ಬೆಂಗಳೂರು: ದೇಶದ ಹಲವೆಡೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಮನೋವೈದ್ಯ, ಎಎಸ್ಐ ಹಾಗೂ ಶಂಕಿತ ಉಗ್ರನ ತಾಯಿಯನ್ನು ಬಂಧಿಸಿರುವ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು, ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಭಯೋತ್ಪಾದನೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಟಿ.ನಾಸೀರ್ ಜೊತೆಗೆ ಮೂವರು ಸಂಪರ್ಕ ಹೊಂದಿರುವುದಕ್ಕೆ ಸುಳಿವು ಸಿಕ್ಕಿದ್ದು, ಅದನ್ನು ಆಧರಿಸಿ ಎನ್‌ಐಎ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಕೋಲಾರ ಹಾಗೂ ಬೆಂಗಳೂರಿನ ಐದು ಸ್ಥಳಗಳಲ್ಲಿ ದಾಳಿ ನಡೆಸಿ ಮಹತ್ವದ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ.
ಬಂಧಿತರಾದ ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ ನಾಗರಾಜ್, ಎಎಸ್‌ಐ ಚಾಂದ್ ಪಾಷಾ ಹಾಗೂ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಶಂಕಿತ ಉಗ್ರ ಜುನೈದ್ ಅಹಮದ್‌ನ ತಾಯಿ ಅನೀಸ್ ಫಾತೀಮಾ ಅವರನ್ನು ಬುಧವಾರ ಮಧ್ಯಾಹ್ನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಹೆಚ್ಚಿನ ವಿಚಾರಣೆ ನಡೆಸಬೇಕಿದ್ದು, ಆರು ದಿನ ಆರೋಪಿಗಳನ್ನು ಕಸ್ಟಡಿಗೆ ನೀಡುವಂತೆ ಎನ್‌ಐಎ ಪರ ವಕೀಲರು ಮನವಿ ಮಾಡಿದರು. ಜುಲೈ 14ರವರೆಗೆ ಮೂವರು ಆರೋಪಿಗಳನ್ನು ಕಸ್ಟಡಿಗೆ ನೀಡಿ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯವು ಆದೇಶಿಸಿತು.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಂಕಿತ ಉಗ್ರರು ಹಾಗೂ ರೌಡಿಗಳಿಗೆ ಮನೋವೈದ್ಯ ನಾಗರಾಜ್ ತನ್ನ ಸಹಾಯಕಿ ಪವಿತ್ರಾ ಮೂಲಕ ಮೊಬೈಲ್ ಪೂರೈಸುತ್ತಿದ್ದ ಎಂದು ಮೂಲಗಳು ಹೇಳಿವೆ.
‘₹10 ಸಾವಿರಕ್ಕೆ ಮೊಬೈಲ್ ಖರೀದಿಸಿ ಕೈದಿಗಳಿಗೆ ₹50 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ. ನೂರಾರು ಕೈದಿಗಳಿಗೆ ಮೊಬೈಲ್ ಮಾರಾಟ ಮಾಡಿರುವ ಸುಳಿವು ಸಿಕ್ಕಿದೆ. ಜೀವಾವಧಿ ಶಿಕ್ಷೆ ಎದುರಿಸುತ್ತಿರುವ ಟಿ.ನಾಸೀರ್‌ಗೂ ನಾಗರಾಜ್ ಮೊಬೈಲ್ ಪೂರೈಸಿದ್ದ’ ಎಂದು ಎನ್ಐಎ ಮೂಲಗಳು ತಿಳಿಸಿವೆ.
‘ಸಿಸಿಬಿ ದಾಳಿಯಿಂದ ಶಂಕಿತ ಉಗ್ರ ಸಲ್ಮಾನ್ ತಪ್ಪಿಸಿಕೊಳ್ಳಲು ಎಎಸ್‌ಐ ಚಾಂದ್ ಪಾಷಾ ನೆರವಾಗಿದ್ದ. ಸುಲ್ತಾನ್‌ಪಾಳ್ಯ, ಭದ್ರಪ್ಪ ಲೇಔಟ್‌ನಲ್ಲಿ ಶಂಕಿತ ಉಗ್ರರ ಮನೆಗಳ ಮೇಲೆ ಎನ್ಐಎ ತಂಡವು ದಾಳಿ ನಡೆಸಿದಾಗ ಚಾಂದ್ ಪಾಷಾ ಶಂಕಿತರ ಉಗ್ರರ ಪರವಾಗಿ ಕೆಲಸ ಮಾಡಿದ್ದು ತನಿಖೆಯಿಂದ ಗೊತ್ತಾಗಿದೆ. ಉಗ್ರ ನಾಸೀರ್ ಹಾಗೂ ಆತನ ಸಹಚರರನ್ನು ಯಾವ ನ್ಯಾಯಾಲಯಕ್ಕೆ ಕರೆದೊಯ್ಯಲಾಗುತ್ತಿದೆ ಎಂಬ ಮಾಹಿತಿಯನ್ನು ಮೊದಲೇ ಸೋರಿಕೆ ಮಾಡುತ್ತಿದ್ದ’ ಎಂದು ಎನ್ಐಎ ಮೂಲಗಳು ತಿಳಿಸಿವೆ.
‘ಟಿ.ನಾಸೀರ್ ಜತೆಗೆ ಅನೀಸ್ ಫಾತೀಮಾ ನಿರಂತರ ಸಂಪರ್ಕದಲ್ಲಿದ್ದಳು. ಲಷ್ಕರ್ ಎ ತಯಬಾ (ಎಲ್‌ಇಟಿ) ಸಂಘಟನೆಗೆ ಹಣ ಸಂಗ್ರಹಿಸುವಂತೆ ಅನೀಸ್ ಫಾತೀಮಾಗೆ ನಾಸೀರ್ ಜೈಲಿನಿಂದಲೇ ಸೂಚನೆ ನೀಡುತ್ತಿದ್ದ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಅಹಮದ್‌ಗೆ ಫಾತಿಮಾ ಈ ಮಾಹಿತಿಯನ್ನು ರವಾನೆ ಮಾಡುತ್ತಿದ್ದಳು’ ಎಂದು ಮೂಲಗಳು ಹೇಳಿವೆ.
ಆರ್.ಟಿ.ನಗರದ ಸುಲ್ತಾನ್ ಪಾಳ್ಯದ ಸೈಯದ್ ಸುಹೈಲ್ ಖಾನ್, ಕೊಡಿಗೇಹಳ್ಳಿಯ ಮಹಮದ್ ಉಮರ್, ಭದ್ರಪ್ಪ ಲೇಔಟ್‌ನ ಜಾಹೀದ್ ತಬ್ರೇಜ್, ಮುದಾಸೀರ್ ಪಾಷಾ, ಮಹಮದ್ ಫೈಸಲ್ ಎಂಬುವರು ಜೈಲಿನಲ್ಲಿ ಟಿ.ನಾಸೀರ್ ಸಂಪರ್ಕಕ್ಕೆ ಬಂದಿದ್ದರು. ಜೈಲಿನಲ್ಲಿದ್ದ ಟಿ.ನಾಸೀರ್ ಸಂಪರ್ಕದಿಂದಾಗಿ ಉಗ್ರಗಾಮಿ ಚಟುವಟಿಕೆಯತ್ತ ಹೆಜ್ಜೆ ಹಾಕಿದ್ದರು. ಟಿ.ನಾಸೀರ್‌ಗೆ ಜೈಲಿನಲ್ಲಿ ಪ್ರತ್ಯೇಕ ಬ್ಯಾರಕ್ ನೀಡಲಾಗಿತ್ತು. 2017ರ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಜುನೈದ್ ಅಹಮದ್ ಸಹ ನಾಸೀರ್ ಸಂಪರ್ಕಕ್ಕೆ ಬಂದಿದ್ದ. ಜೈಲಿನೊಳಗೆ ಊಟ, ಕಾಫಿ ಹಾಗೂ ಕೆಲಸದ ಸಮಯದಲ್ಲಿ ಎಲ್ಲರೂ ಒಟ್ಟಿಗೆ ಸೇರುತ್ತಿದ್ದರು. ಆ ಸಮಯದಲ್ಲಿ ನಾಸೀರ್ ಎಲ್ಲರಿಗೂ ಉಗ್ರ ಕೃತ್ಯಕ್ಕೆ ಪ್ರೇರೇಪಿಸುತ್ತಿದ್ದ. ಬಾಂಬ್ ಸ್ಫೋಟ, ಶಸ್ತ್ರಾಸ್ತ್ರ ಬಳಕೆಯ ಬಗ್ಗೆ ಮಾಹಿತಿ ನೀಡುತ್ತಿದ್ದ. ಶಂಕಿತ ಉಗ್ರರ ಜತೆಗೆ ನಂಟು ಹೊಂದಿದ್ದ ಆರೋಪದಡಿ ಈಗ ಮೂವರನ್ನು ಬಂಧಿಸಲಾಗಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.