ADVERTISEMENT

ನೇಹಾ ಹತ್ಯೆ: ತುಷ್ಟೀಕರಣ ರಾಜಕಾರಣದ ಚಶ್ಮಾ ಹಾಕಿ ನೋಡುತ್ತಿರುವ ಸರ್ಕಾರ– ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 13:42 IST
Last Updated 24 ಏಪ್ರಿಲ್ 2024, 13:42 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಗದಗ: ‘ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ತುಷ್ಟೀಕರಣ ರಾಜಕಾರಣದ ಚಶ್ಮಾ ಹಾಕಿಕೊಂಡು ನೋಡುತ್ತಿದೆ’ ಎಂದು ಹಾವೇರಿ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಟೀಕಿಸಿದರು.

‘ನೇಹಾ ಹತ್ಯೆ ಆಕಸ್ಮಿಕ’ ಎಂದು ಹೇಳಿಕೆ ನೀಡಿದ್ದ ಸಚಿವ ಶಿವಾನಂದ ಪಾಟೀಲ ಹೇಳಿಕೆಗೆ ಬುಧವಾರ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ‘ಶಿವಾನಂದ ಪಾಟೀಲ ಹೇಳಿಕೆ ಕಾಂಗ್ರೆಸ್‌ನ ಮನಃಸ್ಥಿತಿಯನ್ನು ತೋರಿಸುತ್ತದೆ. ನೇಹಾಳನ್ನು ಹತ್ಯೆ ಮಾಡಿದ ಯುವಕ ಅಲ್ಪಸಂಖ್ಯಾತನಿದ್ದಾನೆ. ಹತ್ಯೆ ಪ್ರಕರಣವನ್ನು ಗೌಣ ಮಾಡುವುದಕ್ಕಾಗಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಶಿವಾನಂದ ಪಾಟೀಲ್ ಯಾವಾಗಲೂ ಹೀಗೆ ಮಾತನಾಡುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಇಂಥವರೇ ಬೇಕಾಗಿದ್ದಾರೆ’ ಎಂದು ಹರಿಹಾಯ್ದರು.

‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆಸ್ತಿ ಮರು ಹಂಚಿಕೆ ಮಾಡಲಿದೆ’ ಎಂಬ ಹೇಳಿಕೆ ಪ್ರತಿಕ್ರಿಯಿಸಿದ ಅವರು, ‘ಈ ಮಾತು ಕೇಳುವುದಕ್ಕೆ ಬಹಳ ಚೆನ್ನಾಗಿ ಅನಿಸುತ್ತದೆ. ಆದರೆ, ಯಾರದ್ದು ಕಿತ್ತುಕೊಂಡು ಯಾರಿಗೆ ಕೊಡುತ್ತಾರೆ? ಏನು ಸರ್ವೆ ಮಾಡುತ್ತಾರೆ? ಚುನಾವಣೆ ಸಂದರ್ಭದಲ್ಲಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡಬಾರದು. ಕಾಂಗ್ರೆಸ್ ನೀತಿ ಇದ್ದಲ್ಲಿ‌ ಸ್ಪಷ್ಟವಾಗಿ ಹೇಳಬೇಕು. ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯದ ರೀತಿ ಆಸ್ತಿ ಮಾಡುವ ಹಕ್ಕೂ ಇದೆ. ಜವಾಬ್ದಾರಿ ಸ್ಥಾನದಲ್ಲಿ ಇದ್ದವರು ಹೀಗೆ ಮಾತನಾಡಬಾರದು’ ಎಂದು ಹೇಳಿದರು.

ADVERTISEMENT

‘ಧರ್ಮ ಆಧಾರಿತ ಮೀಸಲಾತಿಗೆ ಅವಕಾಶ ಇಲ್ಲ ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹೀಗಿದ್ದರೂ ಕಾಂಗ್ರೆಸ್ ತುಷ್ಟೀಕರಣದ ರಾಜಕಾರಣಕ್ಕೆ ಮುಸ್ಲೀಮರ ಮೀಸಲಾತಿಗೆ ಬೆಂಬಲ ಕೊಡುತ್ತಿದೆ’ ಎಂದು ದೂರಿದರು.

‘ಮುಸ್ಲಿಂ ಸಮುದಾಯದಲ್ಲೂ ನದಾಫ, ಪಿಂಜಾರ ಸೇರಿದಂತೆ 24 ಜಾತಿಯವರು ಬಹಳ ಹಿಂದುಳಿದವರಿದ್ದಾರೆ. ಅವುಗಳಿಗೆ ಈಗಾಗಲೇ 2ಎ ಯಲ್ಲಿ‌ ಮೀಸಲಾತಿ ಇದೆ. ಅವರಿಗೆ ಹೆಚ್ಚುವರಿಯಾಗಿ ಶೇ 4 ಮೀಸಲಾತಿ ಕೊಟ್ಟಿದ್ದರು. ಅದನ್ನೇ ಹಿಂದುಳಿದ ವರ್ಗಗಳ ಆಯೋಗ ಆಕ್ಷೇಪ ಮಾಡಿದೆ. ಈಗ ಆ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.