ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು
ಬೆಂಗಳೂರು: ಅಖಿಲ ಭಾರತ ವೈದ್ಯಕೀಯ ಸೀಟು ಹಂಚಿಕೆಯ ದಿನಾಂಕವನ್ನು ವೈದ್ಯಕೀಯ ಕೌನ್ಸೆಲಿಂಗ್ ಪರಿಷತ್ತು (ಎಂಸಿಸಿ) ಮತ್ತೆ ಮುಂದೂಡಿದ್ದು (ಆ.9), ರಾಜ್ಯದ ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶದ ಎರಡನೇ ಸುತ್ತಿನ ಪ್ರಕ್ರಿಯೆಗಳು ವಿಳಂಬವಾಗಲಿವೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ 2025–26ನೇ ಸಾಲಿನ ಪ್ರವೇಶಕ್ಕಾಗಿ ಮೇ 4ರಂದು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ನಡೆಸಿತ್ತು. ನೀಟ್ ಫಲಿತಾಂಶದ ಪಟ್ಟಿಯ ಆಧಾರದಲ್ಲಿ ಎಂಸಿಸಿ ದೇಶದಲ್ಲಿ ಲಭ್ಯವಿರುವ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಒಟ್ಟು ಸೀಟುಗಳಲ್ಲಿ ಶೇ 15ರಷ್ಟು ಹಂಚಿಕೆ ಮಾಡುತ್ತದೆ. ಎನ್‌ಟಿಎ ಪರೀಕ್ಷೆ ನಡೆಸಿ 90 ದಿನಗಳು ಕಳೆದರೂ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯನ್ನೇ ಎಂಸಿಸಿ ಆರಂಭಿಸಿಲ್ಲ.
2025–26ನೇ ಸಾಲಿನಲ್ಲಿ ಎಂಜನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶ ಬಯಸಿ ಕರ್ನಾಟಕದಲ್ಲಿ 3.11 ಲಕ್ಷ ವಿದ್ಯಾರ್ಥಿಗಳು ಸಿಇಟಿ ಬರೆದಿದ್ದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೇ 24ರಂದು ಫಲಿತಾಂಶ ಪ್ರಕಟಿಸಿತ್ತು. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಿದ್ದ ನೀಟ್–2025ರ ಫಲಿತಾಂಶವೂ ಜೂನ್ 14ರಂದು ಪ್ರಕಟವಾಗಿತ್ತು. ಆದರೆ, ಎಂಸಿಸಿ ವೈದ್ಯಕೀಯ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಎಲ್ಲ ರಾಜ್ಯಗಳಿಗೆ ಕಳುಹಿಸಲು ವಿಳಂಬ ಮಾಡಿದ ಕಾರಣ ಕರ್ನಾಟಕದಲ್ಲೂ ಸಿಇಟಿ ಪ್ರಕ್ರಿಯೆ ವಿಳಂಬವಾಗಿ ಆರಂಭವಾಗಿತ್ತು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಟ್ ಅಂಕಗಳ ಆಧಾರದಲ್ಲಿ ರಾಜ್ಯದಲ್ಲಿ ಲಭ್ಯವಿರುವ ವೈದ್ಯಕೀಯ, ದಂತ ವೈದ್ಯಕೀಯ, ಸಿಇಟಿ ಅಂಕಗಳ ಆಧಾರದಲ್ಲಿ ಎಂಜಿನಿಯರಿಂಗ್ ಸೀಟುಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಮಾಡಿದ್ದು, ಶೇ 93ರಷ್ಟು ವಿದ್ಯಾರ್ಥಿಗಳು ಈಗಾಗಲೇ ಪ್ರವೇಶ ಪಡೆದಿದ್ದಾರೆ. ಆದರೆ, ಅಖಿಲ ಭಾರತ ಮಟ್ಟದಲ್ಲಿ ಮೊದಲ ಸುತ್ತಿನ ವೈದ್ಯಕೀಯ ಸೀಟು ಹಂಚಿಕೆಯೇ ಆರಂಭವಾಗದ ಕಾರಣ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.
‘ನೀಟ್‌ನಲ್ಲಿ ಉತ್ತಮ ಅಂಕ ಬಂದಿದೆ. ದೆಹಲಿಗೆ ತೆರಳಿ ವೈದ್ಯಕೀಯ ಶಿಕ್ಷಣ ಪಡೆಯುವ ಕನಸಿದೆ. ಅಲ್ಲಿ ಸಿಗದಿದ್ದರೆ ರಾಜ್ಯದಲ್ಲೇ ಎಂಜಿನಿಯರಿಂಗ್ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಗುರಿ ಇಟ್ಟುಕೊಂಡಿದ್ದೇನೆ. ಆದರೆ, ಸಿಇಟಿಯ ಮೊದಲ ಸುತ್ತಿನಲ್ಲಿ ಶೇ 93ರಷ್ಟು ಸಿಟು ಭರ್ತಿಯಾಗಿವೆ. ಎಂಸಿಸಿ ವಿಳಂಬ ಧೋರಣೆ ಬೇಸರ ತರಿಸಿದೆ’ ಎನ್ನುತ್ತಾರೆ ವಿದ್ಯಾರ್ಥಿನಿ ಎ.ಪಿ. ಫಲ್ಗುಣಿ ಪ್ರಸನ್ನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.