ADVERTISEMENT

ನೀತಿಗೆ ಕಾನೂನು ರೂಪ ಸಿಗಲಿ: ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್‌

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 21:00 IST
Last Updated 23 ಜುಲೈ 2020, 21:00 IST
ಪ್ರೊ.ರವಿವರ್ಮಕುಮಾರ್‌
ಪ್ರೊ.ರವಿವರ್ಮಕುಮಾರ್‌   

ಬೆಂಗಳೂರು: ‘ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕು ಎಂಬ ನೀತಿಗೆ ಮೊದಲು ಕಾನೂನು ರೂಪ ಸಿಗಬೇಕು. ಆದಾಗ ಮಾತ್ರ ಇದು ಅನುಷ್ಠಾನವಾಗುತ್ತದೆ’ ಎಂದು ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್‌ ಹೇಳಿದರು.

‘ಈಗಾಗಲೇ ಇರುವ ಕೈಗಾರಿಕೆಗಳಲ್ಲಿ ಈ ನೀತಿ ಕಾರ್ಯರೂಪಕ್ಕೆ ತರುತ್ತಾರೋ ಅಥವಾ ಹೊಸದಾಗಿ ಪ್ರಾರಂಭವಾಗುವ ಉದ್ಯಮಗಳಿಗೆ ಮಾತ್ರ ಅನ್ವಯಿಸುತ್ತಾರೋ ಎಂಬುದನ್ನು ನೋಡಬೇಕಿದೆ’ ಎಂದರು.

‘ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಿದ್ದರೆ ಮಾತ್ರ ಭೂಮಿ ನೀಡುವುದು ಅಥವಾ ಪರವಾನಗಿ ನೀಡಲಾಗುವುದು ಎಂಬ ಷರತ್ತುಗಳನ್ನು ಹಾಕುವ ಮೂಲಕ ಹೊಸ ಉದ್ಯಮಗಳಲ್ಲಿ ಈ ನೀತಿಯನ್ನು ಸರ್ಕಾರ ಕಾರ್ಯರೂಪಕ್ಕೆ ತರಲು ಸಾಧ್ಯವಿದೆ’ ಎಂದು ಅಭಿಪ್ರಾಯ ಪಟ್ಟರು.

‘ಕನ್ನಡಿಗರಿಗೆ ಮೀಸಲಾತಿ ನೀಡುವ ವೇಳೆ ಕನ್ನಡಿಗರು ಎಂದರೆ ಯಾರು ಎಂಬುದನ್ನು ವ್ಯಾಖ್ಯಾನಿಸಬೇಕಾಗುತ್ತದೆ. ‌ಕನ್ನಡ ಮಾಧ್ಯಮದಲ್ಲಿ ಓದಿದವರೇ, ಕನ್ನಡ ಮಾತನಾಡುವವರೇ ಅಥವಾ ಕರ್ನಾಟಕದಲ್ಲಿ ವಾಸಿಸುವವರು ಕನ್ನಡಿಗರೇ ಎಂಬುದನ್ನು ತಿಳಿಸಬೇಕು. ಆದರೆ, ಹೀಗೆ ವಾಸಸ್ಥಳ ಅಥವಾ ಪ್ರದೇಶಕ್ಕೆ ಸಂಬಂಧಿಸಿದಂತೆ ಮೀಸಲಾತಿ ಅನ್ವಯಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲ. ಇದು ಸಂಸತ್ತಿನ ಕೆಲಸ. ಈ ಕುರಿತು ಕಾನೂನು ರೂಪಿಸುವುದು ತುಂಬಾ ಸೂಕ್ಷ್ಮ ಮತ್ತು ಸಂಕೀರ್ಣ ಕಾರ್ಯ’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.