ADVERTISEMENT

ಎಂಬಿಬಿಎಸ್‌ ಕೋರ್ಸ್‌: ಚಾಮರಾಜನಗರ ವೈದ್ಯಕೀಯ ಕಾಲೇಜಿಗೆ ಅನುಮತಿ ನೀಡದ ಎನ್‌ಎಂಸಿ

ಆತಂಕದಲ್ಲಿ ಪೋಷಕರು, ಹೈಕೋರ್ಟ್‌ ಮೊರೆ ಹೋದ ಕಾಲೇಜು ಆಡಳಿತ ಮಂಡಳಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 5:57 IST
Last Updated 19 ನವೆಂಬರ್ 2020, 5:57 IST
ಚಾಮರಾಜನಗರ ವೈದ್ಯಕೀಯ ಕಾಲೇಜಿನ ನೋಟ
ಚಾಮರಾಜನಗರ ವೈದ್ಯಕೀಯ ಕಾಲೇಜಿನ ನೋಟ   

ಚಾಮರಾಜನಗರ: 2020–21ನೇ ಸಾಲಿನ ವೈದ್ಯಕೀಯ (ಎಂಬಿಬಿಎಸ್‌) ಕೋರ್ಸ್‌ನ ಪ್ರವೇಶಾತಿಗಾಗಿರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಅನುಮತಿ ನೀಡಿಲ್ಲ.

ಕೋರ್ಸ್‌ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸೀಟ್‌ ಮ್ಯಾಟ್ರಿಕ್ಸ್‌, ಕಾಲೇಜುಗಳ ವಿವರ ಹಾಗೂ ಶುಲ್ಕದ ವಿವರಗಳನ್ನು ಪ್ರಕಟಿಸಿದೆ. ಒಟ್ಟು 52 ಕಾಲೇಜುಗಳನ್ನು ಪಟ್ಟಿ ಮಾಡಲಾಗಿದ್ದು, ಅದರಲ್ಲಿ ಚಾಮರಾಜನಗರ ಸರ್ಕಾರಿ ವೈದ್ಯಕೀಯ ಕಾಲೇಜಿನ ಹೆಸರು ಇಲ್ಲ.

ಇಲ್ಲಿನ ಕಾಲೇಜಿನಲ್ಲಿ 150 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಇದ್ದು, ಈ ವರ್ಷ ಕಾಲೇಜುಗಳ ಪಟ್ಟಿಯಲ್ಲಿ ಜಿಲ್ಲೆಯ ವೈದ್ಯಕೀಯ ಕಾಲೇಜಿನ ಹೆಸರು ಇಲ್ಲದೇ ಇರುವುದರಿಂದ ಪೋಷಕರು ಆತಂಕಗೊಂಡಿದ್ದಾರೆ.

ADVERTISEMENT

ಎನ್‌ಎಂಸಿ ನಿರ್ಧಾರದ ವಿರುದ್ಧ ಕಾಲೇಜಿನ ಆಡಳಿತ ಮಂಡಳಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದು, ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯುವ ವಿಶ್ವಾಸವನ್ನು ವ್ಯಕ್ತಪಡಿಸಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್‌ ಹಾಗೂ ನಿರ್ದೇಶಕ ಡಾ.ಸಂಜೀವ್‌ ಅವರು, ‘ತಾಂತ್ರಿಕ ಕಾರಣದಿಂದ ಈ ರೀತಿ ಆಗಿದೆ. ನಾವು ಸಲ್ಲಿಸಿರುವ ದಾಖಲೆಗಳನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ಪರಿಗಣಿಸಿಲ್ಲ. ನಾವು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಅನುಮತಿ ಸಿಗಲಿದೆ. ಯಾರೂ ಆತಂಕಕ್ಕೆ ಒಳಗಾಗಬೇಕಿಲ್ಲ’ ಎಂದು ಹೇಳಿದರು.

ಆಗಿದ್ದೇನು?

ರಾಷ್ಟ್ರೀಯ ವೈದ್ಯಕೀಯ ಆಯೋಗ (ಈ ಹಿಂದೆ ಭಾರತೀಯ ವೈದ್ಯಕೀಯ ಮಂಡಳಿ ಆಗಿತ್ತು) ರೂಪಿಸಿರುವ 19 ಮಾನದಂಡಗಳನ್ನು ಪೂರೈಸಿದರೆ ಮಾತ್ರ ಯಾವುದೇ ವೈದ್ಯಕೀಯ ಕಾಲೇಜಿಗೆಎಂಬಿಬಿಎಸ್‌ ಕೋರ್ಸ್‌ಗೆ ಅನುಮತಿ ಸಿಗುತ್ತದೆ. ಆಯೋಗದ ತಂಡವು ಪ್ರತಿ ವರ್ಷ ಅನುಮತಿ ನೀಡುವುದಕ್ಕೂ ಮೊದಲು ಕಾಲೇಜುಗಳಿಗೆ ಭೇಟಿ ನೀಡಿ, ಲಭ್ಯವಿರುವ ಹಾಸಿಗೆಗಳ ಸಂಖ್ಯೆ, ಮೂಲಸೌಕರ್ಯ, ಬೋಧಕ ಸಿಬ್ಬಂದಿ ಸೇರಿದಂತೆ ಎಲ್ಲ ಸೌಕರ್ಯಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸುತ್ತದೆ.

ಈ ವರ್ಷ ಜಿಲ್ಲೆಗೆ ಎನ್‌ಎಂಸಿ ತಂಡ ಭೇಟಿ ನೀಡಿಲ್ಲ. ಆದರೆ, ಸೌಕರ್ಯಗಳಿಗೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಕೇಳಿತ್ತು.

ಚಾಮರಾಜನಗರದ ವೈದ್ಯಕೀಯ ಕಾಲೇಜಿನಲ್ಲಿಎಲ್ಲ ಸೌಕರ್ಯಗಳೊಂದಿಗೆ, ಈ ವರ್ಷಕ್ಕೆ 600 ಹಾಸಿಗೆ ಸಾಮರ್ಥ್ಯಗಳನ್ನು ಹೊಂದಬೇಕಿತ್ತು. ಕಾಲೇಜಿನಲ್ಲಿ ಅಷ್ಟು ಹಾಸಿಗೆಗಳು ಇಲ್ಲದೇ ಇದ್ದುದರಿಂದ ಜೆಎಸ್ಎಸ್‌ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡು 600 ಹಾಸಿಗೆಗಳು ಲಭ್ಯವಿರುವ ಬಗ್ಗೆ ದಾಖಲೆಗಳನ್ನು ಸಲ್ಲಿಸಿತ್ತು. ಆದರೆ, ಆಯೋಗ ಇದನ್ನು ಪರಿಗಣಿಸಿಲ್ಲ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಪೋಷಕರ ಗಾಬರಿ

ಕಾಲೇಜಿನ ಹೆಸರು ಪಟ್ಟಿಯಲ್ಲಿ ಇಲ್ಲದಿರುವುದನ್ನು ಕಂಡು ಪೋಷಕರು ಗಾಬರಿಗೊಂಡಿದ್ದಾರೆ.

‘ನನ್ನ ಮಗನನ್ನು ಎಂಬಿಬಿಎಸ್‌ ಕೋರ್ಸ್‌ಗೆ ಸೇರಿಸಬೇಕೆಂದಿದ್ದೆ. ಸರ್ಕಾರಿ ಸೀಟು ಸಿಕ್ಕಿದರೆ ಹೇಗೋ ಓದಿಸಬಹುದು. ಖಾಸಗಿ ಶಾಲೆಗಳಲ್ಲಿ ಓದಿಸುವ ಸಾಮರ್ಥ್ಯ ನನಗೆ ಇಲ್ಲ. ನಮ್ಮ ಜಿಲ್ಲೆಯ ಕಾಲೇಜಿನಲ್ಲೇ ಸೀಟು ಸಿಕ್ಕಿದ್ದರೆ ಅನುಕೂಲವಾಗುತ್ತಿತ್ತು’ ಎಂದು ಕೊಳ್ಳೇಗಾಲದ ಪ್ರಕಾಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಆತಂಕ ಪಡಬೇಕಾಗಿಲ್ಲ: ಸುರೇಶ್‌ಕುಮಾರ್‌

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು, ‘ಎನ್‌ಎಂಸಿ ಮಾಡಿರುವ ಅಚಾತುರ್ಯದಿಂದ ಈ ರೀತಿ ಆಗಿದೆ. ನಾವು ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದೆವು. ಕೋರ್ಸ್‌ ಪ್ರವೇಶಕ್ಕೆ ನಮಗೂ ಅವಕಾಶ ನೀಡಬೇಕು ಎಂದು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದೇವೆ. ಮಂಗಳವಾರವೇ ಅರ್ಜಿ ವಿಚಾರಣೆಗೆ ಬರಬೇಕಿತ್ತು. ಬಂದಿಲ್ಲ. ಶುಕ್ರವಾರ ಬರುವ ನಿರೀಕ್ಷೆ ಇದೆ’ ಎಂದು ಹೇಳಿದರು.

‘ಈ ವಿಚಾರವಾಗಿ ಅಡ್ವೊಕೇಟ್‌ ಜನರಲ್‌ ಅವರೊಂದಿಗೆ ಮಾತನಾಡಿದ್ದೇನೆ. ದೆಹಲಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೂ ಸಂಪರ್ಕಿಸಿದ್ದೇನೆ. ಹೈಕೋರ್ಟ್‌ಗೆ ಎಲ್ಲ ದಾಖಲೆಗಳನ್ನೂ ಸಲ್ಲಿಸಿದ್ದೇವೆ. ಎಂಬಿಬಿಎಸ್‌ ಕೋರ್ಸ್‌ ಪ್ರವೇಶಕ್ಕೆ ಅನುಮತಿ ಕೊಡಿಸುವ ವಿಶ್ವಾಸ ಇದೆ. ಪೋಷಕರು ಆತಂಕ ಪಡಬೇಕಾಗಿಲ್ಲ’ ಎಂದು ಅವರು ಹೇಳಿದರು.

‘ತಾಂತ್ರಿಕ ಕಾರಣಗಳಿಂದಾಗಿ ವೈದ್ಯಕೀಯ ಆಯೋಗದಿಂದ ಅನುಮತಿ ಸಿಕ್ಕಿಲ್ಲ. ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಎರಡನೇ ಸುತ್ತಿನಲ್ಲಿ ಚಾಮರಾಜನಗರದ ಕಾಲೇಜಿಗೂ ಅವಕಾಶ ಸಿಗಲಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್‌ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.