ಭದ್ರಾ ಮೇಲ್ದಂಡೆ ಯೋಜನೆ, ವಾರಾಹಿ ಜಲವಿದ್ಯುತ್ ಯೋಜನೆಗೆ ಅರಣ್ಯ ಬಳಸಿಕೊಳ್ಳಲು ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿ ಷರತ್ತುಬದ್ಧ ಅನುಮತಿ ನೀಡಿದೆ. ವಾರಾಹಿ ಪಂಪ್ಡ್ ಸ್ಟೋರೇಜ್‌ನ ಸ್ಥಳ ಪರಿಶೀಲನೆಗೂ ಒಪ್ಪಿಗೆ ನೀಡಲಾಗಿದೆ. ಇದರಿಂದಾಗಿ ರಾಜ್ಯದ ಎರಡು ಪ್ರಮುಖ ಯೋಜನೆಗಳಿಗೆ ಹಸಿರು ನಿಶಾನೆ ಸಿಕ್ಕಂತಾಗಿದೆ. ಆದರೆ, ಮಹದಾಯಿ ಯೋಜನೆಯು ಸ್ಥಾಯಿ ಸಮಿತಿ ಸಭೆಯಲ್ಲಿ ಚರ್ಚೆಗೇ ಬರಲಿಲ್ಲ
ನವದೆಹಲಿ: ತುಮಕೂರು ಜಿಲ್ಲೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆ ನಿರ್ಮಾಣಕ್ಕಾಗಿ ಬುಕ್ಕಾಪಟ್ಟಣ ಚಿಂಕಾರ ವನ್ಯಜೀವಿ ಧಾಮದ 128 ಎಕರೆ ಅರಣ್ಯ ಬಳಸಿಕೊಳ್ಳುವ ಪ್ರಸ್ತಾವನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿ ಷರತ್ತುಬದ್ಧ ಒಪ್ಪಿಗೆ ನೀಡಿದೆ. ಮೂಕಾಂಬಿಕಾ ಹಾಗೂ ಸೋಮೇಶ್ವರ ವನ್ಯಜೀವಿಧಾಮದಲ್ಲಿ ಸ್ಥಾಪನೆಗೊಳ್ಳಲಿರುವ ‘ವಾರಾಹಿ ಪಂಪ್ಡ್ ಸ್ಟೋರೇಜ್’ ಸರ್ವೆ ಹಾಗೂ ಸ್ಥಳ ಪರಿಶೀಲನೆಗೆ ಹಸಿರು ನಿಶಾನೆ ತೋರಿದೆ.
ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ಡಿಸೆಂಬರ್ 21ರಂದು ನಡೆದ ಸ್ಥಾಯಿ ಸಮಿತಿಯ 81ನೇ ಸಭೆಯಲ್ಲಿ ಕರ್ನಾಟಕ ಸರ್ಕಾರದ ಎರಡು ಪ್ರಮುಖ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.
ಈ ಪ್ರಸ್ತಾವನೆಯು ಸ್ಥಾಯಿ ಸಮಿತಿಯ 79ನೇ ಸಭೆಯಲ್ಲಿ ಚರ್ಚೆಗೆ ಬಂದಿತ್ತು. ಕಾಲುವೆ ಆಜುಬಾಜಿನಲ್ಲಿ ಪ್ರಾಣಿಗಳ ಸಂಚಾರಕ್ಕೆ ಹಾದಿ ಹಾಗೂ ಹಾನಿ ಕಡಿಮೆಗೊಳಿಸುವ ಕ್ರಮಗಳ ಬಗ್ಗೆ ಡೆಹ್ರಾಡೂನ್‌ನ ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ತಜ್ಞರಿಂದ ಪರಿಶೀಲನೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಪಾಶ್ಚಿಮಾತ್ಯ ದೇಶಗಳ ಹಾನಿ ಕಡಿಮೆಗೊಳಿಸುವ ಕ್ರಮಗಳ ಮಾದರಿಯನ್ನು ರಾಜ್ಯ ಸರ್ಕಾರ ಶಿಫಾರಸು ಮಾಡಿದೆ. ಇದು ನಮ್ಮ ದೇಶದ ಭೂಪ್ರದೇಶಕ್ಕೆ ಸೂಕ್ತವಾದುದು ಅಲ್ಲ ಎಂದು ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಅಭಿಪ್ರಾಯ ನೀಡಿತ್ತು.
ಸ್ಥಾಯಿ ಸಮಿತಿಯ 80ನೇ ಸಭೆಯಲ್ಲಿ ಪ್ರಸ್ತಾವನೆ ಕುರಿತು ಚರ್ಚಿಸಲಾಗಿತ್ತು. ವೈಲ್ಡ್ ಲೈಫ್
ಇನ್‌ಸ್ಟಿಟ್ಯೂಟ್‌ನ ತಜ್ಞರು ಸ್ಥಳ ಪರಿಶೀಲನೆ ನಡೆಸಿ ಒಂದು ತಿಂಗಳಲ್ಲಿ ವರದಿ ಸಲ್ಲಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಗಿತ್ತು. ಕಾಡುಪ್ರಾಣಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಕಾಲುವೆಯ ಪ್ರತಿ 500 ಮೀಟರ್‌ನಲ್ಲಿ ಅಗಲವಾದ ಮೇಲು ರಸ್ತೆ ನಿರ್ಮಿಸಬೇಕು.
ಎಸ್ಕೇಪ್ ರ‍್ಯಾಂಪ್‌ಗಳ ನಿರ್ಮಾಣ ಮಾಡಬೇಕು ಎಂದು ಇನ್‌ಸ್ಟಿಟ್ಯೂಟ್‌ನ ತಜ್ಞರು ಶಿಫಾರಸು ಮಾಡಿದ್ದರು. ತಜ್ಞರ ಶಿಫಾರಸುಗಳನ್ನು ರಾಜ್ಯ ಒಪ್ಪಿಕೊಂಡಿದೆ ಎಂದು ಪಿಸಿಸಿಎಫ್ (ವನ್ಯಜೀವಿ) ಸಭೆಯ ಗಮನಕ್ಕೆ ತಂದರು. ವನ್ಯಜೀವಿ ಹಾಗೂ ಕಾಡುಗಳಿಗೆ ಹಾನಿ ಉಂಟು ಮಾಡಬಾರದು, ಪ್ರಾಣಿಗಳ ಸಂಚಾರಕ್ಕೆ ಹಾದಿ ನಿರ್ಮಿಸಬೇಕು ಎಂಬುದು ಸೇರಿ 10 ಷರತ್ತುಗಳನ್ನು ವಿಧಿಸಿ ಸ್ಥಾಯಿ ಸಮಿತಿಯು ಕಾಡು ಬಳಕೆಗೆ ಒಪ್ಪಿಗೆ ನೀಡಿತು. ಇದರಿಂದಾಗಿ, ಭದ್ರಾ ಮೇಲ್ದಂಡೆ ಯೋಜನೆಗೆ ಎದುರಾಗಿದ್ದ ದೊಡ್ಡ ಅಡ್ಡಿ ನಿವಾರಣೆಯಾದಂತಾಗಿದೆ.
ಈ ಅರಣ್ಯ ಪ್ರದೇಶವು ವಿನಾಶದ ಅಂಚಿನಲ್ಲಿರುವ ಚಿಂಕಾರ (ಹುಲ್ಲೇಕರ) ಜತೆಗೆ ವಿವಿಧ ವನ್ಯಜೀವಿಗಳು, ವಿಶಿಷ್ಟ ಜಾತಿಯ ಸಸ್ಯ ಸಂಪತ್ತನ್ನು ಒಳಗೊಂಡಿದೆ.
ತುಮಕೂರು ಜಿಲ್ಲೆಯ ಶಿರಾ, ಚಿಕ್ಕ ನಾಯಕನಹಳ್ಳಿ, ಗುಬ್ಬಿ ತಾಲ್ಲೂಕುಗಳು ಹಾಗೂ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಬುಕ್ಕಾಪಟ್ಟಣ ವನ್ಯಜೀವಿ ಧಾಮ ವಿಸ್ತರಿಸಿಕೊಂಡಿದೆ.
ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶ ಮತ್ತು ವನ್ಯಜೀವಿ ಧಾಮದೊಳಗೇ 1500 ಮೆಗಾವಾಟ್ ಉತ್ಪಾದನಾ ಸಾಮರ್ಥ್ಯದ ವಾರಾಹಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆ ತಲೆ ಎತ್ತಲಿದೆ. ಇದಕ್ಕಾಗಿ 260 ಹೆಕ್ಟೇರ್ (660 ಎಕರೆ) ಅರಣ್ಯದಲ್ಲಿ ಸರ್ವೆ ಹಾಗೂ ಸ್ಥಳ ಪರಿಶೀಲನೆ ನಡೆಸಲು ಸ್ಥಾಯಿ ಸಮಿತಿಯಿಂದ ಸಮ್ಮತಿ ಸಿಕ್ಕಿದೆ. ಈ ಯೋಜನೆ ಅನುಷ್ಠಾನಗೊಂಡರೆ ಸುಮಾರು 82 ಹೆಕ್ಟೇರ್ ಅರಣ್ಯಭೂಮಿಗೆ ಹಾನಿಯಾಗಲಿದೆ.
ರಾಜ್ಯ ಸರ್ಕಾರ, ರಾಜ್ಯ ವನ್ಯಜೀವಿ ಮಂಡಳಿ ಹಾಗೂ ಪಿಸಿಸಿಎಫ್ (ವನ್ಯಜೀವಿ) ಅವರು ಈ ಯೋಜನೆಯನ್ನು ಶಿಫಾರಸು ಮಾಡಿದ್ದಾರೆ.
ಯೋಜನಾ ಸ್ಥಳ ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿ ರಚಿಸಬೇಕು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಶಿಫಾರಸು ಮಾಡಿತ್ತು.
‘ಇದೀಗ ಯೋಜನೆಯ ಸಾಧಕ ಬಾಧಕಗಳ ಪರಾಮರ್ಶೆಗೆ ಸರ್ವೆ ನಡೆಸಲು ಪ್ರಸ್ತಾವನೆ ಬಂದಿದೆ. ಈಗ ಕೆಲವೊಂದು ಕಡೆ ಡ್ರಿಲ್ಲಿಂಗ್ ಮಾಡಬೇಕಾಗುತ್ತದೆ ಅಷ್ಟೇ. ಯೋಜನೆಯ ಅನುಷ್ಠಾನಕ್ಕೆ ಮುನ್ನ ರಾಜ್ಯ ಸರ್ಕಾರ ಮತ್ತೊಂದು ಸುತ್ತಿನ ಒಪ್ಪಿಗೆ ಪಡೆಯಬೇಕಾಗುತ್ತದೆ. ಆ ಪ್ರಸ್ತಾವನೆ ಸಲ್ಲಿಕೆಯಾದ ಬಳಿಕ ಸ್ಥಳ ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿ ರಚಿಸಬಹುದು’ ಎಂದು ಭೂಪೇಂದರ್ ಯಾದವ್ ಅಭಿಪ್ರಾಯಪಟ್ಟರು. ಬಳಿಕ, ಪ್ರಸ್ತಾವನೆಗೆ ಷರತ್ತುಬದ್ಧ ಒಪ್ಪಿಗೆ ನೀಡಲಾಯಿತು.
ಜಲವಿದ್ಯುತ್ ಯೋಜನೆಯ ಅಂದಾಜು ವೆಚ್ಚ ₹4,268 ಕೋಟಿ. ಯಾವುದೇ ‘ವಿಘ್ನ’ಗಳು ಎದುರಾಗದಿದ್ದರೆ, 2029ರಲ್ಲಿ ಕಾಮಗಾರಿ ಆರಂಭಗೊಳಿಸಿ, 2030ರ ವೇಳೆಗೆ ಕಾಮಗಾರಿ ಮುಗಿಸಲಿದೆ. 2033ರಿಂದ ವಿದ್ಯುತ್ ಉತ್ಪಾದನೆ ಆರಂಭಗೊಳ್ಳಲಿದೆ.
ಮಹದಾಯಿಯ ಕಳಸಾ ನಾಲಾ ತಿರುವು ಯೋಜನೆಗೆ ವನ್ಯಜೀವಿ ಅನುಮೋದನೆ ನೀಡುವ ಪ್ರಸ್ತಾವನೆಯು ಸ್ಥಾಯಿ ಸಮಿತಿಯ ಸಭೆಯಲ್ಲಿ ಚರ್ಚೆಗೇ ಬರಲಿಲ್ಲ.
ಈ ಕಾರ್ಯಸೂಚಿಯನ್ನು 80ನೇ ಸಭೆಯಲ್ಲಿ ಮುಂದೂಡಲಾಗಿತ್ತು. ಈ ಯೋಜನೆ ಬಗ್ಗೆ ಲಿಖಿತ ರೂಪದಲ್ಲಿ ಪ್ರತಿಕ್ರಿಯೆ ನೀಡುವಂತೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಲಾಗಿತ್ತು. ಕಾನೂನಾತ್ಮಕ ಹಾಗೂ ಯೋಜನೆಯ ವಾಸ್ತವಾಂಶದ ವಿಷಯಗಳನ್ನು ಒಳಗೊಂಡ ಲಿಖಿತ ಅಭಿಪ್ರಾಯವನ್ನು ಸಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಲಾಗಿತ್ತು. ರಾಜ್ಯ ಸರ್ಕಾರವು ಅಕ್ಟೋಬರ್ ತಿಂಗಳಲ್ಲಿ ಎರಡು ಪತ್ರಗಳನ್ನು ಬರೆದು ಅಭಿಪ್ರಾಯ ತಿಳಿಸಿತ್ತು. ಈ ಯೋಜನೆಗೆ ಸುಪ್ರೀಂ ಕೋರ್ಟ್ ತಡೆ ನೀಡಿಲ್ಲ ಎಂದೂ ಸ್ಪಷ್ಟಪಡಿಸಿತ್ತು. ಮುಂದಿನ ಸಭೆಯಲ್ಲಿ ಈ ಯೋಜನೆಗೆ ಒಪ್ಪಿಗೆ ಸಿಗಲಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಹಾಗೂ ಬಿಜೆಪಿ ನಾಯಕರು ಹೇಳಿಕೆ ನೀಡಿದ್ದರು.
ಈ ಯೋಜನೆಗೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಏಳು ಗ್ರಾಮಗಳ ಅರಣ್ಯ ಬಳಕೆಗೆ (ಜಾಕ್‌ವೆಲ್ ನಿರ್ಮಾಣ, ಪಂಪ್ ಹೌಸ್, ಎಲೆಕ್ಟ್ರಿಕಲ್ ಸಬ್ ಸ್ಟೇಷನ್, ಪೈಪ್‌ಲೈನ್) ಒಪ್ಪಿಗೆ ನೀಡುವಂತೆ ರಾಜ್ಯ ಸರ್ಕಾರವು ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಯೋಜನೆಗೆ ಕಾಳಿ ಹಾಗೂ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ 10.68 ಹೆಕ್ಟೇರ್ ಅರಣ್ಯ ಬಳಸಿಕೊಳ್ಳಲಾಗುತ್ತದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.