ADVERTISEMENT

ಲಾಕ್‌ಡೌನ್‌ ಬಳಿಕ ದೇಗುಲಗಳಲ್ಲಿ ತೀರ್ಥ, ಪ್ರಸಾದದ ಬದಲು ಸ್ಯಾನಿಟೈಸರ್?!

​ಪ್ರಜಾವಾಣಿ ವಾರ್ತೆ
Published 13 ಮೇ 2020, 11:19 IST
Last Updated 13 ಮೇ 2020, 11:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಲಾಕ್‌ಡೌನ್‌ ಬಳಿಕ ನೀವು ದೇವಾಲಯಗಳಿಗೆ ಹೋದರೆ ಅರ್ಚಕರು ತೀರ್ಥ, ಪ್ರಸಾದದ ಬದಲು ಸ್ಯಾನಿಟೈಸರ್‌, ಹಣೆಗೆ ತಿಲಕವಿಡುವ ಬದಲು ಜ್ವರ ಮಾಪನ ಸಾಧನ (ಸೆನ್ಸಾರ್) ಇಡಬಹುದು!

ದೇಗುಲಗಳಲ್ಲಿ ಇನ್ನು ಮುಂದೆ ಇದು ಕೂಡ ಆಚರಣೆಯ ಒಂದು ಭಾಗವಾಗಬಹುದು. ಲಾಕ್‌ಡೌನ್‌ ಸಮಯದಲ್ಲೂ ಕೆಲವು ದೇವಾಲಯಗಳಲ್ಲಿ ದೈನಂದಿನ ಪೂಜೆ ಪುನಸ್ಕಾರಗಳು ನಡೆದಿವೆ. ಕೋವಿಡ್‌ ಹರಡುವ ಭೀತಿಯಿಂದಾಗಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

ಲಾಕ್‌ಡೌನ್‌ ಬಳಿಕ ದೇಗುಲಗಳನ್ನು ತೆರೆಯುವಂತೆ ಭಕ್ತರು ಮತ್ತು ಅರ್ಚಕರು ಒತ್ತಾಯಿಸುತ್ತಿದ್ದಾರೆ. ಅದಕ್ಕಾಗಿ ಮುಜರಾಯಿ ಇಲಾಖೆ ಅಗತ್ಯ ಮುಂಜಾಗ್ರತಾ ಕಾರ್ಯವಿಧಾನಗಳನ್ನು ಸಿದ್ಧಪಡಿಸುತ್ತಿದೆ. ಲಾಕ್‌ಡೌನ್‌ ಬಳಿಕ ದೇವಾಲಯಗಳಲ್ಲಿ ಸ್ಯಾನಿಟೈಸರ್‌ ನೀಡುವುದು ಹಾಗೂ ಸಾಮಾಜಿಕ ಅಂತರ ಕಡ್ಡಾಯ ಎನ್ನಲಾಗಿದೆ. ತೀರ್ಥ ಮತ್ತು ಪ್ರಸಾದ ವಿತರಣೆಗೆ ಅವಕಾಶ ಇರುವುದಿಲ್ಲ ಎಂಬುದನ್ನು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ADVERTISEMENT

34 ಸಾವಿರಕ್ಕೂ ಹೆಚ್ಚು ದೇವಾಲಯಗಳು ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರುತ್ತವೆ . ದೇವಾಲಯಗಳನ್ನು ತೆರೆಯುವ ಬಗ್ಗೆ ಚರ್ಚಿಸಲು ಧಾರ್ಮಿಕ ಪರಿಷತ್ತಿನ ಸಭೆ ಕರೆದು ಚರ್ಚಿಸಿದ ಬಳಿಕವೇ ತೀರ್ಮಾನ ಮಾಡಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಜಾವಾಣಿಗೆ ತಿಳಿಸಿದ್ದಾರೆ.

ಭಕ್ತರು ದೇಗುಲಗಳಿಗೆ ಹಣ್ಣು, ಹೂ, ತೆಂಗಿನ ಕಾಯಿ ತರದಂತೆ ನಿರ್ಬಂಧ ವಿಧಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇದರಿಂದ ದೇವಾಲಯಗಳ ಮುಂದೆ ಹೂ, ಹಣ್ಣು ತೆಂಗಿನಕಾಯಿ ಮಾರಾಟ ಮಾಡಿ ಜೀವನ ನಡೆಸುವ ಕುಟುಂಬಗಳು ಬೀದಿಗೆ ಬರಲಿವೆ ಎಂದು ಹಿರಿಯ ಅರ್ಚಕರು ಆತಂಕ ವ್ಯಕ್ತಪಡಿಸಿದ್ದಾರೆ.

ಆದಾಗ್ಯೂ ಯಾವುದೇ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಮುನ್ನ ಹಿರಿಯ ಅರ್ಚಕರನ್ನು ಸಂಪರ್ಕಿಸಿ ಅಭಿಪ್ರಾಯ ಪಡೆದುಕೊಳ್ಳಲಾಗುವುದು. ಅರ್ಚಕರಿಗೆ ವಿಶೇಷ ಪ್ಯಾಕೇಜ್‌ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.