ADVERTISEMENT

ಹೊಸ ವರ್ಷಾಚರಣೆ ಸಂಭ್ರಮ ಪ್ರವಾಸಿ ತಾಣಗಳಲ್ಲಿ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 21:50 IST
Last Updated 30 ಡಿಸೆಂಬರ್ 2019, 21:50 IST

ಮೈಸೂರು/ಮಂಡ್ಯ: ಚಾಮುಂಡಿಬೆಟ್ಟದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಿಷೇಧಿಸಲಾಗಿದೆ. ಡಿ.31ರ ಸಂಜೆ 7ರಿಂದ ಜ.1ರ ಬೆಳಿಗ್ಗೆ 6 ರ ವರೆಗೆ ಬೆಟ್ಟಕ್ಕೆ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಉತ್ತನಹಳ್ಳಿ, ದೈವಿವನ, ಲಲಿತ ಮಹಲ್, ಚಾಮುಂಡಿಬೆಟ್ಟದ ಪಾದದ ಬಳಿ ಇರುವ ದ್ವಾರಗಳಲ್ಲಿ ಪ್ರವೇಶ ಇರುವುದಿಲ್ಲ. ತಾವರೆಕಟ್ಟೆ ದ್ವಾರದಲ್ಲಿ ಚಾಮುಂಡಿಬೆಟ್ಟದ ನಿವಾಸಿಗಳಿಗಷ್ಟೇ ಪ್ರವೇಶಾವಕಾಶ ಇರಲಿದೆ. ಬೆಟ್ಟ ಹಾಗೂ ಬೆಟ್ಟದ ತಪ್ಪಲಿನಲ್ಲಿ ಸಂಭ್ರಮಾಚರಣೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.

ಕಾವೇರಿ ನದಿ ತೀರದಲ್ಲಿ ನಿಷೇಧಾಜ್ಞೆ: ಹೊಸ ವರ್ಷಾಚರಣೆಯ ಮೋಜು, ಮಸ್ತಿ ತಡೆಗೆ ಪೊಲೀಸರು ಕ್ರಮ ಕೈಗೊಂಡಿದ್ದು ಮಂಡ್ಯ ಜಿಲ್ಲಾ
ವ್ಯಾಪ್ತಿಯ ಕಾವೇರಿ ನದಿ ತೀರ ಹಾಗೂ ವಿವಿಧೆಡೆ ಡಿ.31 ಬೆಳಿಗ್ಗೆ 6 ರಿಂದ ಜ.1 ಸಂಜೆ 6ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ADVERTISEMENT

ಶ್ರೀರಂಗಪಟ್ಟಣ ತಾಲ್ಲೂಕಿನ ಬಲಮುರಿ, ಕೆಆರ್‌ಎಸ್‌ ಜಲಾಶಯದ ಹಿನ್ನೀರು ಪ್ರದೇಶ, ಕರಿಘಟ್ಟದ ಅರಣ್ಯ, ಮಹದೇವಪುರ, ಗಂಜಾಂ, ಕಾವೇರಿ ಬೋರೆ ದೇವರ ದೇವಾಲಯ, ಮಂಡ್ಯ ಕೊಪ್ಪಲು, ಘೋಸಾಯಿ ಘಾಟ್‌, ರಾಜ ಪರಮೇಶ್ವರಿ ಸೇತುವೆ, ಕಾರೆಕುರ ಬಳಿ ಕಾವೇರಿ ನದಿ ತೀರಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಿ ಮಂಡ್ಯ ಜಿಲ್ಲಾ ಎಸ್‌.ಪಿ ಕೆ.ಪರಶುರಾಮ್‌ ಆದೇಶಿಸಿದ್ದಾರೆ.

ಬಂಡೀಪುರದ‌ಲ್ಲಿ ನಿರ್ಬಂಧ: ವನ್ಯಜೀವಿಗಳಿಗೆ ತೊಂದರೆಯಾಗುವ ಚಟುವಟಿಕೆ ನಡೆಸದಂತೆ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿರುವ ಖಾಸಗಿ ರೆಸಾರ್ಟ್‌ ಮತ್ತು ವಸತಿ ನಿಲಯಗಳ ಮಾಲೀಕರಿಗೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ.

*

ಸಂಗಮ, ಮೇಕೆದಾಟು ಪ್ರವೇಶವಿಲ್ಲ
ರಾಮನಗರ: ಹೊಸ ವರ್ಷಾಚರಣೆ ನೆಪದಲ್ಲಿ ಪ್ರಾಕೃತಿಕ ತಾಣಗಳಲ್ಲಿ ಮೋಜು–ಮಸ್ತಿ ಮಾಡುವುದಕ್ಕೆ ಅರಣ್ಯ ಇಲಾಖೆ ನಿಷೇಧ ಹೇರಿದೆ. ಡಿ.31ರ ಸಂಜೆಯಿಂದ ಜ.1ರ ಮಧ್ಯರಾತ್ರಿವರೆಗೂ ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ.

ರಾಮನಗರ ಜಿಲ್ಲೆಯ ಸಂಗಮ, ಮೇಕೆದಾಟು, ಮುತ್ತತ್ತಿ ಅರಣ್ಯ ಪ್ರದೇಶದ ರಸ್ತೆಗಳು ಬಂದ್ ಆಗಲಿವೆ. ಅರಣ್ಯ ಇಲಾಖೆಯ ಸಿಬ್ಬಂದಿ ಕಾವಲು ಕಾಯಲಿದ್ದಾರೆ.

ನಂದಿಬೆಟ್ಟ: ಪ್ರವೇಶ ನಿರ್ಬಂಧ
ಚಿಕ್ಕಬಳ್ಳಾಪುರ: ಹೊಸ ವರ್ಷದ ಹಿನ್ನೆಲೆಯಲ್ಲಿ ತಾಲ್ಲೂಕಿನ ನಂದಿಗಿರಿಧಾಮಕ್ಕೆ ಡಿ.31ರ ಸಂಜೆ 4ರಿಂದ ಜ.1ರ ಬೆಳಿಗ್ಗೆ 8ರವರೆಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ.

ಈ ವೇಳೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವ ಸಾಧ್ಯತೆ ಇದೆ. ಪರಿಸರ ರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಪ್ರವೇಶ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಆದೇಶದಲ್ಲಿ ತಿಳಿಸಿದ್ದಾರೆ.

ನಂದಿಗಿರಿಧಾಮಕ್ಕೆ ಸಾಗುವ ರಸ್ತೆ ಸಾಕಷ್ಟು ಅಂಕು ಡೊಂಕಿನಿಂದ ಕೂಡಿದೆ. ಹೊಸ ವರ್ಷದ ಪ್ರಯುಕ್ತ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವ ಸಾಧ್ಯತೆ ಹೆಚ್ಚಿದೆ. ಇದರಿಂದ ಅಪಘಾತಗಳು ಸಂಭವಿಸುತ್ತವೆ. ಮುಂಜಾಗ್ರತೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಹೊಸ ವರ್ಷದ ಹಿನ್ನೆಲೆಯಲ್ಲಿ ತಾಲ್ಲೂಕಿನ ನಂದಿಗಿರಿಧಾಮಕ್ಕೆ ಡಿ.31ರ ಸಂಜೆ 4ರಿಂದ ಜ.1ರ ಬೆಳಿಗ್ಗೆ 8ರವರೆಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ.

ಈ ವೇಳೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವ ಸಾಧ್ಯತೆ ಇದೆ. ಪರಿಸರ ರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಪ್ರವೇಶ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಆದೇಶದಲ್ಲಿ ತಿಳಿಸಿದ್ದಾರೆ.

ನಂದಿಗಿರಿಧಾಮಕ್ಕೆ ಸಾಗುವ ರಸ್ತೆ ಸಾಕಷ್ಟು ಅಂಕು ಡೊಂಕಿನಿಂದ ಕೂಡಿದೆ. ಹೊಸ ವರ್ಷದ ಪ್ರಯುಕ್ತ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವ ಸಾಧ್ಯತೆ ಹೆಚ್ಚಿದೆ. ಇದರಿಂದ ಅಪಘಾತಗಳು ಸಂಭವಿಸುತ್ತವೆ. ಮುಂಜಾಗ್ರತೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.