ADVERTISEMENT

ಮೊಟ್ಟೆ, ಮಾಂಸ ಮಾರಾಟಕ್ಕೆ ನಿರ್ಬಂಧವಿಲ್ಲ

ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 16:35 IST
Last Updated 8 ಜನವರಿ 2021, 16:35 IST
ಪ್ರಭು ಚವ್ಹಾಣ್
ಪ್ರಭು ಚವ್ಹಾಣ್   

ಬೆಂಗಳೂರು: ರಾಜ್ಯದಲ್ಲಿ ಕೋಳಿ ಮೊಟ್ಟೆ ಮತ್ತು ಮಾಂಸ ಮಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ. ಸಾರ್ವಜನಿಕರು ಆತಂಕಪಡದೇ ಕೋಳಿ ಮೊಟ್ಟೆ ಮತ್ತು ಮಾಂಸ ಸೇವಿಸಬಹುದು ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ತಿಳಿಸಿದರು.

ಶುಕ್ರವಾರ ಹಕ್ಕಿ ಜ್ವರ ನಿಯಂತ್ರಣಜ್ಜೆ ಸಂಬಂಧಿಸಿದ ರಾಜ್ಯಮಟ್ಟದ ಕಾರ್ಯಪಡೆ ಸಭೆಯನ್ನು ಆನ್‌ಲೈನ್‌ ಮೂಲಕ ನಡೆಸಿದ ಅವರು, ‘ಕೇರಳದಲ್ಲಿ ಹಕ್ಕಿ ಜ್ವರ ಇರುವ ಕಾರಣಕ್ಕೆ ಆ ರಾಜ್ಯಕ್ಕೆ ಸೀಮಿತವಾಗಿ ಕೋಳಿಗಳ ಪೂರೈಕೆ ಮತ್ತು ತರಿಸಿಕೊಳ್ಳುವುದಕ್ಕೆ ನಿರ್ಬಂಧ ಹೇರಲಾಗಿದೆ. ಬೇರೆ ಯಾವ ರಾಜ್ಯಕ್ಕೂ ಈ ನಿರ್ಬಂಧ ಅನ್ವಯಿಸುವುದಿಲ್ಲ. ಜನರು ಯಾವುದೇ ಭೀತಿ ಇಲ್ಲದೆ ಮೊಟ್ಟೆ, ಮಾಂಸ ಸೇವಿಸಬಹುದು’ ಎಂದರು.

ಕೇರಳಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಚಾಮರಾಜನಗರ ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೋಳಿ ಮತ್ತು ಇತರ ಸ್ಥಳೀಯ ಪಕ್ಷಿಗಳ ಸಾವಿನ ಪ್ರಕರಣಗಳ ಮೇಲೆ ನಿಗಾ ಇಡಲಾಗಿದೆ. ರಾಜ್ಯದಾದ್ಯಂತ ಮೃಗಾಲಯಗಳು ಹಾಗೂ ಪಕ್ಷಿಧಾಮಗಳಲ್ಲಿ ಕಟ್ಟೆಚ್ಚರಕ್ಕೆ ಆದೇಶಿಸಲಾಗಿದೆ. ಹಕ್ಕಿ ಜ್ವರ ರಾಜ್ಯದಲ್ಲಿ ಹರಡದಂತೆ ತಡೆಯಲು ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದು ಹೇಳಿದರು.

ADVERTISEMENT

ಪಶುಸಂಗೋಪನೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿಯಾ, ಆಯುಕ್ತ ಎಚ್‌. ಬಸವರಾಜೇಂದ್ರ, ನಿರ್ದೇಶಕ ಡಾ.ಬಿ.ಎಸ್‌. ಶಿವರಾಮ್‌ ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.