ADVERTISEMENT

ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಕಾರ್ಯಪಡೆ ಜೊತೆ ಸಚಿವರ ಸಭೆ

3 ವರ್ಷಗಳಲ್ಲಿ ಸಂಶೋಧನೆಗೆ 6, ಬೋಧನೆಗೆ 10 ಪ್ರತ್ಯೇಕ ವಿವಿ; ಜಿಲ್ಲೆಗೊಂದು ಸ್ವಾಯತ್ತ ಶಿಕ್ಷಣ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 12:07 IST
Last Updated 17 ಆಗಸ್ಟ್ 2020, 12:07 IST
ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ
ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ   

ಬೆಂಗಳೂರು: 2030ರ ವೇಳೆಗೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ನಿಗದಿಪಡಿಸಿರುವ ಎಲ್ಲ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ, ಮುಂದಿನ ಮೂರು ವರ್ಷಗಳಲ್ಲಿ 6 ಸಂಶೋಧನಾ ಕೇಂದ್ರಿತ ವಿಶ್ವವಿದ್ಯಾಲಯ, 10 ಬೋಧನಾ ಕೇಂದ್ರಿತ ವಿಶ್ವವಿದ್ಯಾಲಯ ಹಾಗೂ 34 ಸ್ವಾಯತ್ತ ಶಿಕ್ಷಣ ಸಂಸ್ಥೆಗಳನ್ನು ತೆರೆಯಲಿದೆ.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಕುರಿತು ರಚಿಸಲಾಗಿರುವ ಕಾರ್ಯಪಡೆಯ ಜತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.‌ ಸುರೇಶ್‌ಕುಮಾರ್‌ ಜತೆ ಸೋಮವಾರ ಚರ್ಚೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ, ‘ಹೊಸದಾಗಿ ಆರಂಭವಾಗುವ ಈ ಸಂಸ್ಥೆಗಳ ಮೂಲಕ ಪ್ರತಿ ಜಿಲ್ಲೆಯಲ್ಲೂ ಗುಣಮಟ್ಟದ ಶಿಕ್ಷಣ, ಬೋಧನೆ ಹಾಗೂ ಸಂಶೋಧನೆಗೆ ಪೂರಕವಾದ ಮುಕ್ತ ಅವಕಾಶ ಕಲ್ಪಿಸಲಾಗುವುದು’ ಎಂದರು.

‘ಈ ಕಾರ್ಯಪಡೆ ನಾಲ್ಕೈದು ದಿನಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಬಗ್ಗೆ ಒಂದು ಕರಡು ಪ್ರತಿಯನ್ನು ಸರ್ಕಾರಕ್ಕೆ ನೀಡಲಿದೆ. ಈ ತಿಂಗಳ 29ರೊಳಗೆ ನೀತಿಯ ಸಮಗ್ರ ಜಾರಿ ಬಗ್ಗೆ ಪರಿಪೂರ್ಣ ನೀಲನಕ್ಷೆ ಸಲ್ಲಿಸಲಿದೆ. ಸಮಾಜದ ಎಲ್ಲ ಸಮಸ್ಯೆಗಳಿಗೂ ಶಿಕ್ಷಣವೇ ಸಂಜೀವಿನಿ ಎಂಬುದು ಸರ್ಕಾರದ ಬಲವಾದ ನಂಬಿಕೆ. ಈ ನಿಟ್ಟಿನಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣದ ಎಲ್ಲ ಹಂತಗಳಲ್ಲಿಯೂ ಏನೆಲ್ಲ ಬದಲಾವಣೆ ತರಬೇಕು ಎಂಬುದನ್ನು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಆಮೂಲಾಗ್ರವಾಗಿ ತಿಳಿಸಲಾಗಿದೆ. ಈ ನಿಟ್ಟಿನಲ್ಲಿ ಕಾರ್ಯಪಡೆ ಜತೆ ಮಹತ್ವದ ಸಮಾಲೋಚನೆ ನಡೆಸಿ ಮುಂದಿನ ಕಾರ್ಯಕ್ರಮಗಳ ದಿಕ್ಸೂಚಿಯನ್ನು ಅಂತಿಮಗೊಳಿಸಲಾಗುವುದು’ ಎಂದು ಅವರು ಹೇಳಿದರು.

ADVERTISEMENT

ಕ್ಷಿಪ್ರಗತಿಯಲ್ಲಿ ಕ್ರಮ: ‘ಕಾರ್ಯಪಡೆ ನೀಲನಕ್ಷೆಯನ್ನು ಸಲ್ಲಿಕೆಯಾದ ಬಳಿಕ ಮುಖ್ಯಮಂತ್ರಿ ಮತ್ತು ಸಚಿವ ಸುರೇಶ್‌ಕುಮಾರ್‌ ಜತೆ ಸಮಾಲೋಚನೆ ನಡೆಸಲಾಗುವುದು. ನೀತಿಯ ಜಾರಿಗೆ ಅಗತ್ಯವಾಗಿರುವ ಕಾನೂನು ತಿದ್ದುಪಡಿ, ಆಡಳಿತ ಸುಧಾರಣೆ ಮತ್ತು ಸಂಪನ್ಮೂಲ ಕ್ರೋಡೀಕರಣದ ಬಗ್ಗೆ ಕ್ಷಿಪ್ರಗತಿಯಲ್ಲಿ ನಿರ್ಧಾರಗಳನ್ನು ಕೈಗೊಳ್ಳಲಾಗುವುದು. ರಾಜಕೀಯ ಇಚ್ಛಾಶಕ್ತಿ ಮತ್ತು ಬದ್ಧತೆಯಿಂದ ಈ ನೀತಿ ಜಾರಿ ಮಾಡಲಾಗುವುದು’ ಎಂದು ಅವರು ತಿಳಿಸಿದರು.

ಟಾರ್ಗೆಟ್‌ – 2030: ‘ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಂಪೂರ್ಣವಾಗಿ ಜಾರಿ ಮಾಡಿ, ಗುರಿ ತಲುಪಲು 10 ವರ್ಷಗಳ ಗುರಿ ಹಾಕಿಕೊಳ್ಳಲಾಗಿದೆ. ಅದನ್ನು ‘ಟಾರ್ಗೆಟ್‌– 2030’ ಎಂದು ಪರಿಗಣಿಸಿದ್ದೇವೆ. ನೀತಿ ಅನುಷ್ಠಾನದ ಎಲ್ಲ ಫಲಿತಾಂಶಗಳು ಈ ಅವಧಿಯಲ್ಲಿ ಗೋಚರ ಆಗಲೇಬೇಕು. ಆ ನಿಟ್ಟಿನಲ್ಲಿ ಸರ್ಕಾರ ಎಲ್ಲ ಕಾರ್ಯಸೂಚಿಯನ್ನು ಹಾಕಿಕೊಳ್ಳುತ್ತಿದೆ. ಸದ್ಯಕ್ಕೆ ರಾಜ್ಯವು ನೆರೆ ಮತ್ತು ಕೋವಿಡ್‌ ಬಿಕ್ಕಟ್ಟಿಗೆ ಗುರಿಯಾಗಿದೆ. ಅದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮುಂದಡಿ ಇಡಲಾಗುವುದು. ಆ ದಾರಿಯಲ್ಲಿ ಸರ್ಕಾರಕ್ಕೆ ಕಾರ್ಯಪಡೆ ನೆರವಾಗಲಿದೆ’ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ರಾಜ್ಯವ್ಯಾಪಿ ಆಂದೋಲನ: ‘ಒಂದು ವರ್ಷ ರಾಜ್ಯದೆಲ್ಲೆಡೆ ಶಿಕ್ಷಣ ನೀತಿಯದ್ದೇ ಧ್ಯಾನ, ಚರ್ಚೆ ನಡೆಯಬೇಕು. ಎಲ್ಲ ರಾಜಕೀಯ ಮುಖಂಡರು, ಸಂಘ- ಸಂಸ್ಥೆಗಳು ಹಾಗೂ ಸಮಾಜದ ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ನೀತಿಯನ್ನು ಜಾರಿ ಮಾಡಲಾಗುವುದು. ಅದಕ್ಕಾಗಿ ರಾಜ್ಯವ್ಯಾಪಿ ಆಂದೋಲನ ಹಮ್ಮಿಕೊಳ್ಳಲಾಗುವುದು. ಈ ಆಂದೋಲನದಲ್ಲಿ ಇಡೀ ಸರ್ಕಾರವೇ ಭಾಗಿಯಾಗಲಿದ್ದು, ಜೊತೆಯಲ್ಲಿ, ಶಿಕ್ಷಣ ತಜ್ಞರು ಮತ್ತು ಕಾರ್ಯಪಡೆ ಸದಸ್ಯರೆಲ್ಲರೂ ಇರುತ್ತಾರೆ. ಕಾರ್ಯಪಡೆಯ ನೀಲನಕ್ಷೆ ಸಿಕ್ಕಿದೆ ಕೂಡಲೇ ಆಂದೋಲನ ಆರಂಭಿಸಲಾಗುವುದು. ಎಲ್ಲ ತಯಾರಿ ಮತ್ತು ಪೂರ್ವಸಿದ್ಧತೆಯನ್ನು ಮಾಡಿಕೊಂಡೇ ಮುಂದಿನ ಹೆಜ್ಜೆ ಇಡಲಾಗುವುದು’ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಉನ್ನತ ಗುಣಮಟ್ಟದ ಶಿಕ್ಷಣ: ‘ಸಭೆಯಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ ಕಾರ್ಯಪಡೆ ಸದಸ್ಯರು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಕೊಡುವ ಎಲ್ಲ ವ್ಯವಸ್ಥೆ ಆಗಬೇಕು. ಅದಕ್ಕಾಗಿ ದಕ್ಷತೆಯುಳ್ಳ, ಉತ್ತಮ ಗುಣಮಟ್ಟದ ಹಾಗೂ ಬಹುಶಿಸ್ತಿನ ಶಿಕ್ಷಣ ಸಂಸ್ಥೆಗಳು ಬರುವಂತೆ ನೋಡಿಕೊಳ್ಳಬೇಕು. ಹಾಲಿ ಇರುವ ಶಿಕ್ಷಣ ಸಂಸ್ಥೆಗಳನ್ನು ಆ ಮಟ್ಟಕ್ಕೆ ಎತ್ತರಿಸಬೇಕು. ಅದೇ ಕಾಲೇಜುಗಳನ್ನು ಈಗಿನ ಸ್ಥಿತಿಯಿಂದ ಮೇಲೆತ್ತಿ ಸುಧಾರಿಸಬೇಕು. ಅತ್ಯಂತ ಗುಣಮಟ್ಟದ ಸಂಶೋಧನೆ ಮತ್ತು ಬೋಧನೆಗೆ ವ್ಯವಸ್ಥೆ ಮಾಡುವಂತೆ ಸಲಹೆ ನೀಡಿದರು’ ಎಂದು ಅವರು ಹೇಳಿದರು.

ಶಾಸಕ ಅರುಣ ಶಹಾಪುರ, ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಸದಸ್ಯ ಕಟ್ಟಿಮನಿ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ರಚಿಸಿರುವ ಕಾರ್ಯಪಡೆ ಅಧ್ಯಕ್ಷ ಎಸ್‌.ವಿ. ರಂಗನಾಥ, ಸದಸ್ಯರಾದ ವಿಶ್ರಾಂತ ಕುಲಪತಿ ಪ್ರೊ. ಬಿ. ತಿಮ್ಮೇಗೌಡ, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಅನುರಾಗ್‌ ಬೆಹರ್‌, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವೇಣುಗೋಪಾಲ್‌, ಸೃಷ್ಟಿ ಸಂಸ್ಥೆ ನಿರ್ದೇಶಕಿ ಡಾ. ಗೀತಾ ನಾರಾಯಣನ್‌, ಪದವಿ ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್‌ ಸಭೆಯಲ್ಲಿದ್ದರು. ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ ಅವರು ವರ್ಚುಯಲ್‌ ಮೂಲಕ ಹಾಜರಾಗಿದ್ದರು.

ಯುಜಿಸಿ ಸದಸ್ಯರಾಗಿ ನೇಮಕವಾದ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿಯ ಸದಸ್ಯರೂ ಆಗಿರುವ ಪ್ರೊ. ಎಂ.ಕೆ. ಶ್ರೀಧರ್‌ ಹಾಗೂ ಅನಂತಪುರ ಸೆಂಟ್ರಲ್‌ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕವಾಗಿರುವ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಎಸ್‌.ಎ. ಕೋರಿ ಅವರನ್ನು ಇದೇ ವೇಳೆ ಉಪ ಮುಖ್ಯಮಂತ್ರಿ ಗೌರವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.