ADVERTISEMENT

ಧರ್ಮಸ್ಥಳ ಪ್ರಕರಣ: ಎನ್‌ಐಎ ತನಿಖೆಗೆ ಸಂತರಿಂದ ಮನವಿ

ಕೇಂದ್ರ ಸಚಿವ ಶಾ ಭೇಟಿಯಾದ ಸ್ವಾಮೀಜಿಗಳ ನಿಯೋಗ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 13:47 IST
Last Updated 4 ಸೆಪ್ಟೆಂಬರ್ 2025, 13:47 IST
ಸಂತರ ನಿಯೋಗವು ಅಮಿತ್‌ ಶಾ ಅವರಿಗೆ ಮನವಿ ಸಲ್ಲಿಸಿತು. 
ಸಂತರ ನಿಯೋಗವು ಅಮಿತ್‌ ಶಾ ಅವರಿಗೆ ಮನವಿ ಸಲ್ಲಿಸಿತು.     

ನವದೆಹಲಿ: ಧರ್ಮಸ್ಥಳ ‍ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಮೂಲಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಸನಾತನ ಸಂತರ ನಿಯೋಗವು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಮನವಿ ಸಲ್ಲಿಸಿತು. 

‘ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಇದು ಸನಾತನ ಹಾಗೂ ಜೈನ ಧರ್ಮದ ಮೇಲಿನ ದಾಳಿ. ಇಂತಹ ಕೃತ್ಯ ನಡೆಸುತ್ತಿರುವವರನ್ನು ಕೇಂದ್ರ ಸರ್ಕಾರ ಪತ್ತೆ ಹಚ್ಚಿ ಶಿಕ್ಷಿಸಬೇಕು’ ಎಂದು ನಿಯೋಗ ಒತ್ತಾಯಿಸಿದೆ.

ಮುನಿಗಳು, ಆಚಾರ್ಯರು ಹಾಗೂ ಸ್ವಾಮೀಜಿಗಳನ್ನು ಗುರಿಯಾಗಿಸಿಕೊಂಡು ಕೆಲವೊಂದು ಯೂಟ್ಯೂಬರ್‌ಗಳು ಮಾನಹಾನಿಕರ ವಿಡಿಯೊಗಳನ್ನು ಮಾಡುತ್ತಿದ್ದಾರೆ. ಈ ಸಂಬಂಧ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. 

ADVERTISEMENT

‘ಮಠ, ಮಂದಿರ, ಸಾಧು–ಸಂತರು ಹಾಗೂ ಧರ್ಮಾಧಿಕಾರಿಗಳ ವಿರುದ್ಧದ ಷಡ್ಯಂತ್ರಗಳಿಗೆ ಕಡಿವಾಣ ಹಾಕಲು ಹೊಸ ಕಾನೂನನ್ನು ಜಾರಿಗೆ ತರಬೇಕು’ ಎಂದು ನಿಯೋಗ ಆಗ್ರಹಿಸಿದೆ. 

ಬಳಿಕ ನಿಯೋಗವು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಅವರಿಗೂ ಮನವಿ ಸಲ್ಲಿಸಿತು. 

ನಿಯೋಗದಲ್ಲಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಚಿತ್ರದುರ್ಗ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಹೊಸದುರ್ಗದ ಪುರುಷೋತ್ತಮಾನಂದ ಸ್ವಾಮೀಜಿ, ಮಂಗಳೂರಿನ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ವರೂರು ದಿಗಂಬರ ಜೈನ ಮಠದ ಧರ್ಮಸೇನ ಸ್ವಾಮೀಜಿ ಮತ್ತಿತರರು ಇದ್ದರು. 

ಸೌಜನ್ಯಾ ತಾಯಿಯಿಂದ ದೂರು

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕುಟುಂಬಕ್ಕೆ ಅವಹೇಳನ ಮಾಡಿದ ಕುರಿತು ಸೌಜನ್ಯಾ ತಾಯಿ ಕುಸುಮಾವತಿಯವರು ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಗುರುವಾರ  ದೂರು ನೀಡಿದರು. ಸಾಮಾಜಿಕ ಕಾರ್ಯಕರ್ತೆ ಪ್ರಸನ್ನಾ ರವಿ ಜೊತೆಗಿದ್ದರು.

ಧರ್ಮಸ್ಥಳ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸುವ ಅಗತ್ಯವಿಲ್ಲ. ಸುಖಾಸುಮ್ಮನೆ ರಾಜಕೀಯ ಮಾಡೋದು ಬೇಡ.
–ಬಸನಗೌಡ ಪಾಟೀಲ ಯತ್ನಾಳ, ಶಾಸಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.