ADVERTISEMENT

ರಾಜ್ಯದ ಜನತೆಯಲ್ಲಿ ರಕ್ತಹೀನತೆ ಸಮಸ್ಯೆ ಹೆಚ್ಚಳ

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿಯಲ್ಲಿ ಬಹಿರಂಗ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2020, 19:31 IST
Last Updated 13 ಡಿಸೆಂಬರ್ 2020, 19:31 IST
ಕಬ್ಬಿಣಾಂಶದ ಮಾತ್ರೆಗಳು
ಕಬ್ಬಿಣಾಂಶದ ಮಾತ್ರೆಗಳು    

ಬೆಂಗಳೂರು: ರಾಜ್ಯದಲ್ಲಿ ಮಕ್ಕಳು ಸೇರಿದಂತೆ ವಿವಿಧ ವಯೋಮಾನದವರಲ್ಲಿ ರಕ್ತಹೀನತೆ ಸಮಸ್ಯೆ ಹೆಚ್ಚಳವಾಗಿರುವುದು ಕೇಂದ್ರ ಆರೋಗ್ಯ ಸಚಿವಾಲಯ ನಡೆಸಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019–20ರ ವರದಿಯಿಂದ ತಿಳಿದುಬಂದಿದೆ.

ಕೇಂದ್ರ ಆರೋಗ್ಯ ಸಚಿವಾಲಯವು ಮೊದಲ ಹಂತದಲ್ಲಿ ಕರ್ನಾಟಕ ಒಳಗೊಂಡಂತೆ 22 ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿ, ವರದಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ 2019ರ ಜು.10 ರಿಂದ ಡಿ.11ರವರೆಗೆ ನೀಲ್ಸನ್ ಇಂಡಿಯಾ ಪ್ರೈ.ಲಿ. ಏಜನ್ಸಿ ಸಹಯೋಗದಲ್ಲಿ ಸಮೀಕ್ಷೆ ನಡೆಸಲಾಗಿದ್ದು, 26,574 ಮನೆಗಳು, 30,455 ಮಹಿಳೆಯರು ಮತ್ತು 4,516 ಪುರುಷರಿಂದ ಮಾಹಿತಿ ಸಂಗ್ರಹಿಸಲಾಗಿದೆ.

2015–16ನೇ ಸಾಲಿನ ಸಮೀಕ್ಷೆಯಲ್ಲಿ 6ರಿಂದ 59 ತಿಂಗಳೊಳಗಿನಶೇ 60.9 ರಷ್ಟು ಮಕ್ಕಳು ರಕ್ತ ಹೀನತೆಯಿಂದ ಬಳಲುತ್ತಿರುವುದು ಪತ್ತೆಯಾಗಿತ್ತು. ಈಗ ಆ ಪ್ರಮಾಣವು ಶೇ 65.5ಕ್ಕೆ ಏರಿಕೆಯಾಗಿದೆ. ಅದೇ ರೀತಿ, 15 ರಿಂದ 49 ವರ್ಷದೊಳಗಿನ ಮಹಿಳೆಯರಲ್ಲಿ ಶೇ 44.8 ರಿಂದ ಶೇ 47.8ಕ್ಕೆ ಹಾಗೂ ಪುರುಷರಲ್ಲಿ ಶೇ 18.3ರಿಂದ ಶೇ 19.6ಕ್ಕೆ ಹೆಚ್ಚಳವಾಗಿದೆ. ಒಂದು ಸಾವಿರ ಜೀವಂತ ಜನನದಲ್ಲಿ ಶೇ 26.9 ಇದ್ದ ಮರಣ ಪ್ರಮಾಣ, ಶೇ 25.4ಕ್ಕೆ ಇಳಿಕೆಯಾಗಿದೆ.

ADVERTISEMENT

12 ತಿಂಗಳು ದುಡಿಯುವ ಮಹಿಳೆಯರ ಸಂಖ್ಯೆ ಹೆಚ್ಚಳ: ಕಳೆದ ನಾಲ್ಕು ವರ್ಷಗಳ ಹಿಂದೆ ಶೇ 80.4ರಷ್ಟು ವಿವಾಹಿತ ಮಹಿಳೆಯರು ಕೌಟುಂಬಿಕ ನಿರ್ಣಯಗಳಲ್ಲಿ ಭಾಗಿಯಾಗುತ್ತಿದ್ದರು. ಈಗ ಆ ಪ್ರಮಾಣ ಶೇ 82.7ಕ್ಕೆ ಏರಿಕೆಯಾಗಿದೆ. ಆರ್ಥಿಕ ಸ್ವಾವಲಂಬನೆ ಸಾಧಿಸಲು ವರ್ಷದ 12 ತಿಂಗಳೂ ದುಡಿಯುವ ಮಹಿಳೆಯರ ಸಂಖ್ಯೆ ಶೇ 37ಕ್ಕೆ ಹೆಚ್ಚಳವಾಗಿದೆ. 2016ರಲ್ಲಿ ಈ ಪ್ರಮಾಣ ಶೇ 29.1 ರಷ್ಟಿತ್ತು. ಕುಟುಂಬದ ಸಹ ಸದಸ್ಯರೊಂದಿಗೆ ತಮ್ಮ ಹೆಸರಿಗೆ ಮನೆ ಹಾಗೂ ಭೂಮಿಯನ್ನು ಹೊಂದಿರುವ ಮಹಿಳೆಯರ ಸಂಖ್ಯೆ ಶೇ 67.6ರಷ್ಟಿದೆ. ಶೇ 88.7 ರಷ್ಟು ಮಹಿಳೆಯರು ಬ್ಯಾಂಕ್‌ ಖಾತೆ ಹಾಗೂ ಶೇ 61.8ರಷ್ಟು ಮಹಿಳೆಯರು ಸ್ವಂತ ಮೊಬೈಲ್ ಫೋನ್ ಹೊಂದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಲಿಂಗಾನುಪಾತ ಪ್ರಮಾಣ ಏರಿಕೆ
2015–16ನೇ ಸಾಲಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಪ್ರತಿ ಸಾವಿರ ಪುರುಷರಿಗೆ 979 ಮಹಿಳೆಯರಿದ್ದರು. ಆದರೆ, ಈಗ ಆ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಿದ್ದು, ನೂತನ ಸಮೀಕ್ಷೆಯ ವರದಿಯ ಪ್ರಕಾರ ಪ್ರತಿ ಸಾವಿರ ಪುರುಷರಿಗೆ 1,034 ಮಹಿಳೆಯರಿದ್ದಾರೆ. ನಾಲ್ಕು ವರ್ಷಗಳ ಅವಧಿಯಲ್ಲಿ ಲಿಂಗಾನುಪಾತದಲ್ಲಿ ಸುಧಾರಣೆ ಕಂಡಿದ್ದು, ಪ್ರತಿ ಸಾವಿರ ಪುರುಷರಿಗೆ ಗ್ರಾಮೀಣ ಪ್ರದೇಶದಲ್ಲಿ 1,035 ಹಾಗೂ ನಗರ ಪ್ರದೇಶದಲ್ಲಿ 1,034 ಮಹಿಳೆಯರಿದ್ದಾರೆ.

ಒಂದು ಸಾವಿರ ಗಂಡು ಮಕ್ಕಳ ಜನನಕ್ಕೆ ಹೋಲಿಸಿದಲ್ಲಿ 1,063 ಹೆಣ್ಣು ಮಕ್ಕಳು ನಗರ ಪ್ರದೇಶದಲ್ಲಿ ಜನಿಸಿದರೆ, ಗ್ರಾಮೀಣ ಪ್ರದೇಶದಲ್ಲಿ 931 ಹೆಣ್ಣು ಮಕ್ಕಳು ಜನಿಸಿವೆ. ಬಾಲ್ಯ ವಿವಾಹ ಸೇರಿದಂತೆ ವಿವಿಧ ಕಾರಣಗಳಿಂದ ಚಿಕ್ಕ ವಯಸ್ಸಿನಲ್ಲಿಯೇ (15 ರಿಂದ 19 ವರ್ಷ) ತಾಯಂದಿರಾಗುತ್ತಿರುವವರ ಸಂಖ್ಯೆ ಇಳಿಕೆ ಕಂಡಿದೆ. ನಾಲ್ಕು ವರ್ಷಗಳ ಹಿಂದೆ ಶೇ 7.8ರಷ್ಟು ಮಂದಿ ಚಿಕ್ಕ ವಯಸ್ಸಿನಲ್ಲಿಯೇ ತಾಯಂದಿರಾಗಿದ್ದರು. ಈಗ ಆ ಪ್ರಮಾಣ ಶೇ 5.4ಕ್ಕೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.