ADVERTISEMENT

ಶಿಕ್ಷಣ ಮಾಫಿಯಾ ಹಿತಕ್ಕಾಗಿ ಎನ್‌ಇಪಿ ರದ್ದು: ಮಾಜಿ ಶಿಕ್ಷಣ ಸಚಿವ ನಾಗೇಶ್

ಎನ್‌ಇಪಿ ರದ್ದು ಕ್ರಮದಿಂದ ವಿದ್ಯಾರ್ಥಿಗಳಿಗೆ ಅನ್ಯಾಯ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2023, 11:05 IST
Last Updated 18 ಆಗಸ್ಟ್ 2023, 11:05 IST
 ಬಿ.ಸಿ. ನಾಗೇಶ್
ಬಿ.ಸಿ. ನಾಗೇಶ್   

ಬೆಂಗಳೂರು: ಖಾಸಗಿ ಶಿಕ್ಷಣ ಮಾಫಿಯಾವನ್ನು ಪೋಷಿಸಲು, ಬಡ ವಿದ್ಯಾರ್ಥಿಗಳು ಮೆಕಾಲೆ ಶಿಕ್ಷಣ ಪದ್ಧತಿಯಲ್ಲೇ ಉಳಿಯುವಂತೆ ಮಾಡುವ ದುರುದ್ದೇಶದಿಂದ ಕಾಂಗ್ರೆಸ್‌ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು(ಎನ್‌ಇಪಿ) ಕೈಬಿಟ್ಟಿದೆ ಎಂದು  ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಟೀಕಿಸಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕರ್ನಾಟಕದ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ರಾಜ್ಯ ಸರ್ಕಾರದ ನಿರ್ಣಯ ಕೆಟ್ಟ ನಿರ್ಣಯವಾಗಲಿದೆ ಎಂದರು.

ಸಿದ್ದರಾಮಯ್ಯ ತಮ್ಮ ಮೊಮ್ಮಗನನ್ನು ಇಂಟರ್‌ ನ್ಯಾಷನಲ್‌ ಶಾಲೆಯಲ್ಲಿ ಓದಿಸುತ್ತಿದ್ದಾರೆ. ಇತರ ರಾಜಕಾರಣಿಗಳ ಮಕ್ಕಳು ಸಿಬಿಎಸ್‌ಸಿ, ಐಸಿಎಸ್‌ಇ ಮೂಲಕ ಆಧುನಿಕ ಶಿಕ್ಷಣ ಪಡೆಯುತ್ತಿದ್ದಾರೆ. ಬಡ ವಿದ್ಯಾರ್ಥಿಗಳು ಹಳೇ ಮಾದರಿಯ ಶಿಕ್ಷಣದಲ್ಲೇ ಉಳಿಯಬೇಕು. ಅವರು ಮುಂದಕ್ಕೆ ಬರಬಾರದು ಎಂಬ ಹುನ್ನಾರ ಇವರದು ಎಂದು ಹರಿಹಾಯ್ದರು.

ADVERTISEMENT

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಶಿಕ್ಷಣ ಇಲಾಖೆಯನ್ನು ರಾಜಕೀಯಕರಣಗೊಳಿಸುತ್ತಿದ್ದು, ಇದೇ ಕಾರಣಕ್ಕೆ  ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸುತ್ತಿದ್ದಾರೆ. ವಿದ್ಯಾರ್ಥಿಗಳ ಸ್ಪರ್ಧೆಯ ದೃಷ್ಟಿಯಿಂದಲೂ ಇದು ಸರಿಯಲ್ಲ. ನಮ್ಮ ಮಕ್ಕಳು ಹಿಂದಕ್ಕೆ ಉಳಿಯುತ್ತಾರೆ ಎಂದರು.

ದೇಶದ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾದ ಡಾ.ಕಸ್ತೂರಿರಂಗನ್‌ ಅಧ್ಯಕ್ಷತೆಯ ಸಮಿತಿ ಆರು ವರ್ಷಗಳ ಕಾಲ ಅಧ್ಯಯನ ನಡೆಸಿ ಶಿಫಾರಸು ಮಾಡಿತು. ಆಧುನಿಕ ಕಾಲಕ್ಕೆ ತಕ್ಕಂತೆ ನೀತಿಯನ್ನು ರೂಪಿಸಲಾಗಿತ್ತು. ಮುಖ್ಯಮಂತ್ರಿ ಸೇರಿ ಸರ್ಕಾರದಲ್ಲಿರುವ ಯಾರೂ ಅದನ್ನು ಓದದೇ ಕೈಬಿಡಲು ಮುಂದಾಗಿರುವುದು ದುರಾದೃಷ್ಟ. ರಾಜ್ಯದ ವಿದ್ಯಾರ್ಥಿಗಳನ್ನು ಹಿಂದುಳಿಯುವಂತೆ ಮಾಡುವ ನಿರ್ಧಾರವನ್ನು ತಳೆದಿದೆ ಎಂದು ಹೇಳಿದರು.

ಕಸ್ತೂರಿರಂಗನ್‌ ಅಧ್ಯಕ್ಷತೆಯ ಸಮಿತಿಯಲ್ಲಿ ದೇಶ– ವಿದೇಶಗಳಲ್ಲಿರುವ ಶ್ರೇಷ್ಠ ತಜ್ಞರು ಸದಸ್ಯರಾಗಿದ್ದರು. ಇವರು ತಮ್ಮ ಶಿಫಾರಸುಗಳನ್ನು ಸಾರ್ವಜನಿಕರ ಮುಂದಿಟ್ಟು, ಅಭಿಪ್ರಾಯ ಸಂಗ್ರಹಿಸಿದ್ದರು. ಸುಮಾರು 2 ಲಕ್ಷಕ್ಕೂ ಹೆಚ್ಚು ಸಲಹೆಗಳನ್ನು ಪಡೆದು ಅವುಗಳನ್ನು ಸೇರಿಸುವ ಪ್ರಯತ್ನ ಮಾಡಿದ್ದರು. ಗ್ರಾಮಸಭೆಗಳಲ್ಲೂ ಶಿಫಾರಸುಗಳ ಚರ್ಚೆಗೆ ಅವಕಾಶ ನೀಡಲಾಗಿತ್ತು ಎಂದು ನಾಗೇಶ್‌ ಹೇಳಿದರು.

ಭಾರತೀಯ ಆಲೋಚನೆಗೆ ಅನುಗುಣವಾಗಿ ಶಿಕ್ಷಣ ಪದ್ಧತಿ ಇರಬೇಕು ಎಂದು ಡಾ.ಅಂಬೇಡ್ಕರ್‌, ನೇತಾಜಿ ಸುಭಾಷ್‌ ಚಂದ್ರಬೋಸ್‌ ಅನೇಕ ಬಾರಿ ಹೇಳಿದ್ದರು. ಸ್ವದೇಶಿ ಯೋಚನೆಗಳನ್ನು ಶಿಕ್ಷಣದಲ್ಲಿ ತರಬೇಕೆಂದು ಮಹಾತ್ಮಗಾಂಧೀಜಿ ತಿಳಿಸಿದ್ದರು. ಕಾಂಗ್ರೆಸ್‌ ಸರ್ಕಾರಕ್ಕೆ ಅದ್ಯಾವುದೂ ಪಥ್ಯವಾಗುವುದಿಲ್ಲ. ‘ಕಾಂಗ್ರೆಸ್‌ ರೀಸರ್ಚ್‌ ಟೀಮ್‌’ನಿಂದ ಬಂದ ಸಲಹೆಗಳು ಮತ್ತು ಪಾಠಗಳನ್ನು ಸೇರಿಸಲು ನಿರ್ಧರಿಸಿದ್ದಾರೆ ಎಂದರು.

ರಾಜ್ಯದಲ್ಲಿ ಶಿಕ್ಷಣ ಸಚಿವರು ಯಾರು ಎಂಬುದೇ ಗೊತ್ತಾಗುತ್ತಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಮಧುಬಂಗಾರಪ್ಪ ಇವರಲ್ಲಿ ಯಾರು ಶಿಕ್ಷಣ ಸಚಿವರು? ಸರ್ಕಾರದ ಹಿಂದೆ ಇರುವ ಬುದ್ಧಿಜೀವಿಗಳು ಶಿಕ್ಷಣ ಸಚಿವರೇ? ಅವರು (ಬಿಜೆಪಿ) ತಂದಿದ್ದನ್ನು ನಾವ್ಯಾಕೆ ಮಾಡಬೇಕ್ರಿ ಎಂಬ ಹಾರಿಕೆ ಉತ್ತರ ನೀಡುತ್ತಿರುವುದು ಸರಿಯಲ್ಲ. ಇದು ಉಡಾಫೆಯ ಪರಮಾವಧಿ ಎಂದರು.

ಹಿಂದೆ ಡಾ. ಮನಮೋಹನ್ ಸಿಂಗ್‌ ತಂದ ಶಿಕ್ಷಣ ನೀತಿಯನ್ನು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಯಾವುದೇ ತಕರಾರು ಮಾಡದೇ ಜಾರಿಗೆ ತಂದರು. ಈಗಿನ ಸರ್ಕಾರ ರಾಜಕೀಯ ಅಜೆಂಡಾವನ್ನು ಮುಂದಿಟ್ಟುಕೊಂಡು ಎನ್‌ಇಪಿಯನ್ನು ವಿರೋಧಿಸುತ್ತಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಕೋಟ ಶ್ರೀನಿವಾಸಪೂಜಾರಿ, ವಿಧಾನಪರಿಷತ್‌ನ ಮಾಜಿ ಸದಸ್ಯ ಅರುಣ್ ಶಹಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.