ADVERTISEMENT

ರೈತನಿಗೆ ಮೆಟ್ರೊ ಪ್ರವೇಶ ನಿರ್ಬಂಧ: ರಾಜ್ಯಕ್ಕೆ ಮಾನವ ಹಕ್ಕು ಆಯೋಗದ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2024, 14:17 IST
Last Updated 28 ಫೆಬ್ರುವರಿ 2024, 14:17 IST
   

ನವದೆಹಲಿ: ‘ಬಟ್ಟೆ ಗಲೀಜಾಗಿವೆ’ ಎಂಬ ಕಾರಣಕ್ಕೆ ರೈತರೊಬ್ಬರನ್ನು ಬೆಂಗಳೂರಿನ ಮೆಟ್ರೊ ನಿಲ್ದಾಣದೊಳಗೆ ಬಿಡದೇ ಭದ್ರತಾ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗವು ಬುಧವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್‌ ಜಾರಿ ಮಾಡಿರುವ ಆಯೋಗವು ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದೆ. ಈ ಘಟನೆಗೆ ಸಂಬಂಧಿಸಿದ ಕೈಗೊಂಡ ಕ್ರಮಗಳ ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕೈಗೊಂಡ ಉಪಕ್ರಮಗಳ ವಿವರ ವರದಿಯಲ್ಲಿರಬೇಕು ಎಂದೂ ಆಯೋಗ ತಿಳಿಸಿದೆ.

ರಾಜಾಜಿನಗರ ಮೆಟ್ರೊ ನಿಲ್ದಾಣದಲ್ಲಿ ಫೆ.18ರಂದು ನಡೆದಿರುವ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿರುವ ಕಾರ್ತಿಕ್ ಐರಾನಿ ಎಂಬುವವರು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದ್ದರು.

ADVERTISEMENT

ಮಾಧ್ಯಮ ವರದಿ ನಿಜವಾಗಿದ್ದರೆ, ಅದು ಮಾನವ ಹಕ್ಕುಗಳ ಉಲ್ಲಂಘನೆ. ಯಾವುದೇ ವ್ಯಕ್ತಿಯು ಧರಿಸಿರುವ ಬಟ್ಟೆಯ ಸ್ವರೂಪದ ಆಧಾರದ ಮೇಲೆ ಸಾರ್ವಜನಿಕ ಸಾರಿಗೆಗೆ ಪ್ರವೇಶ ನಿರಾಕರಿಸುವಂತಿಲ್ಲ. ಯಾರಾದರೂ ಯಾವುದೇ ಆಕ್ಷೇಪಾರ್ಹ ವಸ್ತುಗಳನ್ನು ಹೊಂದಿದ್ದರೆ ಮಾತ್ರ ತಡೆಯಬಹುದು ಎಂದು ಆಯೋಗ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.