಾನೆ. ಆದರೆ ಕಾಶ್ಮೀರ ಮುಖ್ಯ ಎಂದುಇಡೀ ಭಾರತವೇ ಹೇಳುತ್ತಿದೆ’ ಎಂದು ಮೋದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.