ADVERTISEMENT

ಪೌಷ್ಟಿಕ ಆಹಾರದ ಪೊಟ್ಟಣದಲ್ಲಿ ₹1.5 ಕೋಟಿ ಮೌಲ್ಯದ ಡ್ರಗ್ಸ್‌

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 19:30 IST
Last Updated 8 ಜನವರಿ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮಕ್ಕಳಿಗಾಗಿಯೇ ವಿಶೇಷವಾಗಿ ತಯಾರಿಸುವ ನೆಸ್ಲೆ ಕಂಪನಿಯ ರಾಗಿ ಹಿಟ್ಟಿನ ಪೊಟ್ಟಣಗಳಲ್ಲಿ ಮಾದಕ ವಸ್ತುಗಳನ್ನು ಅಡಗಿಸಿ ಸಾಗಾಣೆ ಮಾಡುತ್ತಿದ್ದ ಉಗಾಂಡದ ಮಹಿಳೆಯನ್ನು ಎನ್‌ಸಿಬಿ ಅಧಿಕಾರಿಗಳು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಬಂಧಿಸಿದ್ದಾರೆ.

‘ನಗ್ಗಾಯ್ ಅಗ್ನಿಸ್‌ (30) ಬಂಧಿತ ಮಹಿಳೆ. ಈಕೆಯಿಂದ ₹1.5 ಕೋಟಿ ಮೌಲ್ಯದ 995 ಗ್ರಾಂಮೆಟಾಂಪೆಟಮೈನ್‌ ಮಾದಕ ವಸ್ತು ಜಪ್ತಿ ಮಾಡಲಾಗಿದೆ’ ಎಂದು ಎನ್‌ಸಿಬಿ ಬೆಂಗಳೂರು ವಲಯದ ಅಧಿಕಾರಿಗಳು ತಿಳಿಸಿದ್ದಾರೆ.

‘ದೆಹಲಿಯಿಂದ ರೈಲಿನ ಮೂಲಕ ಬೆಂಗಳೂರಿಗೆ ದೊಡ್ಡ ಮೊತ್ತದ ಮಾದಕ ವಸ್ತು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಹೀಗಾಗಿ ತಂಡವೊಂದು ಹುಬ್ಬಳ್ಳಿಗೆ ಹೋಗಿ ರೈಲು ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸಿತ್ತು. ಅವರ ಜೊತೆ ಚರ್ಚಿಸಿ ದೆಹಲಿಯಿಂದ ಯಶವಂತಪುರಕ್ಕೆ ಬರುತ್ತಿದ್ದ ಹಜರತ್‌ ನಿಜಾಮುದ್ದಿನ್‌ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 12630) ರೈಲನ್ನು ಪರಿಶೀಲನೆ ನಡೆಸಿತ್ತು. ಬೋಗಿಯೊಂದರಲ್ಲಿ ಕುಳಿತಿದ್ದ ಮಹಿಳೆ ಅಧಿಕಾರಿಗಳನ್ನು ಕಂಡೊಡನೆ ಬೇರೆಡೆಗೆ ಎದ್ದು ಹೋಗಲು ಮುಂದಾಗಿದ್ದಳು. ಅನುಮಾನಗೊಂಡ ಅಧಿಕಾರಿಗಳು ಆಕೆಯನ್ನು ತಡೆದು ಬ್ಯಾಗ್‌ ಪರಿಶೀಲಿಸಿದ್ದರು’ ಎಂದು ಅವರು ವಿವರಿಸಿದ್ದಾರೆ.

ADVERTISEMENT

‘ಆಕೆಯ ಬ್ಯಾಗ್‌ನಲ್ಲಿ ನೆಸ್ಲೆ ಕಂಪನಿಯ ಎರಡು ಪೊಟ್ಟಣಗಳಿದ್ದವು. ಅವುಗಳನ್ನು ತೆರೆದು ನೋಡಿದಾಗ ತಲಾ 497.5 ಗ್ರಾಂಮೆಟಾಂಪೆಟಮೈನ್‌ ಪತ್ತೆಯಾಗಿತ್ತು. ತಪಾಸಣೆ ವೇಳೆ ಅಧಿಕಾರಿಗಳಿಗೆ ಗೊತ್ತಾಗಬಾರದು ಎಂಬ ಕಾರಣಕ್ಕೆ ಅವುಗಳನ್ನು ಕಪ್ಪು ಬಣ್ಣದ ಕವರ್‌ನಲ್ಲಿ ಅಡಗಿಸಿಡಲಾಗಿತ್ತು. ಇದನ್ನು ಬೆಂಗಳೂರು ಹಾಗೂ ರಾಜ್ಯದ ಇತರ ಭಾಗಗಳಲ್ಲಿ ನಡೆಯುವ ಪಾರ್ಟಿಗಳಿಗೆ ಸರಬರಾಜು ಮಾಡಲು ತಂದಿರಬಹುದು ಎಂಬ ಅನುಮಾನವಿದೆ’ ಎಂದರು.

‘ಮಹಿಳೆಯು ಡ್ರಗ್ಸ್‌ ಜಾಲದಲ್ಲಿ ಸಕ್ರಿಯಳಾಗಿರುವುದು ಗೊತ್ತಾಗಿದೆ. ಆಕೆ ಯಾರೊಂದಿಗೆಲ್ಲಾ ಸಂಪರ್ಕದಲ್ಲಿದ್ದಳು ಎಂಬುದರ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ಆಕೆ ಭಾರತಕ್ಕೆ ಬಂದಿದ್ದು ಹೇಗೆ. ತಾನು ತಂದ ಡ್ರಗ್ಸ್‌ ಅನ್ನು ಯಾರಿಗೆ ಪೂರೈಕೆ ಮಾಡಲು ಮುಂದಾಗಿದ್ದಳು ಎಂಬ ಮಾಹಿತಿಗಳನ್ನೂ ಕಲೆಹಾಕಲಾಗುತ್ತಿದೆ. ಎನ್‌ಡಿಪಿಎಸ್‌ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿದ್ದು, ಆಕೆಯನ್ನು ಧಾರವಾಡದ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ’ ಎಂದೂ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.