ADVERTISEMENT

ಧಮಕಿ ಪ್ರವೃತ್ತಿಯನ್ನು ಡಿ.ಕೆ.ಶಿವಕುಮಾರ್ ಬದಲಿಸಿಕೊಳ್ಳಲಿ: ನಿಖಿಲ್‌ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 18:01 IST
Last Updated 19 ಸೆಪ್ಟೆಂಬರ್ 2025, 18:01 IST
ನಿಖಿಲ್‌ ಕುಮಾರಸ್ವಾಮಿ
ನಿಖಿಲ್‌ ಕುಮಾರಸ್ವಾಮಿ   

ಬೆಂಗಳೂರು: ‘ಮೂಲಸೌಕರ್ಯ ಕೇಳುವ ಉದ್ಯಮಿಗಳಿಗೆ ಬೆದರಿಕೆ, ಧಮಕಿ ಹಾಕುವ ತಮ್ಮ ಪ್ರವೃತ್ತಿಯನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬದಲಿಸಿಕೊಳ್ಳಬೇಕು’ ಎಂದು ಜೆಡಿಎಸ್‌ ಯುವಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರಿನಲ್ಲಿ ರಸ್ತೆ ಸರಿಯಿಲ್ಲ ಎಂದು ಉದ್ಯಮಿಗಳು ಕೇಳಿದರೆ, ಅವರ ಬೆದರಿಕೆಗೆ ಹೆದರುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ. ಇವರ ಸರ್ಕಾರ ಎಲ್ಲ ಸ್ವರೂಪದ ತೆರಿಗೆ ದರ ಹೆಚ್ಚಿಸಿದ್ದನ್ನು ಬಿಟ್ಟರೆ, ಮೂಲಸೌಕರ್ಯವನ್ನು ಹೆಚ್ಚಿಸಿಲ್ಲ’ ಎಂದರು.

‘ರಾಜ್ಯದ ಒಟ್ಟು ತೆರಿಗೆ ಆದಾಯದಲ್ಲಿ ಶೇ 30ರಷ್ಟು ಬೆಂಗಳೂರಿನಲ್ಲೇ ಸಂಗ್ರಹವಾಗುತ್ತದೆ. ಬೆಂಗಳೂರು ತೊರೆಯುವುದಾಗಿ ಬೇಸರ ವ್ಯಕ್ತಪಡಿಸುತ್ತಿರುವ ಉದ್ಯಮಿಗಳಿಗೆ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಉಪ ಮುಖ್ಯಮಂತ್ರಿ ಮಾಡಬೇಕಿತ್ತು. ಆದರೆ ಬೆದರಿಕೆ ಹಾಕಿ, ಘನತೆ ಕಳೆದುಕೊಳ್ಳುತ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

‘ಬೆಂಗಳೂರಿಗೆ ಜೆಡಿಎಸ್‌ ಕೊಡುಗೆ ಏನು ಡಿ.ಕೆ.ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ. ಕುಮಾರಸ್ವಾಮಿ ಅವರು ಬೆಂಗಳೂರಿಗೆ 4,500 ವಿದ್ಯುತ್ ಚಾಲಿತ ಬಸ್‌ಗಳನ್ನು ನೀಡಿದರು. ಆದರೆ ಅದಕ್ಕೊಂದು ಅಭಿನಂದನೆ ಸಲ್ಲಿಸುವ ಕೆಲಸವನ್ನೂ ಕಾಂಗ್ರೆಸ್ ಸರ್ಕಾರ ಮಾಡಲಿಲ್ಲ. ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ, ಐಟಿ ಮತ್ತು ಬಿಟಿ ಕಂಪನಿಗಳಿಗೆ ಹತ್ತು ವರ್ಷಗಳವರೆಗೆ ತೆರಿಗೆ ವಿನಾಯತಿ ನೀಡಿದ್ದರು’ ಎಂದರು.

‘₹402 ಕೋಟಿ ವ್ಯರ್ಥಕ್ಕೆ ಹಾದಿ’

‘ಜಾತಿವಾರು ಸಮೀಕ್ಷೆಗೆ ಕಾಂಗ್ರೆಸ್‌ ಸರ್ಕಾರದ ಸಚಿವರಿಂದಲೇ ವಿರೋಧ ವ್ಯಕ್ತವಾಗಿದೆ. ಹಿಂದೆ ಇದೇ ರೀತಿ ನಡೆಸಿದ್ದ ಸಮೀಕ್ಷೆಯ ವರದಿಯನ್ನು ಕಸದಬುಟ್ಟಿಗೆ ಎಸೆದು ₹180 ಕೋಟಿ ವ್ಯರ್ಥ ಮಾಡಲಾಗಿತ್ತು. ಈಗ ₹402 ಕೋಟಿ ವ್ಯರ್ಥ ಮಾಡಲು ಹೊರಟಿದ್ದಾರೆ’ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು.

‘ಈ ಸಮೀಕ್ಷೆಯಲ್ಲಿ ಜನರ ಹಿತಾಸಕ್ತಿ ಇಲ್ಲ. ಬದಲಿಗೆ ಕಾಂಗ್ರೆಸ್‌ನ ರಾಜಕೀಯ ದುರುದ್ದೇಶವಿದೆ. ಸೂಪರ್‌ ಸಿ.ಎಂ ಸುರ್ಜೇವಾಲ ಮತ್ತು ಹೈಕಮಾಂಡ್ ಅನ್ನು ಮೆಚ್ಚಿಸಲು ಈ ಸಮೀಕ್ಷೆ ನಡೆಸಲಾಗುತ್ತಿದೆ. ನಾಳೆ ಒಕ್ಕಲಿಗ ಸಮುದಾಯದ ಸಭೆ ಇದೆ. ನಿರ್ಮಾಲಾನಂದ‌ ಸ್ವಾಮೀಜಿ ಅವರು ಸರ್ವ ಪಕ್ಷ ಸಭೆ ಕರೆದಿದ್ದಾರೆ. ದೇವೇಗೌಡ ಅವರು ಕುಮಾರಸ್ವಾಮಿ ಅವರು ಮತ್ತು ನಾನು ಸಭೆಯಲ್ಲಿ ಭಾಗಿಯಾಗುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.