ADVERTISEMENT

ಡಿಸಿಎಂ ಕನಸಿಗೆ ಭಂಗ: ರಮೇಶ ಜಾರಕಿಹೊಳಿ, ಶ್ರೀರಾಮುಲುಗೆ ನಿರಾಸೆ

ಇಬ್ಬರು ಹಿರಿಯ ಸಚಿವರಿಗೆ ಕೊಕ್‌ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 3:06 IST
Last Updated 30 ಜನವರಿ 2020, 3:06 IST
ರಮೇಶ ಜಾರಕಿಹೊಳಿ, ಬಿಎಸ್‌ ಯಡಿಯೂರಪ್ಪ, ಬಿ. ಶ್ರೀರಾಮುಲು
ರಮೇಶ ಜಾರಕಿಹೊಳಿ, ಬಿಎಸ್‌ ಯಡಿಯೂರಪ್ಪ, ಬಿ. ಶ್ರೀರಾಮುಲು    

ಬೆಂಗಳೂರು/ಬೆಳಗಾವಿ: ಸಚಿವ ಸಂಪುಟ ವಿಸ್ತರಣೆ ವೇಳೆ ಮತ್ತಷ್ಟು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದು, ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಮತ್ತು ಶಾಸಕ ರಮೇಶ ಜಾರಕಿಹೊಳಿಯವರ ಕನಸು ಭಂಗವಾದಂತಾಗಿದೆ.

ಈಗ ಇರುವ ಮೂರು ಉಪಮುಖ್ಯ ಮಂತ್ರಿಗಳು ಮುಂದುವರಿಯುತ್ತಾರೆ ಎಂದೂ ಮುಖ್ಯಮಂತ್ರಿ ಹೇಳಿದ್ದು, ಸಿ.ಎನ್. ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಅವರು ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿದೆ. ಆದರೆ, ವಿಸ್ತರಣೆ ವೇಳೆ ಇಬ್ಬರು ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಡುವ ಸುಳಿವನ್ನೂ ನೀಡಿರುವ ಯಡಿಯೂರಪ್ಪ, ಅವರ ಹೆಸರನ್ನು ಬಹಿರಂಗಪಡಿಸಿಲ್ಲ. ವರಿಷ್ಠರು ಸೂಚಿಸಿದಂತೆ ನಡೆದುಕೊಳ್ಳುವೆ ಎಂದಷ್ಟೇ ಹೇಳಿ ಉಪಮುಖ್ಯಮಂತ್ರಿ ಹೊರತಾಗಿ ಇರುವ 14 ಸಚಿವರಲ್ಲಿ ಆತಂಕವನ್ನು ಉಂಟು ಮಾಡಿದ್ದಾರೆ.

ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುವಾಗ ರಮೇಶ ಜಾರಕಿಹೊಳಿ ಅವರಿಗೆಉಪಮುಖ್ಯಮಂತ್ರಿ ಸ್ಥಾನದ ಭರವಸೆ ನೀಡಲಾಗಿತ್ತು ಎಂದು ಆ ಪಕ್ಷದ ಮೂಲಗಳು ಹೇಳಿವೆ.ಇದೇ ಸಮುದಾಯಕ್ಕೆ ಸೇರಿದ ಸಚಿವ ಬಿ.ಶ್ರೀರಾಮುಲು ಅವರಿಗೆ ವಿಧಾನಸಭೆ ಚುನಾವಣೆಗೆ ಮೊದಲೇ ಉಪಮುಖ್ಯಮಂತ್ರಿ ಸ್ಥಾನದ ಭರವಸೆ ನೀಡಲಾಗಿತ್ತು. ಇವರಿಬ್ಬರೂ ಉಪಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ADVERTISEMENT

ಉಪಮುಖ್ಯಮಂತ್ರಿ ಹುದ್ದೆಗೆ ವಾಲ್ಮೀಕಿ ನಾಯಕ ಸಮುದಾಯದ ಇಬ್ಬರ ಮಧ್ಯೆ ಪೈಪೋಟಿ ನಡೆಯುತ್ತಿದ್ದ ಹೊತ್ತಿನಲ್ಲೇ, ಸಮುದಾಯದ ಗುರು
ಪೀಠವಾದ ಹರಿಹರದ ರಾಜನಹಳ್ಳಿ ಮಠದ ಪ್ರಸನ್ನಾನಂದ ಸ್ವಾಮೀಜಿ ತಮ್ಮವರಿಗೆ ಉಪಮುಖ್ಯ ಮಂತ್ರಿ ಸ್ಥಾನ ನೀಡಬೇಕು. ಇಲ್ಲವಾದರೆ ಸಮುದಾಯದ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಯಡಿಯೂರಪ್ಪ ಹೇಳಿಕೆ ಗಮನಿಸಿದರೆ ಇಬ್ಬರಿಗೂ ಉಪಮುಖ್ಯಮಂತ್ರಿ ಸ್ಥಾನ ಕೈತಪ್ಪುವುದು ಖಚಿತ ಎಂದು ಪಕ್ಷದ ಮೂಲಗಳು ಹೇಳುತ್ತಿವೆ.

‘ಮೂವರು ಡಿಸಿಎಂ ಇರುತ್ತಾರೆ’: ‘ಹೊಸದಾಗಿ ಇನ್ಯಾರನ್ನೂ ಉಪ ಮುಖ್ಯಮಂತ್ರಿ ಮಾಡುವುದಿಲ್ಲ. ಈಗಿರುವ ಮೂವರೂ ಉಪ ಮುಖ್ಯಮಂತ್ರಿ ಹುದ್ದೆಗಳಲ್ಲಿ ಮುಂದುವರಿಯಲಿದ್ದಾರೆ’ ಎಂದು ಯಡಿಯೂರಪ್ಪ ಬೆಳಗಾವಿಯಲ್ಲಿ ಹೇಳಿದರು.

‘ಸಚಿವ ಸಂಪುಟ ವಿಸ್ತರಣೆ ಈಗಾಗಲೇ ತಡವಾಗಿದೆ. ಈ ಬಗ್ಗೆ ಚರ್ಚಿಸಲು ಗುರುವಾರ(ಜ.30) ನವದೆಹಲಿಗೆ ಹೋಗುತ್ತೇನೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಲಿದ್ದೇನೆ. ಅವರು ಸೂಚಿಸಿದರೆ ಒಂದಿಬ್ಬರನ್ನು ಸಚಿವ ಸಂಪುಟದಿಂದ ಕೈಬಿಡಬೇಕಾಗುತ್ತದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

‘ಮುಂದಿನ 2-3 ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡಲಾಗುವುದು. ಎಲ್ಲ ಗೊಂದಲಗಳಿಗೂ ಉತ್ತರ ದೊರೆಯಲಿದೆ. ನಮ್ಮದು ರಾಷ್ಟ್ರೀಯ ಪಕ್ಷವಾದ್ದರಿಂದ ಎಲ್ಲವನ್ನೂ ವರಿಷ್ಠರ ಜೊತೆ ಚರ್ಚಿಸಿಯೇ ನಿರ್ಧಾರಕ್ಕೆ ಬರಬೇಕಾಗುತ್ತದೆ’ ಎಂದರು.

‘ಲಕ್ಷ್ಮಣ ಸವದಿ ಅವರನ್ನು ಸಂಪುಟದಲ್ಲಿ ಮುಂದುವರಿಸುತ್ತೀರಾ’ ಎಂಬ ಪ್ರಶ್ನೆಗೆ, ‘ಮುಂದುವರಿಸುವುದಿಲ್ಲ ಎಂದು ನಾನೆಲ್ಲಿ ಹೇಳಿದ್ದೇನೆ’ ಎಂದು ಮರು ಪ್ರಶ್ನೆ ಹಾಕಿದರು.

ಎಂ.ಟಿ.ಬಿ ಖಡಕ್‌ ಸಂದೇಶ: ಬಿಜೆಪಿ ಅಧಿಕಾರಕ್ಕೆ ಬರಲು ರಾಜೀನಾಮೆ ನೀಡಿದ 17 ಜನ ಕಾರಣರಾಗಿದ್ದೇವೆ. ಸೋತವರು ಮತ್ತು ಗೆದ್ದವರು ಎಂದು ತಾರತಮ್ಯ ಮಾಡಬಾರದು ಎಂದು ಮಾಜಿ ಸಚಿವ ಎಂ.ಟಿ.ಬಿ.ನಾಗರಾಜ್‌ ಪ್ರತಿಪಾದಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರು, ‘ಸಚಿವ ಸಂಪುಟ ವಿಸ್ತರಣೆಗೆ ಆತುರವಿಲ್ಲ. ಯಡಿಯೂರಪ್ಪ ಅವರು ಹೇಳಿದಂತೆ ನಡೆದುಕೊಳ್ಳುತ್ತಾರೆ’ ಎಂದರು.

ಬಿಎಸ್‌ವೈ ಜತೆ ಕಾಣಿಸದ ರಮೇಶ

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಳಗಾವಿಗೆ ಬಂದರೂ ಸಚಿವ ಸ್ಥಾನದ ಆಕಾಂಕ್ಷಿ ರಮೇಶ ಜಾರಕಿಹೊಳಿ ಮಾತ್ರ ಕಾಣಿಸಿಕೊಳ್ಳಲಿಲ್ಲ.

ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿರುವ ರಮೇಶ ಅವರ ಗೈರು ಎಲ್ಲರ ಅಚ್ಚರಿಗೂ ಕಾರಣವಾಗಿತ್ತು. ಆದರೆ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಉಮೇಶ ಕತ್ತಿ ಇಡೀ ದಿನ ಮುಖ್ಯಮಂತ್ರಿ ಜತೆ ಕಾಣಿಸಿಕೊಂಡರು.

***

ಅರ್ಹರಾದ ಎಲ್ಲ ಶಾಸಕರಿಗೂ ಸಚಿವ ಸ್ಥಾನ ನೀಡಲಾಗುವುದು. ಬೆಳಗಾವಿಯಲ್ಲಿ ಗೆದ್ದ ಮೂವರು ಮತ್ತು ಉಮೇಶ ಕತ್ತಿಯವರೂ ಸಚಿವರಾಗುತ್ತಾರೆ.

- ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

***

ನಮ್ಮಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ನಮ್ಮಲ್ಲಿ ಯಾರನ್ನೂ ಕೈಬಿಡಬಾರದು ಮತ್ತು ತಾರತಮ್ಯ ಮಾಡಬಾರದು. ಬಿಎಸ್‌ವೈ ಮಾತು ಉಳಿಸಿಕೊಳ್ಳುತ್ತಾರೆ

- ಎಂ.ಟಿ.ಬಿ.ನಾಗರಾಜ್‌, ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.