ADVERTISEMENT

‘ಪ್ರಶ್ನೆ ಕೇಳುವುದನ್ನು ಇಂದಿನ ಶಿಕ್ಷಣ ಮರೆಸುತ್ತಿದೆ’

‘ಶಿಕ್ಷಣದಲ್ಲಿ ಕಲಿಕೆಯ ಬಿಕ್ಕಟ್ಟುಗಳು’ ಕುರಿತ ಗೋಷ್ಠಿಯಲ್ಲಿ ಡಾ. ಗೋಪಾಲ ಗುರು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2018, 17:36 IST
Last Updated 9 ಅಕ್ಟೋಬರ್ 2018, 17:36 IST
ಸಾಗರ ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಮಂಗಳವಾರ ನಡೆದ ಗೋಷ್ಠಿಯಲ್ಲಿ ‘ಶಿಕ್ಷಣದಲ್ಲಿ ಕಲಿಕೆಯ ಬಿಕ್ಕಟ್ಟುಗಳು’ ಕುರಿತು ‘ಎಕಾನಾಮಿಕ್ ಎಂಡ್ ಪೊಲಿಟಿಕಲ್ ವೀಕ್ಲಿ’ ಪತ್ರಿಕೆಯ ಸಂಪಾದಕ ಡಾ. ಗೋಪಾಲ ಗುರು ಮಾತನಾಡಿದರು
ಸಾಗರ ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಮಂಗಳವಾರ ನಡೆದ ಗೋಷ್ಠಿಯಲ್ಲಿ ‘ಶಿಕ್ಷಣದಲ್ಲಿ ಕಲಿಕೆಯ ಬಿಕ್ಕಟ್ಟುಗಳು’ ಕುರಿತು ‘ಎಕಾನಾಮಿಕ್ ಎಂಡ್ ಪೊಲಿಟಿಕಲ್ ವೀಕ್ಲಿ’ ಪತ್ರಿಕೆಯ ಸಂಪಾದಕ ಡಾ. ಗೋಪಾಲ ಗುರು ಮಾತನಾಡಿದರು   

ಸಾಗರ: ‘ಈ ಹಿಂದೆ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಪ್ರವೃತ್ತಿ ಬೆಳೆಸುತ್ತಿತ್ತು. ಇಂದಿನ ಶಿಕ್ಷಣ ಈ ಪ್ರವೃತ್ತಿಯನ್ನೇ ಮರೆಸುತ್ತಿದೆ’ ಎಂದು ‘ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ’ ಪತ್ರಿಕೆಯ ಸಂಪಾದಕ ಡಾ. ಗೋಪಾಲ ಗುರು ಹೇಳಿದರು.

ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಮಂಗಳವಾರ ನಡೆದ ಗೋಷ್ಠಿಯಲ್ಲಿ ‘ಶಿಕ್ಷಣದಲ್ಲಿ ಕಲಿಕೆಯ ಬಿಕ್ಕಟ್ಟುಗಳು’ ಕುರಿತು ಅವರು ಮಾತನಾಡಿದರು.

‘ಶಿಕ್ಷಣದಲ್ಲಿ ಸ್ಪರ್ಧೆ ಎನ್ನುವುದು ಇರಲೇಬಾರದು ಎನ್ನುವುದು ಗಾಂಧೀಜಿಯ ನಿಲುವು ಆಗಿತ್ತು. ಆದರೆ ಪ್ರಸ್ತುತ ವಿದ್ಯಾರ್ಥಿಗಳನ್ನು ಸ್ಪರ್ಧೆಗಳಿಗೆ ಅಣಿ ಮಾಡುವುದೇ ಶಿಕ್ಷಣದ ಪ್ರಮುಖ ಆಶಯವಾಗಿದೆ. ಮತ್ತೊಬ್ಬರೊಂದಿಗೆ ಸ್ಪರ್ಧೆಗೆ ಇಳಿಯಲೇಬೇಕು ಎಂಬ ಒತ್ತಾಯವನ್ನು ಯುವಜನರ ಮೇಲೆ ಹೇರಲಾಗುತ್ತಿದೆ’ ಎಂದು ಅವರು ವ್ಯಾಖ್ಯಾನಿಸಿದರು.

ADVERTISEMENT

ಲೇಖಕ ಪೃಥ್ವಿದತ್ತ ಚಂದ್ರಶೋಭಿ ಮಾತನಾಡಿ, ‘ಪ್ರತಿಯೊಂದು ಜ್ಞಾನಶಿಸ್ತಿಗೂ ಒಂದು ಸಾವಯವ ಕೊಂಡಿ ಇರುತ್ತದೆ. ಹೀಗಾಗಿ ಅವುಗಳಿಂದ ಪ್ರಯೋಜನವೇ ಇಲ್ಲ ಎಂಬ ಸರಳೀಕೃತ ಗ್ರಹಿಕೆ ಶಿಕ್ಷಣದಲ್ಲಿ ಸಲ್ಲ. ವಿಶ್ವವಿದ್ಯಾಲಯಗಳಲ್ಲಿ ಸಾಕಷ್ಟು ಕೊರತೆ ಇರುವುದು ನಿಜವಾದರೂ ಅವುಗಳನ್ನು ಸಂಪೂರ್ಣವಾಗಿ ತಿರಸ್ಕಾರ ಮಾಡುವ ಮನೋಭಾವದಿಂದಲೇ ಶಿಕ್ಷಣದ ಕುರಿತ ಚರ್ಚೆಯನ್ನು ಆರಂಭಿಸುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.

‘2030ರ ಹೊತ್ತಿಗೆ 80 ಕೋಟಿ ಉದ್ಯೋಗಗಳು ನಷ್ಟವಾಗುತ್ತವೆ ಎಂದು ಅಂದಾಜು ಮಾಡಲಾಗಿದೆ. ‘ಕೃತಕ ಬುದ್ಧಿಮತ್ತೆ’ಯೇ ಈ ಕೆಲಸಗಳನ್ನು ಆಕ್ರಮಿಸಲಿದೆ ಎಂಬ ನಿರೀಕ್ಷೆ ಇದೆ. ಇಂತಹ ಸವಾಲುಗಳನ್ನು ಎದುರಿಸಬೇಕಾದ ಬಗೆ ಹೇಗೆ ಎಂಬುದನ್ನು ಶಿಕ್ಷಣ ಒಳಗೊಳ್ಳಬೇಕಿದೆ’ ಎಂದರು.

ಗೋಷ್ಠಿಯನ್ನು ನಿರ್ವಹಿಸಿದ ತುಮಕೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಎನ್.ಎಸ್. ಗುಂಡೂರ್ ಮಾತನಾಡಿ, ‘ಶಿಕ್ಷಣದಲ್ಲಿ ಇರುವ ಕಲಿಕೆಯ ಬಿಕ್ಕಟ್ಟಿಗೂ ಸಮಾಜದಲ್ಲಿ ಎದುರಾಗಿರುವ ಕಲಿಕೆಯ ಬಿಕ್ಕಟ್ಟಿಗೂ ಪರಸ್ಪರ ಸಂಬಂಧವಿದೆ. ಶಿಕ್ಷಣಕ್ಕೆ ಎದುರಾಗಿರುವ ಬಿಕ್ಕಟ್ಟು ನಮ್ಮ ಒಟ್ಟಾರೆ ಜೀವನ ಕ್ರಮಕ್ಕೆ ಎದುರಾಗಿರುವ ಬಿಕ್ಕಟ್ಟು ಕೂಡ ಆಗಿದೆ’ ಎಂದು ಅರ್ಥೈಸಿದರು.

ಸಂವಾದದಲ್ಲಿ ವಿವೇಕ ಶಾನಭಾಗ, ಡಿ.ಎಸ್. ನಾಗಭೂಷಣ್, ಶರತ್ ಅನಂತ್ ಮೂರ್ತಿ, ಬಿ. ನಿತ್ಯಾನಂದ ಶೆಟ್ಟಿ ಅವರೂ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.