ADVERTISEMENT

NEET Results: ವಿಜಯಪುರದ ನಿಖಿಲ್‌ ಸೊನ್ನದ ರಾಜ್ಯಕ್ಕೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 12:42 IST
Last Updated 14 ಜೂನ್ 2025, 12:42 IST
<div class="paragraphs"><p>ನೀಟ್‌ನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ನಿಖಿಲ್ ಸೊನ್ನದಗೆ ಪಾಲಕರಾದ ಡಾ. ಸಿದ್ದಪ್ಪ ಸೊನ್ನದ ಮತ್ತು ಡಾ. ಮೀನಾಕ್ಷಿ ಸೊನ್ನದ ಸಿಹಿ ತಿನ್ನಿಸಿ ಅಭಿನಂದಿಸಿದರು</p></div>

ನೀಟ್‌ನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ನಿಖಿಲ್ ಸೊನ್ನದಗೆ ಪಾಲಕರಾದ ಡಾ. ಸಿದ್ದಪ್ಪ ಸೊನ್ನದ ಮತ್ತು ಡಾ. ಮೀನಾಕ್ಷಿ ಸೊನ್ನದ ಸಿಹಿ ತಿನ್ನಿಸಿ ಅಭಿನಂದಿಸಿದರು

   

ಪ್ರಜಾವಾಣಿ ಚಿತ್ರ

ವಿಜಯಪುರ: ವಿಜಯಪುರ ನಗರದ ‘ಸಂಜೀವಿನಿ’ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ದಂಪತಿ ಡಾ. ಸಿದ್ದಪ್ಪ ಸೊನ್ನದ ಮತ್ತು ಡಾ. ಮೀನಾಕ್ಷಿ ಸೊನ್ನದ ಅವರ ಪುತ್ರ, ಮಂಗಳೂರು ವಳಚಿಲ್‌ನ ಎಕ್ಸ್‌ಫರ್ಟ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ನಿಖಿಲ್‌ ಸೊನ್ನದ ಅವರು ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕೆ ನಡೆದ ಪ್ರಸಕ್ತ ಸಾಲಿನ ರಾಷ್ಟ್ರೀಯ ಪ್ರವೇಶ ಪರೀಕ್ಷೆ ‘ನೀಟ್‌’ನಲ್ಲಿ ರಾಷ್ಟ್ರಕ್ಕೆ 17ನೇ ರ‍್ಯಾಂಕ್‌ ಹಾಗೂ ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌ ಗಳಿಸಿದ್ದಾರೆ.

ADVERTISEMENT

ನಿಖಿಲ್‌ ಸೊನ್ನದ ಅವರು 720 ಅಂಕಗಳಿಗೆ 670 ಅಂಕ ಗಳಿಸಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ಶೇ 98.3 ಅಂಕ ಗಳಿಸಿದ್ದರು.

‘ನೀಟ್‌ನಲ್ಲಿ ಉತ್ತಮ ಅಂಕದ ನಿರೀಕ್ಷೆ ಇತ್ತು. ಆದರೆ, ರಾಷ್ಟ್ರಮಟ್ಟದಲ್ಲಿ 17ನೇ ಸ್ಥಾನ ಬರುತ್ತದೆ ಎಂದು ಊಹಿಸಿರಲಿಲ್ಲ. ಬಹಳ ಖುಷಿಯಾಗಿದೆ. ಏಮ್ಸ್‌ನಲ್ಲಿ ವೈದ್ಯಕೀಯ ಪದವಿ ಓದಬೇಕೆಂದುಕೊಂಡಿರುವೆ. ನರರೋಗ ಶಸ್ತ್ರಚಿಕಿತ್ಸಕ ಆಗಬೇಕು ಎಂಬ ಆಶಯ ಇದೆ’ ಎಂದು ನಿಖಿಲ್‌ ಸೊನ್ನದ ‘ಪ್ರಜಾವಾಣಿ’ಗೆ ತಿಳಿಸಿದರು.

‘‘ಶ್ರಮಯೇವ ಜಯತೇ’ ಎಂಬುದು ಏಕ್ಸ್‌ಫರ್ಟ್‌ ಕಾಲೇಜಿನ ಧ್ಯೇಯ ವಾಕ್ಯವಾಗಿದೆ. ಈ ಧ್ಯೇಯ ವಾಕ್ಯವೇ ನನ್ನನ್ನು ಪ್ರತಿದಿನ ಕಠಿಣ ಶ್ರಮ ಹಾಕಲು ಪ್ರೇರೇಪಣೆ ನೀಡಿತು. ಪ್ರತಿದಿನ ಬೆಳಿಗ್ಗೆ 7 ರಿಂದ ಸಂಜೆ 7ರ ವರೆಗೆ ತರಗತಿ ಮತ್ತು ನೀಟ್‌ ಕೋಚಿಂಗ್‌ ಇರುತ್ತಿತ್ತು. ಕಾಲೇಜಿನ ಪ್ರಾಧ್ಯಾಪಕರು ನಮಗೆ ಉತ್ತೇಜನ ನೀಡುತ್ತಿದ್ದರು, ಡೌಟ್‌ ಕ್ಲಿಯರ್‌ ಮಾಡುತ್ತಿದ್ದರು’ ಎಂದರು.

‘ಕಾಲೇಜಿನಲ್ಲಿ ಪ್ರತಿ ವಾರಕ್ಕೊಮ್ಮೆ ನೀಟ್‌ ಪರೀಕ್ಷೆ ನಡೆಸಲಾಗುತ್ತಿತ್ತು. ಇದರಲ್ಲಿ ಒಮ್ಮೊಮ್ಮೆ ಕಡಿಮೆ ಅಂಕ ಬಂದಾಗ ಬೇಸರಗೊಳ್ಳುತ್ತಿದ್ದೆ. ಆಗ ಸ್ನೇಹಿತರು ನನಗೆ ಮುಂದಿನ ಪರೀಕ್ಷೆಗೆ ಹುರಿದುಂಬಿಸುತ್ತಿದ್ದರು’ ಎಂದು ನೆನಪಿಸಿಕೊಂಡರು. 

‘ನನ್ನ ತಂದೆ, ತಾಯಿ ವೈದ್ಯರಾಗಿರುವುದರಿಂದ ನನಗೂ ವೈದ್ಯನಾಗಬೇಕು ಎಂಬ ಆಶಯ ಇದೆ. ಇದಕ್ಕೆ ತಂದೆ, ತಾಯಿ ಅವರ ಪ್ರೋತ್ಸಾಹ ಕೂಡ ಇದೆ. ಭವಿಷ್ಯದಲ್ಲಿ ನಮ್ಮ ಆಸ್ಪತ್ರೆಯಲ್ಲೇ ವೈದ್ಯನಾಗಿ ಕಾರ್ಯನಿರ್ವಹಿಸುವ ಉದ್ದೇಶವಿದೆ’ ಎಂದರು.

‘ಕಾಲೇಜಿನಲ್ಲಿ ಭಾನುವಾರದ ಬಿಡುವಿನ ವೇಳೆಯಲ್ಲಿ ಸ್ನೇಹಿತರೊಂದಿಗೆ ಬ್ಯಾಡ್ಮಿಂಟನ್‌, ಚೆಸ್‌ ಆಡುತ್ತಿದ್ದೆ, ಮನಸ್ಸಿಗೆ ಖುಷಿಯಾದಾಗ ಕವಿತೆ ಬರೆಯುತ್ತಿದ್ದೆ’ ಎದು ಹೇಳಿದರು.

‌‘ಸಿಇಟಿ ಅಗ್ರಿಯಲ್ಲಿ ರಾಜ್ಯಕ್ಕೆ 8 ನೇ ರ‍್ಯಾಂಕ್‌ ಬಂದಿದೆ. ಜೆಇಇ ಮೇನ್ಸ್‌ನಲ್ಲಿ 8000ನೇ ರ‍್ಯಾಂಕ್‌ ಬಂದಿದೆ. ಆದರೆ, ಜೆಇಇ ಅಡ್ವಾನ್ಸ್‌ ಬರೆದಿಲ್ಲ’ ಎಂದರು.

‘ವಿಜಯಪುರ ಸೈನಿಕ್‌ ಶಾಲೆಯಲ್ಲಿ ಓದಿದ್ದು, ಎಸ್‌ಎಸ್‌ಎಲ್‌ಸಿಯಲ್ಲಿ ಶೇ 93 ಅಂಕ ಬಂದಿತ್ತು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.