ADVERTISEMENT

ಗಲಭೆ ಪ್ರಕರಣ: ಜಮೀರ್, ರಿಜ್ವಾನ್ ವಿಚಾರಣೆ

ಎನ್‍ಐಎ ಕಚೇರಿಗೆ ಹಾಜರಾದ ಶಾಸಕರು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 20:20 IST
Last Updated 14 ಅಕ್ಟೋಬರ್ 2020, 20:20 IST
   

ಬೆಂಗಳೂರು: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರಾದ ಜಮೀರ್ ಅಹಮದ್‌ ಖಾನ್‌ ಹಾಗೂ ರಿಜ್ವಾನ್ ಅರ್ಷದ್ ಅವರನ್ನು ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ವಿಚಾರಣೆ ನಡೆಸಿದೆ.

ಪ್ರಕರಣ ಸಂಬಂಧ ಮಾಹಿತಿ ಕಲೆಹಾಕುವ ಸಲುವಾಗಿ ದೊಮ್ಮಲೂರಿನಲ್ಲಿರುವ ಎನ್‍ಐಎ ಕಚೇರಿಗೆ ಬರುವಂತೆ ಅಧಿಕಾರಿಗಳು ದೂರವಾಣಿ ಮೂಲಕ ಇಬ್ಬರೂ ಶಾಸಕರಿಗೆ ತಿಳಿಸಿದ್ದರು. ಅದರಂತೆ ರಿಜ್ವಾನ್ ಅರ್ಷದ್ ಸೋಮವಾರ (ಅ.12) ಹಾಗೂ ಜಮೀರ್ ಅಹಮದ್ ಮಂಗಳವಾರ (ಅ.13) ಎನ್‍ಐಎ ವಿಚಾರಣೆ ಎದುರಿಸಿದರು.

ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಶಾಸಕ ರಿಜ್ವಾನ್, ‘ಎನ್‍ಐಎ ನಮಗೆ ನೋಟಿಸ್ ನೀಡಲಿಲ್ಲ. ಮಾಹಿತಿ ಪಡೆಯಲು ಸಹಕರಿಸುವಂತೆ ಕರೆ ಮಾಡಿದ್ದರು. ಗಲಭೆ ವೇಳೆ ಏನೆಲ್ಲಾ ನಡೆದಿದೆ ಎಂಬುದರ ಬಗ್ಗೆ ಎನ್‍ಐಎ ಮಾಹಿತಿ ಕಲೆ ಹಾಕುತ್ತಿದೆ. ನನಗೆ ಗೊತ್ತಿರುವ ಮಾಹಿತಿಯನ್ನು ನೀಡಿದ್ದೇನೆ. ಜಮೀರ್ ಸಹ ಮಾಹಿತಿ ನೀಡಿದ್ದಾರೆ. ತನಿಖೆಗೆ ಮುಂದೆಯೂ ಸಹಕರಿಸುತ್ತೇವೆ’ ಎಂದಿದ್ದಾರೆ.

ADVERTISEMENT

‘ಗಲಭೆ ನಿಯಂತ್ರಿಸಲು ಸಹಕಾರ ಕೋರಿ ಪೊಲೀಸ್ ಅಧಿಕಾರಿಗಳು ಕೇಳಿಕೊಂಡ ಕಾರಣ ಗಲಭೆ ಸ್ಥಳಕ್ಕೆ ಭೇಟಿ ನೀಡಿದೆವು. ಆದರೆ, ಪರಿಸ್ಥಿತಿ ಹದ್ದುಮೀರಿತ್ತು. ಅಲ್ಲಿನ ಸಂಗತಿಗಳ ವಿಚಾರವಾಗಿ ಮಾಹಿತಿ ಹಂಚಿಕೊಂಡಿದ್ದೇವೆ. ಪ್ರಕರಣದ ತನಿಖೆಯಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದು. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.