ಬೆಂಗಳೂರು: ‘ನನ್ನ ತಾಯಿ ಭೂ ಪರಿಹಾರಕ್ಕೆ ಅರ್ಜಿ ಸಲ್ಲಿಸಿರುವುದನ್ನು ಡಿ.ಕೆ.ಶಿವಕುಮಾರ್ ಸಾಬೀತು ಮಾಡಿದರೆ, ತಾಯಿಯ ಹೆಸರಿನಲ್ಲಿರುವ ಎಲ್ಲ ಜಮೀನನ್ನು ದಾನ ಮಾಡುತ್ತೇನೆ’ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸವಾಲು ಹಾಕಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸದಸ್ಯತ್ವ ನೋಂದಣಿ ಸಮಾವೇಶದಲ್ಲಿ ಅವರು ಮಾತನಾಡಿದರು.
‘ನನ್ನ ತಾಯಿ ಭೂಮಿಯ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಆರೋಪಿಸಿದ್ದಾರೆ. ಅವರಿಗೆ ಯಾವ ಅಧಿಕಾರಿ ಆ ಮಾಹಿತಿ ನೀಡಿದರೋ ಗೊತ್ತಿಲ್ಲ. ಸುಳ್ಳೇ ಅವರ ಮನೆಯ ದೇವರು’ ಎಂದು ಹೇಳಿದರು.
‘ನಾವು ಯಾರ ಜಮೀನನ್ನೂ ಕಬಳಿಸಿಲ್ಲ, ಒತ್ತುವರಿ ಮಾಡಿಲ್ಲ. 20–30 ವರ್ಷಗಳ ಹಿಂದೆ ಜಮೀನು ಖರೀದಿಸಿದ್ದು, ರೈತರಾಗಿ ಅದರಲ್ಲಿ ದುಡಿಯುತ್ತಿದ್ದೇವೆ. ನನ್ನ ತಾತ, ತಂದೆ ಎಲ್ಲರೂ ರೈತರು. ಕೃಷಿ ಜಮೀನಿನಲ್ಲಿ ನಾವು ಕಾಲೇಜು ಕಟ್ಟಿಲ್ಲ, ಶಾಪಿಂಗ್ ಮಾಲ್ ನಿರ್ಮಿಸಿಲ್ಲ. ನಮ್ಮ ಮೇಲೆ ಆರೋಪ ಮಾಡುತ್ತಿರುವವರು ಏನೆಲ್ಲಾ ಮಾಡಿದ್ದಾರೆ ಎಂಬುದನ್ನು ರಾಮನಗರಕ್ಕೆ ಬಂದು ಹೇಳುತ್ತೇನೆ’ ಎಂದರು.
‘ಈ ಸರ್ಕಾರ ಮತ್ತು ಅದರ ನಾಯಕರು ಜನರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಬದಲಿಗೆ ಚಾಮುಂಡಿ–ದಸರಾ ವಿವಾದ, ಇವಿಎಂ–ಬ್ಯಾಲಟ್ ವಿವಾದ ಹುಟ್ಟುಹಾಕುತ್ತಿದ್ದಾರೆ. ಅಭಿವೃದ್ಧಿ ಕುಂಠಿತವಾಗಿರುವುದನ್ನು ಮರೆಮಾಚಲು ಸರ್ಕಾರವೇ ಇದನ್ನೆಲ್ಲಾ ಮಾಡುತ್ತಿದೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.