ADVERTISEMENT

ನರೇಂದ್ರ ಮೋದಿ ರೂಪದಲ್ಲಿ ಸ್ವಾಮಿ ವಿವೇಕಾನಂದರ ಪುನರ್ಜನ್ಮ: ಸಚಿವೆ ಶಶಿಕಲಾ ಜೊಲ್ಲೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2022, 9:45 IST
Last Updated 2 ಫೆಬ್ರುವರಿ 2022, 9:45 IST
ಸಮಾರಂಭದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿದರು
ಸಮಾರಂಭದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿದರು   

ಹೊಸಪೇಟೆ (ವಿಜಯನಗರ): ಪ್ರಧಾನಿ ನರೇಂದ್ರ ಮೋದಿಯವರ ರೂಪದಲ್ಲಿ ಸ್ವಾಮಿ ವಿವೇಕಾನಂದರ ಪುನರ್ಜನ್ಮವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ‌ ತಿಳಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ವಿವೇಕಾನಂದರು ದೇಶದ ಸಂಸ್ಕೃತಿ, ಪರಂಪರೆಯನ್ನು ವಿಶ್ವಕ್ಕೆ‌ ಪರಿಚಯಿಸಿದ್ದರು. ಅದೇ ಕೆಲಸ ಮೋದಿಯವರು ಮಾಡುತ್ತಿದ್ದಾರೆ. ಭಾರತಕ್ಕೆ ವಿಶ್ವಗುರುವಿನ ಸ್ಥಾನ ತಂದುಕೊಟ್ಟಿದ್ದಾರೆ ಎಂದರು.

ADVERTISEMENT

ಮೋದಿಅವರ ನೇತೃತ್ವದಲ್ಲಿ ಭಾರತ ಎಲ್ಲ ರಂಗಗಳಲ್ಲಿ ಅಭಿವೃದ್ಧಿ ಕಾಣುತ್ತಿದೆ. ದೇಶ ಸುಭದ್ರವಾಗಿದೆ. ಅಟಲ್ ಬಿಹಾರಿ ವಾಜಪೇಯಿ ನಂತರ ದೇಶ ಕಂಡ ಸಮರ್ಥ ಪ್ರಧಾನಿ ಮೋದಿಯವರು ಎಂದು ಹೇಳಿದರು.

ಬರೀ ರಾಜಕಾರಣ ಆಗಬಾರದು. ಸಮಾಜಮುಖಿ ರಾಜಕಾರಣ ಆಗಬೇಕು. ಏನು ಮಾಡಬೇಕು ಅಂದುಕೊಳ್ಳುತ್ತೇವೆ ಅದನ್ನು ಅವಕಾಶ ಸಿಕ್ಕಾಗ ಮಾಡಬೇಕು ಎಂದು ಬಸವಣ್ಣನವರ ವಚನದ ನಿದರ್ಶನದೊಂದಿಗೆ ವಿವರಿಸಿದರು.

ಫೆ. 4 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಭೆ ನಡೆಸುವರು. ನಾನು ಎಲ್ಲರ ಸಹಕಾರದೊಂದಿಗೆ ಐತಿಹಾಸಿಕ, ಧಾರ್ಮಿಕವಾಗಿ‌ ಪ್ರಾಮುಖ್ಯತೆ ಹೊಂದಿರುವ ವಿಜಯನಗರ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ಮಾತನಾಡಿ, ಸಚಿವರಾದ ಶಶಿಕಲಾ ಜೊಲ್ಲೆ, ಆನಂದ್ ಸಿಂಗ್ ಅವರಿಂದ ಜಿಲ್ಲೆ ಹೆಚ್ಚು ಅಭಿವೃದ್ಧಿ ಕಾಣುತ್ತದೆ ಎಂಬ ಭರವಸೆ ಇದೆ. ಅದಕ್ಕೆ ಎಲ್ಲ‌ ರೀತಿಯ ಸಹಕಾರ‌ ಪಕ್ಷ ನೀಡಲಿದೆ ಎಂದರು.

ಜಿಲ್ಲೆಗೆ ಶಶಿಕಲಾ ಜೊಲ್ಲೆ ಅವರು ಬಂದಿರುವುದು ಸಂತಸದ ಸಂಗತಿ. ಮಹಿಳೆಯರು ಯಾರಿಗಿಂತ ಕಡಿಮೆ ಇಲ್ಲ ಎನ್ನುವುದು ಇತಿಹಾಸದಿಂದ ಅರಿಯಬಹುದು. ಎಲ್ಲ ಮಹಿಳೆಯರು ಅವರಿಗೆ ಸಹಕಾರ ಕೊಟ್ಟು ಜಿಲ್ಲೆಯ ಅಭಿವೃದ್ಧಿಗೆ ದುಡಿಯಬೇಕು ಎಂದು ಜಿಲ್ಲಾ ಉಪಾಧ್ಯಕ್ಷೆ ಕವಿತಾ ಈಶ್ವರ್ ಸಿಂಗ್ ಹೇಳಿದರು.

ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಸುವರ್ಣ, ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ, ಮಂಡಲ ಅಧ್ಯಕ್ಷರಾದ ಬಸವರಾಜ ನಾಲತ್ವಾಡ, ಕವಿತಾ, ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ಕಿರಣ್, ಮುಖಂಡರಾದ ಶಶಿಧರ ಸ್ವಾಮಿ, ಪ್ರಿಯಾಂಕ ಜೈನ್, ದಯಾನಂದ, ಸಾಲಿ ಸಿದ್ದಯ್ಯ ಸ್ವಾಮಿ, ಟಿಂಕರ್ ರಫೀಕ್ಹುಡಾ ಅಧ್ಯಕ್ಷ ಅಶೋಕ್ ಜೀರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.