ಅನುದಾನ
ಬೆಂಗಳೂರು: ರಾಜ್ಯ ಸರ್ಕಾರ 2024–25ನೇ ಸಾಲಿನ ಆಯವ್ಯಯದಲ್ಲಿ ವಿವಿಧ ಸಮುದಾಯ ಹಾಗೂ ಜಾತಿ ಆಧಾರಿತ ಅಭಿವೃದ್ಧಿ ನಿಗಮಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ಮೀಸಲಿಟ್ಟಿದೆ. ಆದರೆ, ಪ್ರಸಕ್ತ ಆರ್ಥಿಕ ವರ್ಷದ ಅಂತ್ಯಕ್ಕೆ ತಲುಪಿದರೂ ಹಲವು ನಿಗಮಗಳಿಗೆ ಹಂಚಿಕೆ ಮಾಡಿರುವ ಅನುದಾನ ಬಿಡುಗಡೆಯೇ ಆಗಿಲ್ಲ. ಕೆಲವೇ ನಿಗಮಗಳಿಗೆ ಅಲ್ಪ ಮೊತ್ತವಷ್ಟೇ ಬಿಡುಗಡೆ ಆಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ‘ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳು’ (ಕೆಡಿಪಿ) ಸಭೆಗೆ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಡಿಸೆಂಬರ್ ಅಂತ್ಯದವರೆಗಿನ ವಿವಿಧ ನಿಗಮಗಳ ಪ್ರಗತಿ ವರದಿ ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಮಾಹಿತಿ ಬಹಿರಂಗವಾಗಿದೆ.
ಆರ್ಥಿಕ ವರ್ಷದ ಒಂಬತ್ತು ತಿಂಗಳು ಕಳೆದರೂ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಒಕ್ಕಲಿಗರ ಸಮುದಾಯ ಅಭಿವೃದ್ಧಿ ನಿಗಮ, ಉಪ್ಪಾರ ಅಭಿವೃದ್ಧಿ ನಿಗಮ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಬಿಲ್ಲವ/ಈಡಿಗ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ರಚಿಸಿರುವ ವಿಶೇಷ ಕೋಶ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮಗಳಿಗೆ ಹಂಚಿಕೆಯಾದ ಅನುದಾನದಲ್ಲಿ ಬಿಡಿಗಾಸೂ ಬಿಡುಗಡೆ ಆಗಿಲ್ಲ.
‘ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಶಕ್ತಿ ತುಂಬುವುದು ಈ ನಿಗಮಗಳ ಸ್ಥಾಪನೆಯ ಉದ್ದೇಶ. ಆದರೆ, ಅನುದಾನವೇ ಬಿಡುಗಡೆ ಆಗದ ಕಾರಣ ಈ ನಿಗಮಗಳಿಗೆ ಕಾರ್ಯಕ್ರಮಗಳ ಅನುಷ್ಠಾನ ಸಾಧ್ಯವಾಗಿಲ್ಲ. ಆರ್ಥಿಕ ವರ್ಷದಲ್ಲಿ ಇನ್ನು ಎರಡೂವರೆ ತಿಂಗಳಷ್ಟೆ ಬಾಕಿ ಉಳಿದಿದೆ. ಈಗ ಅನುದಾನ ಬಿಡುಗಡೆ ಮಾಡಿದರೂ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ತಲುಪಿಸುವುದು ಕಷ್ಟ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಫಲಾನುಭವಿಗಳಿಗೆ ಸೌಲಭ್ಯಗಳನ್ನು ಒದಗಿಸುವ ಮೂಲಕ ₹25 ಕೋಟಿ ಮೊತ್ತದ ಆರ್ಥಿಕ ಗುರಿಯನ್ನು ಡಿಸೆಂಬರ್ ಅಂತ್ಯಕ್ಕೆ ಸಾಧಿಸಬೇಕಿತ್ತು. ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ ಮತ್ತು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ತಲಾ ₹15 ಕೋಟಿ ಮೊತ್ತದ ಗುರಿ ಪೂರ್ಣಗೊಳಿಸಬೇಕಿತ್ತು. ಅದೇ ರೀತಿ,ಉಪ್ಪಾರ ಅಭಿವೃದ್ಧಿ ನಿಗಮದ ₹2 ಕೋಟಿ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ₹1.25 ಕೋಟಿ, ವಿಶ್ವಕರ್ಮ ಅಭಿವೃದ್ಧಿ ನಿಗಮ ₹3.25 ಕೋಟಿ, ಈಡಿಗ/ ಬಿಲ್ಲವ ಸಮುದಾಯದ ಸಮಗ್ರ ಅಭಿವೃದ್ಧಿಯ ವಿಶೇಷ ಕೋಶ ₹2.50 ಕೋಟಿಯನ್ನು ವಿವಿಧ ಕಾರ್ಯಕ್ರಮಗಳ ಮೂಲಕ ವೆಚ್ಚ ಮಾಡಬೇಕಿತ್ತು. ಆದರೆ, ಈ ನಿಗಮಗಳಿಗೆ ಅನುದಾನವೇ ಬಿಡುಗಡೆ ಆಗದೇ ಇರುವುದರಿಂದ ಪ್ರಸಕ್ತ ಸಾಲಿನಲ್ಲಿ ಈವರೆಗಿನ ಆರ್ಥಿಕ ಸಾಧನೆಯು ಶೂನ್ಯ ಎಂದು ಕೆಡಿಪಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಕೆಲವು ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ಅತ್ಯಲ್ಪ ಅನುದಾನ ಹಂಚಿಕೆ ಮಾಡಲಾಗಿದೆ. ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟು ಅಭಿವೃದ್ಧಿ ಯೋಜನೆಗಳಿಗೆ ಆಯವ್ಯಯದಲ್ಲಿ ₹28.78 ಕೋಟಿ ಹಂಚಿಕೆ ಮಾಡಲಾಗಿದೆ. ಅದರಲ್ಲಿ ಈವರೆಗೆ ₹10.37 ಕೋಟಿ ಬಿಡುಗಡೆ ಮಾಡಲಾಗಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಂಚಿಕೆಯಾದ ₹5.01 ಕೋಟಿಯಲ್ಲಿ ₹1.25 ಕೋಟಿ ಬಿಡುಗಡೆ ಮಾಡಲಾಗಿದ್ದು, ಅಷ್ಟೂ ಹಣ ಖರ್ಚು ಮಾಡಲಾಗಿದೆ. ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳ ವಿದೇಶ ಅಧ್ಯಯನಕ್ಕೆ ಶಿಷ್ಯ ವೇತನ, ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ, ಪಿಎಚ್.ಡಿ ಫೆಲೋಶಿಪ್ ನೀಡಲು ಒಟ್ಟು ₹40 ಕೋಟಿ ಮೀಸಲಿಟ್ಟು, ₹19.28 ಕೋಟಿ ಬಿಡುಗಡೆ ಮಾಡಲಾಗಿದೆ. ಹಿಂದುಳಿದ ವರ್ಗಗಳ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ಒಟ್ಟು ₹191 ಕೋಟಿ ಹಂಚಿಕೆ ಮಾಡಲಾಗಿದ್ದು, ಈವರೆಗೆ ₹70.66 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ. ಈ ಮೊತ್ತದಲ್ಲಿ ₹51.36 ಕೋಟಿ ವೆಚ್ಚವಾಗಿದೆ ಎಂದೂ ವರದಿಯಲ್ಲಿದೆ.
ಪರಿಶಿಷ್ಟ ಜಾತಿಯ ನಿಗಮಗಳಿಗೆ ಅತ್ಯಲ್ಪ ಹಣ ಬಿಡುಗಡೆ: ಪರಿಶಿಷ್ಟ ಜಾತಿಯಲ್ಲಿರುವ ವಿವಿಧ ಒಳ ಪಂಗಡಗಳ ಅಭಿವೃದ್ಧಿ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಹಲವು ಅಭಿವೃದ್ಧಿ ನಿಗಮಗಳಿವೆ. ಈ ಪೈಕಿ, ಕೆಲವು ನಿಗಮಗಳಿಗೆ ಅತ್ಯಲ್ಪ ಮೊತ್ತದ ಅನುದಾನ ಬಿಡುಗಡೆ ಆಗಿದೆ.
ಫೆ. 3, 4ರಂದು ಬಜೆಟ್‌ಪೂರ್ವ ಚರ್ಚೆ
ಹಣಕಾಸು ಖಾತೆಯನ್ನೂ ನಿಭಾಯಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025–26ನೇ ಸಾಲಿನ ಬಜೆಟ್ ಅನ್ನು ಮಾರ್ಚ್ ತಿಂಗಳಲ್ಲಿ ಮಂಡಿಸಲಿದ್ದಾರೆ. ಅದಕ್ಕೂ ಮುನ್ನ ಫೆ. 3 ಮತ್ತು 4ರಂದು ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಚಿವರ ಜೊತೆ ಅವರು ಚರ್ಚಿಸುವರು.
ಮೊದಲ ದಿನ ಸಂಜೆ 4ಗಂಟೆಯಿಂದ ರಾತ್ರಿ 7ರವರೆಗೆ, ಮರುದಿನ ಬೆಳಿಗ್ಗೆ 11.30ರಿಂದ ರಾತ್ರಿ 7 ಗಂಟೆವರೆಗೆ 19 ಇಲಾಖೆಗಳ ಅಧಿಕಾರಿ ಗಳು, ಸಚಿವರ ಜೊತೆ ತಲಾ ಅರ್ಧ ಗಂಟೆ ಚರ್ಚಿಸುವರು. ಆಯಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಸೇರಿ ಐವರು ಅಧಿಕಾರಿಗಳಿಗೆ ಮೀರದಂತೆ ಅವಶ್ಯಕ ಮಾಹಿತಿಯ ಜೊತೆಗೆ ಸಭೆಗೆ ಹಾಜರಾಗಬೇಕು ಎಂದು ಮುಖ್ಯಮಂತ್ರಿ
ಯವರ ವಿಶೇಷ ಕರ್ತವ್ಯಾಧಿಕಾರಿ ಸೂಚನಾಪತ್ರ ಹೊರಡಿಸಿದ್ದಾರೆ.
ಅಧ್ಯಕ್ಷರ ನೇಮಕ ಕಗ್ಗಂಟು
ಒಕ್ಕಲಿಗರ ಅಭಿವೃದ್ಧಿ ನಿಗಮ, ಮರಾಠ ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ ಸೇರಿ ಹಲವು ನಿಗಮಗಳಿಗೆ ಸರ್ಕಾರ ಇನ್ನೂ ಅಧ್ಯಕ್ಷರನ್ನೇ ನೇಮಿಸಿಲ್ಲ. ಅಧ್ಯಕ್ಷರನ್ನು ನೇಮಿಸಿರುವ ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ಸದಸ್ಯರ, ನಿರ್ದೇಶಕರ ನೇಮಕ ಕೂಡಾ ನನೆಗುದಿಗೆ ಬಿದ್ದಿದೆ. ನಿಗಮಗಳಿಗೆ ಸದಸ್ಯರ ನೇಮಕಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ. ಪರಮೇಶ್ವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಈ ಸಮಿತಿ ಹಲವು ಸಭೆಗಳನ್ನು ಈಗಾಗಲೇ ನಡೆಸಿದೆ. ನಿಗಮ– ಮಂಡಳಿಗಳಿಗೆ ನೇಮಕಗೊಂಡವರಿಗೆ ಎರಡೂವರೆ ವರ್ಷ ಅಧಿಕಾರ ನೀಡಲು ಚರ್ಚೆ ನಡೆದಿತ್ತು. ಆದರೆ, ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿರುವುದರಿಂದ ನೇಮಕವೇ ಕಗ್ಗಂಟಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.