ADVERTISEMENT

ಚುನಾವಣಾ ಕರ್ತವ್ಯಕ್ಕೆ ನಿಯೋಜನೆ: ಪಿಡಿಒಗಳಿಗೆ ಸಿಹಿ ಸುದ್ದಿ

ಪಂಚಾಯತ್‌ ರಾಜ್‌ ಇಲಾಖೆಯ ಮನವಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 14:31 IST
Last Updated 12 ಮಾರ್ಚ್ 2024, 14:31 IST
<div class="paragraphs"><p>ಚುನಾವಣಾ ಕರ್ತವ್ಯ</p></div>

ಚುನಾವಣಾ ಕರ್ತವ್ಯ

   

ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲ ಇರುವುದರಿಂದ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳನ್ನು (ಪಿ.ಡಿ.ಒ) ಕಾಯಂ ಸ್ವರೂಪದ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬಾರದು ಎಂಬ ಪಂಚಾಯತ್‌ ರಾಜ್‌ ಇಲಾಖೆಯ ಮನವಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ರವಾನಿಸಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ, ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.

ADVERTISEMENT

ಫೆಬ್ರುವರಿ 16ರಂದು ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಅವರಿಗೆ ಪತ್ರ ಬರೆದಿದ್ದ ಪಂಚಾಯತ್‌ ರಾಜ್‌ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್‌, ‘ತನಿಖಾ ಠಾಣೆಗಳಲ್ಲಿ ನಿಯೋಜನೆ ಸೇರಿದಂತೆ ಪಿ.ಡಿ.ಒಗಳನ್ನು ಕಾಯಂ ಸ್ವರೂಪದ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದರೆ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಕಷ್ಟವಾಗುತ್ತದೆ’ ಎಂದು ತಿಳಿಸಿದ್ದರು.

ಪೂರ್ಣ ಪ್ರಮಾಣದ ಚುನಾವಣಾ ಕೆಲಸದಲ್ಲಿ ಪಿ.ಡಿ.ಒಗಳು ತಲ್ಲೀನರಾದರೆ ಕುಡಿಯುವ ನೀರು ಪೂರೈಕೆ ಸೇರಿದಂತೆ ಬರ ನಿರ್ವಹಣೆಯ ಕೆಲಸಗಳಿಗೆ ಅಡ್ಡಿಯಾಗುತ್ತದೆ. ಆದ್ದರಿಂದ ಅಲ್ಪಾವಧಿಯ ಚುನಾವಣಾ ಕೆಲಸಗಳಿಗೆ ಮಾತ್ರ ನಿಯೋಜಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಬೇಕು ಎಂದು ಕೋರಿದ್ದರು.

ಮಾರ್ಚ್‌ 2ರಂದು ಎಲ್ಲ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿರುವ ಮುಖ್ಯ ಚುನಾವಣಾಧಿಕಾರಿ ಕಚೇರಿಯು, ‘ಪಿ.ಡಿ.ಒಗಳಿಗೆ ದೀರ್ಘಾವಧಿಯ ಚುನಾವಣಾ ಕರ್ತವ್ಯದಿಂದ ವಿನಾಯ್ತಿ ನೀಡಿ, ಸಾಂದರ್ಭಿಕ/ಅಲ್ಪಾವಧಿಯ ಕೆಲಸಗಳಿಗೆ ಮಾತ್ರ ನಿಯೋಜನೆ ಮಾಡಬೇಕೆಂಬ ಕೋರಿಕೆಯನ್ನು ಆಧರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ನಿರ್ದೇಶನ ನೀಡಿದೆ.

‘ಪಿ.ಡಿ.ಒಗಳು ಬರ ನಿರ್ವಹಣೆ ಕೆಲಸ ಮತ್ತು ಚುನಾವಣಾ ಕರ್ತವ್ಯವನ್ನು ಏಕಕಾಲಕ್ಕೆ ಮಾಡುವುದು ಕಷ್ಟ. ಎರಡೂ ಜವಾಬ್ದಾರಿ ವಹಿಸಿದರೆ ಜನರಿಗೆ ತೊಂದರೆ ಆಗುತ್ತದೆ. ಮುಖ್ಯ ಚುನಾವಣಾ ಅಧಿಕಾರಿಯವರ ನಿರ್ದೇಶನದಂತೆ ಪಿ.ಡಿ.ಒಗಳನ್ನು ಕಾಯಂ ಚುನಾವಣಾ ಕರ್ತವ್ಯದಿಂದ ಮುಕ್ತಗೊಳಿಸಬೇಕು’ ಎಂದು ರಾಜ್ಯ ಪಿ.ಡಿ.ಒಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜು ವಾರದ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.