ADVERTISEMENT

ತೋಟಗಾರಿಕೆ ಬೆಳೆಗಳ ಉತ್ಪಾದನೆಯಲ್ಲಿ ಹೆಚ್ಚಳ: ನರೇಂದ್ರ ಸಿಂಗ್ ತೋಮರ್

ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ಕೇಂದ್ರ ಕೃಷಿ ಸಚಿವ ತೋಮರ್ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 21:45 IST
Last Updated 22 ಫೆಬ್ರುವರಿ 2023, 21:45 IST
ರಾಷ್ಟ್ರೀಯ ತೋಟಗಾರಿಕೆ ಮೇಳದ ವಸ್ತುಪ್ರದರ್ಶನದಲ್ಲಿ ಯುವತಿಯರಿಂದ ತರಕಾರಿ ತಳಿಗಳ ಕುರಿತ ಚರ್ಚೆ. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ
ರಾಷ್ಟ್ರೀಯ ತೋಟಗಾರಿಕೆ ಮೇಳದ ವಸ್ತುಪ್ರದರ್ಶನದಲ್ಲಿ ಯುವತಿಯರಿಂದ ತರಕಾರಿ ತಳಿಗಳ ಕುರಿತ ಚರ್ಚೆ. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ   

ಬೆಂಗಳೂರು: ‘ದೇಶದಲ್ಲಿ ಕಳೆದ 15 ವರ್ಷಗಳ ಅವಧಿಯಲ್ಲಿ ತೋಟಗಾರಿಕೆ ಬೆಳೆಗಳ ಉತ್ಪಾದನೆ ಶೇ 38.5ರಷ್ಟು ಹೆಚ್ಚಾಗಿದೆ’ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದರು.

ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರ (ಐಐಎಚ್‌ಆರ್‌) ಆಯೋಜಿಸಿರುವ ನಾಲ್ಕು ದಿನಗಳ ‘ರಾಷ್ಟ್ರೀಯ ತೋಟಗಾರಿಕೆ ಮೇಳ’ವನ್ನು ವರ್ಚ್ಯುವಲ್‌ ಆಗಿ ಉದ್ಘಾಟಿಸಿ ಅವರು ಮಾತನಾಡಿದರು.

‘ತೋಟಗಾರಿಕಾ ಬೆಳೆಗಳ ಉತ್ಪಾದನೆಯ ತ್ವರಿತ ಹೆಚ್ಚಳವು ದೇಶದ ಪೌಷ್ಟಿಕಾಂಶದ ಭದ್ರತೆಯ ನಡುವಿನ ಅಂತರವನ್ನು ಕಡಿಮೆ ಮಾಡಲಿದೆ. ಜಾಗತಿಕ ಸರಾಸರಿಗೆ ಅನುಗುಣವಾಗಿ 2023-24ನೇ ಕೇಂದ್ರ ಬಜೆಟ್‌ನಲ್ಲಿ ಕೃಷಿ ಮತ್ತು ತೋಟಗಾರಿಕಾ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಅನುದಾನ ಮೀಸಲಿಡಲಾಗಿದೆ’ ಎಂದರು.

ADVERTISEMENT

‘ದೇಶದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿರುವ ಐಐಎಚ್‌ಆರ್‌ ತೋಟಗಾರಿಕೆ ಕ್ಷೇತ್ರಕ್ಕೆ ವಾರ್ಷಿಕ ₹30,051 ಕೋಟಿಗೂ ಹೆಚ್ಚು ಕೊಡುಗೆ ನೀಡುತ್ತಿದೆ. ಸ್ವಾಲಂಬನೆಗಾಗಿ ನವೀನ ತೋಟಗಾರಿಕೆ ಎಂಬ ವಿಷಯದಡಿ ಆಯೋಜಿಸಿರುವ ಮೇಳದಲ್ಲಿ ನೂತನ ತಂತ್ರಜ್ಞಾನಗಳ ಬಗ್ಗೆ ರೈತರು ಮತ್ತು ಪಾಲುದಾರರಲ್ಲಿ ಅರಿವು ಮೂಡಿಸಲು ಸಹಕಾರಿಯಾಗಲಿದೆ’ ಎಂದು ಹೇಳಿದರು.

ಮೊದಲ ದಿನ ರೈತರು, ಶಾಲಾ–ಕಾಲೇಜು ವಿದ್ಯಾರ್ಥಿಗಳು, ಸೇರಿ ಸಾವಿರಾರೂ ಜನ ಮೇಳದಲ್ಲಿ ಭಾಗವಹಿಸಿದರು. ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮತ್ತು ಛತ್ತೀಸಗಡ ಸೇರಿ ಹಲವಾರು ರಾಜ್ಯಗಳು ಸಂಶೋಧಿಸಿದ ಹೊಸ ತಳಿ ಮತ್ತು ತಂತ್ರಜ್ಞಾನಗಳು ಗಮನ ಸೆಳೆದವು.

ಐಐಎಚ್‌ಆರ್ ಅಭಿವೃದ್ಧಿ ಪಡಿಸಿರುವ ಹಣ್ಣಿನ ಬೆಳೆಗಳು, ಔಷಧೀಯ ಮತ್ತು ಸಂಶೋಧನಾ ಬೆಳೆಗಳನ್ನು ಸಮೃದ್ಧವಾಗಿ ಬೆಳೆಸಲಾಗಿದೆ. ರೋಗ ನಿರೋಧಕ ಮೆಣಸಿನಕಾಯಿ, ಬದನೆಕಾಯಿ, ಬೆಂಡೆಕಾಯಿ ಹೊಸ ತಳಿಗಳನ್ನು ರೈತರು ಕುತೂಹಲದಿಂದ ವೀಕ್ಷಿಸಿದರು. 200ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗಿದೆ. ಫುಡ್ ಕೋರ್ಟ್ ವ್ಯವಸ್ಥೆಯೂ ಇದೆ.

ಕೊಬ್ಬರಿ ಪೇಸ್ಟ್, ಕ್ರಿಕೆಟ್‌ ಬಾಲ್ ಸಪೋಟ

ಕೊಬ್ಬರಿ ಪೇಸ್ಟ್‌, ಚಿಪ್ಸ್‌ ಸೇರಿ ಇದಕ್ಕೆ ಸಂಬಂಧಿಸಿದ ಹಲವಾರು ಮೌಲ್ಯವರ್ಧಿತ ಉತ್ಪನ್ನಗಳು ಈ ಮೇಳದಲ್ಲಿ ರೈತರ ಗಮನ ಸೆಳೆದವು.

ತಮಿಳುನಾಡಿನ ಕೃಷಿ ವಿಶ್ವವಿದ್ಯಾಲಯದ ಮಳಿಗೆಯಲ್ಲಿ ಬಾಳೆ ಮತ್ತು ಸಪೋಟ ಹಣ್ಣಿಗಳ ಅಭಿವೃದ್ಧಿ ಪಡಿಸಿದ ವಿವಿಧ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇದರಲ್ಲಿ ಹೆಚ್ಚು ಇಳುವರಿ ನೀಡುವ ಸಪೋಟ ತಳಿಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ಅದು ನೋಡಲು ಕ್ರಿಕೆಟ್‌ ಬಾಲನಂತೆ ಭಾಸವಾಗುತ್ತದೆ. ಇದು ತಮಿಳುನಾಡು ರಾಜ್ಯದಾದ್ಯಂತ ಬಹಳ ಜನಪ್ರಿಯವಾದ ಹಣ್ಣಾಗಿದ್ದು, ಹೆಚ್ಚು ರುಚಿಯಾಗಿದೆ ಎಂದು ವಿ.ವಿಯ ಪ್ರೊ ಐ. ಮುತ್ತುವೇಲ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.