ADVERTISEMENT

ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಅನುದಾನ ಬರದ ಬರೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 22:50 IST
Last Updated 12 ಡಿಸೆಂಬರ್ 2025, 22:50 IST
<div class="paragraphs"><p>ಅನುದಾನ (ಸಾಂರ್ಭಿಕ ಚಿತ್ರ)</p></div>

ಅನುದಾನ (ಸಾಂರ್ಭಿಕ ಚಿತ್ರ)

   

– ಐಸ್ಟಾಕ್ ಚಿತ್ರ

ನವದೆಹಲಿ: ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಈ ವರ್ಷ ₹51,700 ಕೋಟಿ ತೆರಿಗೆ ಪಾಲು ಹಂಚಿಕೆ ಮಾಡಿದೆ. ಕಂತು ಕಂತುಗಳಲ್ಲಿ ರಾಜ್ಯದ ಪಾಲಿನ ಅನುದಾನ ಬಂದಿದೆ. ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಈ ಸಾಲಿನಲ್ಲಿ ₹16,000 ಕೋಟಿ ನೀಡುವುದಾಗಿ ವಾಗ್ದಾನ ಮಾಡಿದೆ. ಆದರೆ, ಈ ವರೆಗೆ ₹7 ಸಾವಿರ ಕೋಟಿಯಷ್ಟೇ ನೀಡಿದೆ. ಇನ್ನೂ ₹9 ಸಾವಿರ ಕೋಟಿ ನೀಡಬೇಕಿದೆ. ಈ ಅನುದಾನ ಶೀಘ್ರ ಬಿಡುಗಡೆಗೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪತ್ರ ಬರೆದಿದೆ. ಜಲಜೀವನ್‌ ಮಿಷನ್‌ ಯೋಜನೆಯಲ್ಲೂ ಕೇಂದ್ರದ ಪಾಲು ₹4,574 ಕೋಟಿ ಬರಬೇಕಿದೆ

ADVERTISEMENT

ಎರಡು ವರ್ಷದಿಂದ ಆರೋಗ್ಯ ಅನುದಾನ ಇಲ್ಲ 

ಕರ್ನಾಟಕ ರಾಜ್ಯಕ್ಕೆ 15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವ ಆರೋಗ್ಯ ಅನುದಾನವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎರಡು ವರ್ಷಗಳಿಂದ ಬಿಡುಗಡೆಯೇ ಮಾಡಿಲ್ಲ.  ಆಯೋಗವು 2021–22ರಿಂದ 2025–26ರ ಅವಧಿಗೆ ರಾಜ್ಯಕ್ಕೆ ₹2928 ಕೋಟಿ ಹಂಚಿಕೆ ಮಾಡಿತ್ತು. ಇಲ್ಲಿಯವರೆಗೆ ₹1497 ಕೋಟಿ ಬಿಡುಗಡೆ ಆಗಿದೆ. 2024–25 2025–26ರಲ್ಲಿ ಅನುದಾನ ಬಂದಿಲ್ಲ.  ಕಳೆದ ಐದು ವರ್ಷಗಳಲ್ಲಿ ರಾಜ್ಯಕ್ಕೆ ಬಿಡುಗಡೆಯಾದ ಅನುದಾನವೆಷ್ಟು ರಾಜ್ಯ ಖರ್ಚು ಮಾಡಿರುವುದೆಷ್ಟು ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್‌ ಚೌಟ ಅವರು ಲೋಕಸಭೆಯಲ್ಲಿ ಶುಕ್ರವಾರ ಪ್ರಶ್ನೋತ್ತರ ಅವಧಿಯಲ್ಲಿ ಕೇಳಿದ್ದರು. ಇದಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸಚಿವ ಪ್ರತಾಪ್‌ ರಾವ್ ಜಾಧವ್‌ ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ.  

ಬಳಕೆ ಪ್ರಮಾಣಪತ್ರ ಸಲ್ಲಿಸಿದರಷ್ಟೇ ಅನುದಾನ: ಪಾಟೀಲ 

ಅನುದಾನ ಬಳಕೆಯ ಪ್ರಮಾಣಪತ್ರ ಸಲ್ಲಿಸಿದರಷ್ಟೇ ಜಲ ಜೀವನ್‌ ಮಿಷನ್‌ನ ಉಳಿದ ಅನುದಾನವನ್ನು ಕರ್ನಾಟಕ ರಾಜ್ಯಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಸ್ಪಷ್ಟಪಡಿಸಿದರು.  ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಳ್ಳಾರಿ ಸಂಸದ ಇ.ತುಕಾರಾಂ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು ‘ಈಗಾಗಲೇ ಬಿಡುಗಡೆ ಆಗಿರುವ ಅನುದಾನದ ಬಳಕೆ ಪ್ರಮಾಣಪತ್ರವನ್ನು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಸಲ್ಲಿಸಿಲ್ಲ. ಬಳಕೆ ಪ್ರಮಾಣಪತ್ರ ಸಲ್ಲಿಸದೇ ಉಳಿದ ಅನುದಾನ ಬಿಡುಗಡೆ ಮಾಡುವುದಿಲ್ಲ ಎಂದು ಕರ್ನಾಟಕದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರಿಗೆ ಪತ್ರದ ಮೂಲಕ ತಿಳಿಸಿದ್ದೇವೆ’ ಎಂದರು.  ಜಲ ಜೀವನ್‌ ಮಿಷನ್‌ ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಮುಂದಿನ ವಾರ ಇನ್ನೊಂದು ಸಭೆ ನಡೆಯಲಿದೆ ಎಂದರು.  ಇ.ತುಕಾರಾಂ ಮಾತನಾಡಿ ‘ಈ ಯೋಜನೆಯಲ್ಲಿ ರಾಜ್ಯ ಅದ್ಭುತ ಸಾಧನೆ ಮಾಡಿದೆ. ಆದರೆ ಕೇಂದ್ರ ಸರ್ಕಾರವು ₹13500 ಕೋಟಿಯಷ್ಟು ಅನುದಾನ ಉಳಿಸಿಕೊಂಡಿದೆ. ಈ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು. 

ಕೇಂದ್ರದಿಂದ ₹22476 ಕೋಟಿ ಬಾಕಿ: ಜಿ.ಸಿ.

‘ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿರುವ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಕೇಂದ್ರ ಸರ್ಕಾರ ಈ ಸಲ ₹56549 ಕೋಟಿ ಬಿಡುಗಡೆ ಮಾಡಿದೆ. ಆದರೆ ಡಿಸೆಂಬರ್ 6ರ ವರೆಗೆ ₹34073 ಕೋಟಿಯಷ್ಟೇ ಬಿಡುಗಡೆ ಮಾಡಿದೆ. ₹22476 ಕೋಟಿಯನ್ನು ಬಾಕಿ ಉಳಿಸಿಕೊಂಡಿದೆ‘ ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್‌ ತಿಳಿಸಿದರು.  ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಸಂಸತ್‌ನಲ್ಲಿ ಪ್ರಸ್ತಾಪಿಸುವಂತೆ ರಾಜ್ಯ ಸರ್ಕಾರವು ಎಲ್ಲ ಸಂಸದರಿಗೆ ಪತ್ರ ಬರೆದಿದೆ. ಕೇಂದ್ರ ಸರ್ಕಾರದ ತಾರತಮ್ಯ ನೀತಿ ವಿರುದ್ಧ ರಾಜ್ಯಸಭೆಯಲ್ಲಿ ಮಂಗಳವಾರ ಧ್ವನಿ ಎತ್ತುತ್ತೇನೆ’ ಎಂದು ತಿಳಿಸಿದರು.  ‘ಆಯುಷ್ಮಾನ್ ಭಾರತ್‌ ಯೋಜನೆ ಅಡಿಯಲ್ಲಿ 2020ರಲ್ಲಿ ರಾಜ್ಯದಲ್ಲಿ 8 ಲಕ್ಷ ರೋಗಿಗಳು ಇದ್ದರು. ಈಗ ರೋಗಿಗಳ ಸಂಖ್ಯೆ 34 ಲಕ್ಷಕ್ಕೆ ಏರಿದೆ. ಆದರೆ ಕೇಂದ್ರದ ಅನುದಾನ ₹2500 ಕೋಟಿಯಷ್ಟೇ ಇದೆ. ರಾಜ್ಯ ಸರ್ಕಾರವು ₹7400 ಕೋಟಿ ಖರ್ಚು ಮಾಡಿದೆ. ಕೇಂದ್ರ ಸರ್ಕಾರವು ಯೋಜನೆಯ ಶೇ 60 ಮೊತ್ತ ಭರಿಸಬೇಕು. ಈಗ ಕೊಡುತ್ತಿರುವುದು ಶೇ 25ರಷ್ಟು ಪಾಲು ಮಾತ್ರ’ ಎಂದು ಅವರು ದೂರಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.