ADVERTISEMENT

ನರೇಗಾ: ಕೇಂದ್ರದಿಂದ ₹ 2,059 ಕೋಟಿ ಬಾಕಿ -ಸಚಿವ‌‌ ಯು.ಟಿ.ಖಾದರ್‌

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2019, 6:20 IST
Last Updated 4 ಫೆಬ್ರುವರಿ 2019, 6:20 IST
ಯು.ಟಿ.ಖಾದರ್‌
ಯು.ಟಿ.ಖಾದರ್‌   

ಮಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ ₹ 2,059 ಕೋಟಿ ಬಾಕಿ ಇರಿಸಿಕೊಂಡಿದೆ. ನೆನಪೋಲೆ ಕಳಿಸಿದರೂ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಆರೋಪಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕೆಲಸ ಮುಗಿಸಿ ಬಿಲ್ ಸಲ್ಲಿಸಿದ್ದರೂ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಇದರಿಂದ ಜನರಿಗೆ ತೊಂದರೆ ಆಗಿದೆ. ಈ ಕಾರಣದಿಂದ ₹ 2,059 ಕೋಟಿಯನ್ನು ರಾಜ್ಯ ಸರ್ಕಾರದಿಂದಲೇ ಭರಿಸಲು ನಿರ್ಧರಿಸಲಾಗಿದೆ' ಎಂದರು.

‘ಹಲವು ತಿಂಗಳುಗಳಿಂದ ನರೇಗಾಯೋಜನೆಯ ಅನುದಾನ ಬಿಡುಗಡೆ ಮಾಡಿಲ್ಲ. ಸಾಮಾನ್ಯ ಜನರ ಅನುಕೂಲಕ್ಕಾಗಿ ಜಾರಿಗೊಳಿಸಿದ ಯೋಜನೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ಇಂತಹ ನಿಲುವು ತಾಳಿರುವುದು ದುರ್ದೈವದ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಬರ ಪರಿಸ್ಥಿತಿ ಇರುವ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ‌. 100 ತಾಲ್ಲೂಕುಗಳಿಗೆ ತಲಾ ₹ 1 ಕೋಟಿ, 62 ತಾಲ್ಲೂಕುಗಳಿಗೆ ತಲಾ ₹ 50 ಲಕ್ಷ ಮತ್ತು ಇತರೆ ತಾಲ್ಲೂಕುಗಳಿಗೆ ತಲಾ ₹ 25 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದರು.

ಮಹಾನಗರ ಪಾಲಿಕೆಗಳಿಗೆ ತಲಾ ₹ 50 ಲಕ್ಷ, ನಗರಸಭೆಗಳಿಗೆ ತಲಾ ₹ 25 ಲಕ್ಷ ಮತ್ತು ಪಟ್ಡಣ ಪಂಚಾಯಿತಿಗಳಿಗೆ ತಲಾ ₹ 10 ಲಕ್ಷ ಒದಗಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.