ADVERTISEMENT

ಎನ್‌ಇಪಿ: ಲೋಕಸಭೆಯಲ್ಲಿ ಧರ್ಮೇಂದ್ರ ಪ್ರಧಾನ್‌–ಡಿಎಂಕೆ ನಡುವೆ ಜಟಾಪಟಿ

ರಾಜಕೀಯ ಕಾರಣಕ್ಕೆ ತಮಿಳುನಾಡು ಸರ್ಕಾರ ಯೂಟರ್ನ್‌: ಶಿಕ್ಷಣ ಸಚಿವರ ಹೇಳಿಕೆಗೆ ಆಕ್ಷೇಪ, ಪ್ರತಿಭಟನೆ, ಕಲಾಪಕ್ಕೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 14:32 IST
Last Updated 10 ಮಾರ್ಚ್ 2025, 14:32 IST
ಲೋಕಸಭೆಯಲ್ಲಿ ಸೋಮವಾರ  ಡಿಎಂಕೆ ಸದಸ್ಯೆ ಕನಿಮೋಳಿ ಮಾತನಾಡಿದರು   ಪಿಟಿಐ ಚಿತ್ರ
ಲೋಕಸಭೆಯಲ್ಲಿ ಸೋಮವಾರ  ಡಿಎಂಕೆ ಸದಸ್ಯೆ ಕನಿಮೋಳಿ ಮಾತನಾಡಿದರು   ಪಿಟಿಐ ಚಿತ್ರ    

ನವದೆಹಲಿ: ರಾಜಕೀಯ ಕಾರಣಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಜಾರಿಯಲ್ಲಿ ತಮಿಳುನಾಡು ಸರ್ಕಾರ ಯೂಟರ್ನ್‌ ಮಾಡಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಲೋಕಸಭೆಯಲ್ಲಿ ಆರೋಪಿಸಿದರು. ಈ ಹೇಳಿಕೆಯಿಂದ ಕುಪಿತಗೊಂಡ ಡಿಎಂಕೆ ಸದಸ್ಯರು ಪ್ರತಿಭಟಿಸಿದರು. ಇದರಿಂದಾಗಿ, ಕಲಾಪಕ್ಕೆ ಅಡ್ಡಿಯಾಯಿತು. 

ಪಿಎಂ ಸ್ಕೂಲ್ಸ್‌ ಫಾರ್‌ ರೈಸಿಂಗ್ ಇಂಡಿಯಾ (ಪಿಎಂ–ಶ್ರೀ) ಯೋಜನೆಗೆ ಕೇಂದ್ರವು ಹಣ ಬಿಡುಗಡೆ ಮಾಡಿಲ್ಲ ಎಂದು ಸದಸ್ಯರೊಬ್ಬರು ಪ್ರಶ್ನೋತ್ತರ ಅವಧಿಯಲ್ಲಿ ಸೋಮವಾರ ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರಿಸಿದ ಪ್ರಧಾನ್‌, ‘ಅವರು ಅಪ್ರಾಮಾಣಿಕರು ಮತ್ತು ಅವರು ತಮಿಳುನಾಡಿನ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ ... ಅವರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ’ ಎಂದು ಕಿಡಿಕಾರಿದರು. 

ಇದಕ್ಕೆ ತಿರುಗೇಟು ನೀಡಿದ ಡಿಎಂಕೆ ಸದಸ್ಯರು, ‘ನಾವು ಎನ್‌ಪಿಯನ್ನು ಪೂರ್ಣವಾಗಿ ಸ್ವೀಕರಿಸುವುದಿಲ್ಲ ಹಾಗೂ ತ್ರಿಭಾಷಾ ಸೂತ್ರ ತಮಿಳುನಾಡಿಗೆ ಸ್ವೀಕಾರಾರ್ಹ ಎಂಬುದನ್ನು ಸಚಿವರಿಗೆ ಸ್ಪಷ್ಟವಾಗಿ ತಿಳಿಸಿದ್ದೇವೆ’ ಎಂದರು. 

ADVERTISEMENT

ಇದಕ್ಕೂ ಮುನ್ನ ಉತ್ತರ ನೀಡಿದ ಪ್ರಧಾನ್‌, ‘ಕೇಂದ್ರ, ರಾಜ್ಯ ಅಥವಾ ಸ್ಥಳೀಯ ಸಂಸ್ಥೆಗಳಿಂದ ನಿರ್ವಹಣೆಗೆ ಒಳಪಡುವ ಹಾಗೂ ಶಾಲೆಗಳನ್ನು ಬಲಪಡಿಸುವ ಪಿಎಂ ಶ್ರೀ ಯೋಜನೆ ಅನುಷ್ಠಾನದ ವಿಷಯದಲ್ಲಿ ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರವು ತನ್ನ ನಿಲುವನ್ನು ಬದಲಿಸಿದೆ’ ಎಂದು ದೂರಿದರು. 

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಸಂಬಂಧಪಟ್ಟ ರಾಜ್ಯ ಸರ್ಕಾರವು ಕೇಂದ್ರದೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು. ಪ್ರತಿಯಾಗಿ ಕೇಂದ್ರ ಸರ್ಕಾರವು ಅನುದಾನ ಒದಗಿಸುತ್ತದೆ. ಆರಂಭದಲ್ಲಿ ಸಹಿ ಹಾಕಲು ತಮಿಳುನಾಡು ಸರ್ಕಾರ ಒಪ್ಪಿಕೊಂಡಿತ್ತು. ರಾಜಕೀಯ ಕಾರಣಕ್ಕೆ ನಿಲುವು ಬದಲಿಸಿತು. ಕರ್ನಾಟಕ, ಹಿಮಾಚಲ ಪ್ರದೇಶ, ಪಂಜಾಬ್‌ ಸೇರಿದಂತೆ ಬಿಜೆಪಿಯೇತರ ಸರ್ಕಾರಗಳು ಇರುವ ರಾಜ್ಯಗಳು ಒಪ್ಪಂದಕ್ಕೆ ಸಹಿ ಹಾಕಿವೆ’ ಎಂದು ಅವರು ಹೇಳಿದರು. 

‘ಒಂದು ಹಂತದಲ್ಲಿ ಪಿಎಂ ಶ್ರೀ ಯೋಜನೆಗೆ ತಮಿಳುನಾಡು ಸರ್ಕಾರ ಒಪ್ಪಿಕೊಂಡಿತ್ತು. ತಮ್ಮನ್ನು ಭೇಟಿಯಾಗಲು ಬಂದಿದ್ದ ಹಲವು ಸಂಸದರು ಈ ವಿಷಯವನ್ನು ತಿಳಿಸಿದ್ದರು. ಆದರೆ, ರಾಜ್ಯಕ್ಕೆ ಹಿಂತಿರುಗಿದ ಬಳಿಕ ಯೂಟರ್ನ್‌ ಮಾಡಿದರು. ಅವರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಅವರು ಪ್ರಜಾಪ್ರಭುತ್ವ ವಿರೋಧಿಗಳು’ ಎಂದು ಅವರು ಕಿಡಿಕಾರಿದರು. 

‘ಎನ್‌ಇಪಿ ಜಾರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಶುರುವಿನಲ್ಲಿ ಒಪ್ಪಿದ್ದರು. ಆದರೆ, ಇದಕ್ಕಿದ್ದಂತೆ ಕೆಲವು ಸೂ‍ಪರ್ ಸಿಎಂಗಳು ಕಾಣಿಸಿಕೊಂಡ ಬಳಿಕ ರಾಜಕೀಯ ಮಾಡಲಾರಂಭಿಸಿದರು’ ಎಂದು ಅವರು ಆರೋಪಿಸಿದರು. ‘ಇವತ್ತು ಮಾರ್ಚ್‌ 10. ಒಪ್ಪಂದಕ್ಕೆ ಸಹಿ ಹಾಕಲು ತಮಿಳುನಾಡು ಸರ್ಕಾರಕ್ಕೆ ಇನ್ನೂ 20 ದಿನಗಳ ಕಾಲಾವಕಾಶ ಇದೆ’ ಎಂದು ಅವರು ತಿಳಿಸಿದರು. 

ಸಚಿವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಡಿಎಂಕೆ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆ ಕೈಬಿಡುವಂತೆ ಸದಸ್ಯರಿಗೆ ಲೋಕಸಭಾಧ್ಯಕ್ಷ ಓಂಬಿರ್ಲಾ ಮನವಿ ಮಾಡಿದರು. ‘ಸಂಸದೀಯ ಕಾರ್ಯವಿಧಾನವನ್ನು ಉಲ್ಲಂಘಿಸಬೇಡಿ’ ಎಂದು ಕಿವಿಮಾತು ಹೇಳಿದರು. ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ಕಾಂಗ್ರೆಸ್‌ ಹಾಗೂ ವಿಪಕ್ಷಗಳ ಸದಸ್ಯರು ಪ್ರತಿಭಟನೆಯಲ್ಲಿ ಕೈಜೋಡಿಸಿದರು. ಬಳಿಕ ಕಲಾಪವನ್ನು ಮಧ್ಯಾಹ್ನ 12 ಗಂಟೆಯ ವರೆಗೆ ಮುಂದೂಡಲಾಯಿತು. 

ಮಧ್ಯಾಹ್ನ ಕಲಾಪ ಪುನರಾರಂಭಗೊಂಡಾಗ ಡಿಎಂಕೆ ಸದಸ್ಯೆ ಕನಿಮೋಳಿ, ‘ಸಚಿವರು ಬಳಸಿದ ನಿರ್ದಿಷ್ಟ ಪದದಿಂದ ನನಗೆ ನೋವಾಗಿದೆ’ ಎಂದರು. 

ಶಿಕ್ಷಣ ಯೋಜನೆಗಳ ಅಡಿಯಲ್ಲಿ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡುವಂತೆ ವಿನಂತಿಸಲು ತಮಿಳುನಾಡು ಶಿಕ್ಷಣ ಸಚಿವರ ಜತೆಗೂಡಿ ಸಂಸದರು ಪ್ರಧಾನ್ ಅವರನ್ನು ಭೇಟಿ ಮಾಡಿದ್ದೆವು ಎಂದು ಅವರು ಹೇಳಿದರು.

‘ಎನ್‌ಇಪಿಯಲ್ಲಿ ಸಮಸ್ಯೆಗಳಿವೆ ಮತ್ತು ಅದನ್ನು ಪೂರ್ಣವಾಗಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇವೆ. ತ್ರಿಭಾಷಾ ಸೂತ್ರವು ತಮಿಳುನಾಡಿಗೆ ಸ್ವೀಕಾರಾರ್ಹವಲ್ಲ ಎಂದು ನಾವು ಹೇಳಿದ್ದೇವೆ. ರಾಜ್ಯದ ಸಂಸದರು ಎನ್‌ಇಪಿಯನ್ನು ಒಪ್ಪೇ ಇಲ್ಲ. ಜತೆಗೆ, ರಾಜ್ಯದ ಮುಖ್ಯಮಂತ್ರಿಯವರು ಪ್ರಧಾನಿ ಹಾಗೂ ಪ್ರಧಾನ್ ಅವರಿಗೆ ಪತ್ರ ಬರೆದಿದ್ದಾರೆ’ ಎಂದು ಅವರು ತಿಳಿಸಿದರು. 

‘ನನ್ನ ನಿರ್ದಿಷ್ಟ ಹೇಳಿಕೆಯಿಂದ ನೋವಾಗಿದ್ದರೆ ಅದನ್ನು ವಾಪಸ್‌ ಪಡೆಯುತ್ತೇನೆ’ ಎಂದು ಪ್ರಧಾನ್‌ ತಿಳಿಸಿದರು. 

ರಾಜ್ಯದ ಸಂಸದರು ಹಲವು ಸಲ ನನ್ನನ್ನು ಭೇಟಿ ಮಾಡಿದ್ದರು. ತಮಿಳುನಾಡಿನ ಶಿಕ್ಷಣ ಸಚಿವರು ಸಹ ನಿಯೋಗದ ಭಾಗವಾಗಿದ್ದರು. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂಬ ಮನೋಭಾವದಿಂದ ಅವರು ಬಂದಿದ್ದರು. ನಾನು ಮುಕ್ತ ಮನಸ್ಸಿನಿಂದ ಸ್ಪಂದಿಸಿದ್ದೇನೆ. ಕೆಲವೊಂದು ವಿಷಯಗಳನ್ನು ಒಪ್ಪಿಕೊಂಡಿದ್ದೇವೆ. ಈ ವಿಷಯವನ್ನು ಮುಖ್ಯಮಂತ್ರಿ ಗಮನಕ್ಕೆ ತಂದರು. ಕೆಲವೊಂದು ಸಮಸ್ಯೆಗಳು ಸೃಷ್ಟಿಯಾಗಿವೆ ಎಂದು ಸಂಸದರು ಅನೌಪಚಾರಿಕವಾಗಿ ನನಗೆ ತಿಳಿಸಿದರು. ಇದು ದುರದೃಷ್ಟಕರ’ ಎಂದರು. 

ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಕನಿಮೊಳಿ, ‘ರಾಜ್ಯದ ಮೇಲೆ ಯಾವುದೇ ವಿಷಯವನ್ನು ಹೇರಲು ಸಾಧ್ಯವಿಲ್ಲ. ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿದೆ. ರಾಜ್ಯಕ್ಕೆ ಸಮಾನ ಅಧಿಕಾರ ಇದೆ. ನೀವೇ ತೀರ್ಮಾನಿಸಿ ಅದನ್ನು ರಾಜ್ಯದ ಮೇಲೆ ಹೇರುವುದು ಏಕೆ’ ಎಂದು ಪ್ರಶ್ನಿಸಿದರು. 

‘ಎಪಿಕ್‌’ ಚರ್ಚೆಗೆ ವಿಪಕ್ಷ ಪಟ್ಟು 

ದೋಷಪೂರಿತ ಮತದಾರರ ಪಟ್ಟಿ ಕುರಿತು ಉಭಯ ಸದನಗಳಲ್ಲಿ ಚರ್ಚೆ ನಡೆಸಬೇಕು ಎಂದು ವಿರೋಧ ಪಕ್ಷದ ಸದಸ್ಯರು ಸೋಮವಾರ ಪಟ್ಟು ಹಿಡಿದರು.

ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಈ ವಿಷಯ ಪ್ರಸ್ತಾಪಿಸಿದರು. ‘ಎ‍ಪಿಕ್‌’ ಕುರಿತು ಕೂಡಲೇ ಚರ್ಚೆಯಾಗಬೇಕು ಎಂದು ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು. ಈ ಬೇಡಿಕೆಯನ್ನು ಸಭಾಪತಿ ತಿರಸ್ಕರಿಸಿದರು. ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ಮಾಡಿದರು.

ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಟಿಎಂಸಿ ಸಂಸದ ಸೌಗತ
ರಾಯ್‌, ‘ಮತದಾರರ ಪಟ್ಟಿಯಲ್ಲಿ ದೋಷ
ಗಳಿವೆ’ ಎಂದು ದೂರಿದರು. ‘ಮುರ್ಷಿದಾಬಾದ್‌ ಮತ್ತು ಬುರ್ದ್ವಾನ್‌ ಲೋಕಸಭಾ ಕ್ಷೇತ್ರಗಳು ಹಾಗೂ ಹರಿಯಾಣದಲ್ಲಿ ಒಂದೇ ರೀತಿಯ ಎಪಿಕ್‌ ಸಂಖ್ಯೆಗಳನ್ನು ಹೊಂದಿರುವ ಮತದಾರರು ಇದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬೊಟ್ಟು ಮಾಡಿ ತೋರಿಸಿದ್ದಾರೆ’ ಎಂದರು. 

‘ಈ ಪಟ್ಟಿಯಲ್ಲಿ ಗಂಭೀರ ನ್ಯೂನತೆಗಳಿವೆ. ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಇಂತಹ ಘಟನೆಗಳು ನಡೆದಿವೆ. ಮುಂದಿನ ವರ್ಷ ಚುನಾವಣೆ ನಡೆಯಲಿರುವ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಇದೇ ರೀತಿ ನಡೆಯುವ ಸಂಭವ ಇದೆ. ಒಟ್ಟು ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ಪರಿಷ್ಕರಿಸಲಿ. ಪಟ್ಟಿಯಲ್ಲಿ ಆಗಿರುವ ತಪ್ಪುಗಳ ಬಗ್ಗೆ ಚುನಾವಣಾ ಆಯೋಗ ಉತ್ತರಿಸಬೇಕು’ ಎಂದು ಆಗ್ರಹಿಸಿದರು. 

ಆಗ ಮಧ್ಯಪ್ರವೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ‘ಮತದಾರರ ಪಟ್ಟಿಗಳ ಕುರಿತು ಇಡೀ ವಿರೋಧ ಪಕ್ಷವು ಚರ್ಚೆಗೆ ಒತ್ತಾಯಿಸುತ್ತಿದೆ’ ಎಂದರು. 

‘ಮತದಾರರ ಪಟ್ಟಿಯನ್ನು ಸರ್ಕಾರ ಸಿದ್ಧಪಡಿಸುವುದಿಲ್ಲ ಎಂಬ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರ ಹೇಳಿಕೆಯನ್ನು ನಾವು ಒಪ್ಪುತ್ತೇವೆ. ಆದರೆ, ಈ ವಿಷಯದ ಕುರಿತು ವಿಸ್ತೃತ ಚರ್ಚೆಯಾಗಬೇಕು. ಇಡೀ ದೇಶದಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ. ಮಹಾರಾಷ್ಟ್ರ ಸೇರಿದಂತೆ ಪ್ರತಿಯೊಂದು ರಾಜ್ಯದಲ್ಲಿ ವಿರೋಧ ಪಕ್ಷಗಳು ಏಕ ಧ್ವನಿಯಲ್ಲಿ ಪ್ರಶ್ನೆಗಳನ್ನು ಕೇಳುತ್ತಿವೆ’ ಎಂದು ಗಮನ ಸೆಳೆದರು. 

ಟಿಎಂಸಿ ಸದಸ್ಯ ಕಲ್ಯಾಣ್‌ ಬ್ಯಾನರ್ಜಿ, ‘ದೇಶದಲ್ಲಿ ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ
ಗಳು ನಡೆಯುತ್ತಿಲ್ಲ’ ಎಂದರು.

ಎಪಿಕ್‌ ವಿಷಯದ ಬಗ್ಗೆ ಕೂಡಲೇ ಚರ್ಚೆಯಾಗಬೇಕು ಎಂದು ವಿಪಕ್ಷ ಸದಸ್ಯರು ರಾಜ್ಯಸಭೆಯಲ್ಲಿ ಆಗ್ರಹಿಸಿದರು. ಇದಕ್ಕೆ ಸಭಾಪತಿ ಅನುಮತಿ ನೀಡಲಿಲ್ಲ. ಇದರಿಂದ ಕುಪಿತಗೊಂಡ ಸದಸ್ಯರು ಸಭಾತ್ಯಾಗ ಮಾಡಿದರು. ‘ಯಾವುದೇ ವಿಷಯದ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧವಿದೆ. ಆದರೆ, ಸದನದಲ್ಲಿ ಚರ್ಚೆಗೆ ಕೆಲವು ನಿಯಮಗಳಿವೆ. ಅವರು ಚರ್ಚೆ ನಡೆಸಲು ಆಸಕ್ತರಾಗಿಲ್ಲ. ನಿಯಮ 267ರಡಿ ಸದನದ ವ್ಯವಹಾರಗಳನ್ನು ಸ್ಥಗಿತಗೊಳಿಸಿ ನಿರ್ದಿಷ್ಟ ವಿಷಯದ ಬಗ್ಗೆ ಚರ್ಚೆ ನಡೆಸಬೇಕು ಎಂದು ನೋಟಿಸ್‌ ನೀಡುವುದು ಸರಿಯಲ್ಲ. ಇದು ಕಲಾಪವನ್ನು ಹಾಳು ಮಾಡುವ ದುಷ್ಟ ಸಂಚು ಎಂದು ಸಭಾನಾಯಕ ಜೆ.‍ಪಿ.ನಡ್ಡಾ ಕಿಡಿಕಾರಿದರು. ಆರಂಭದಲ್ಲಿ ಖರ್ಗೆ ಅವರಿಗೆ ಮಾತನಾಡಲು ಅವಕಾಶ ನೀಡಲಾಯಿತು. ಆಗ ಅವರು ಎಪಿಕ್‌ ಬಗ್ಗೆ ಪ್ರಸ್ತಾಪಿಸಿದರು. ಉಪಸಭಾಪತಿ ಹರಿವಂಶ್‌ ಅವಕಾಶ ನಿರಾಕರಿಸಿದರು. ನೋಟಿಸ್‌ಗಳನ್ನು ತಿರಸ್ಕರಿಸಿದ್ದಕ್ಕೆ ವಿಪಕ್ಷ ಸದಸ್ಯರು ಘೋಷಣೆಗಳನ್ನು ಕೂಗಿದರು. 

ಚುನಾವಣಾ ಆಯೋಗದ ಲೋಪಗಳ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಟಿಎಂಸಿಯ ಸಾಕೇತ್‌ ಗೋಖಲೆ, ಸಾಗರಿಕಾ ಘೋಷ್, ಕಾಂಗ್ರೆಸ್‌ನ ‍ಪ್ರಮೋದ್‌ ತಿವಾರಿ ಹಾಗೂ ಅಜಯ್‌ ಮಾಕನ್‌ ನೋಟಿಸ್‌ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.