ADVERTISEMENT

ವಿಟಿಯು 18ನೇ ಘಟಿಕೋತ್ಸವ: ವಿದ್ಯಾರ್ಥಿನಿಯರ ಕೊರಳಿಗೆ ಹೆಚ್ಚು ಚಿನ್ನದ ಪದಕ

6 ಚಿನ್ನದ ಪದಕ ಪಡೆದ ಮಧುಶ್ರೀ ಮಾತು;

ಶ್ರೀಕಾಂತ ಕಲ್ಲಮ್ಮನವರ
Published 18 ಮಾರ್ಚ್ 2019, 19:45 IST
Last Updated 18 ಮಾರ್ಚ್ 2019, 19:45 IST
ಬೆಳಗಾವಿಯಲ್ಲಿ ಸೋಮವಾರ ನಡೆದ ವಿಟಿಯು ಘಟಿಕೋತ್ಸವದಲ್ಲಿ ಪಡೆದ ಚಿನ್ನದ ಪದಕಗಳನ್ನು (ಎಡದಿಂದ) ಸುಚಿತ್ರಾ ಎನ್‌., ಮೇಘನಾ ಪ್ರಕಾಶ ಹಾಗೂ ಮಧುಶ್ರೀ ಎಸ್‌.ಆರ್‌. ಪ್ರದರ್ಶಿಸಿದರು
ಬೆಳಗಾವಿಯಲ್ಲಿ ಸೋಮವಾರ ನಡೆದ ವಿಟಿಯು ಘಟಿಕೋತ್ಸವದಲ್ಲಿ ಪಡೆದ ಚಿನ್ನದ ಪದಕಗಳನ್ನು (ಎಡದಿಂದ) ಸುಚಿತ್ರಾ ಎನ್‌., ಮೇಘನಾ ಪ್ರಕಾಶ ಹಾಗೂ ಮಧುಶ್ರೀ ಎಸ್‌.ಆರ್‌. ಪ್ರದರ್ಶಿಸಿದರು   

ಬೆಳಗಾವಿ: ‘ಇಂತಹದ್ದೇ ಸಮಯದಲ್ಲಿ ಓದಬೇಕು, ಇಷ್ಟೇ ಸಮಯ ಓದಬೇಕೆಂದು ನಿಯಮ ಹಾಕಿಕೊಂಡಿರಲಿಲ್ಲ. ಓದಬೇಕೆಂದು ಮನಸ್ಸು ಬಯಸಿದಾಗ ಓದುತ್ತಿದ್ದೆ. ಯಾವುದೇ ಒತ್ತಡ ಇಲ್ಲದೆ ಸಹಜವಾಗಿಯೇ ಪರೀಕ್ಷೆಗಳನ್ನು ಎದುರಿಸಿದೆ’ ಎನ್ನುತ್ತಾರೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ 6 ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡ ದಾವಣಗೆರೆಯ ಬಾಪುಜಿ ಇನ್ಸ್‌ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿನಿ ಮಧುಶ್ರೀ ಎಸ್‌.ಆರ್‌..

ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆವರಣದಲ್ಲಿ ಸೋಮವಾರ ನಡೆದ ಘಟಿಕೋತ್ಸವದಲ್ಲಿ ಚಿನ್ನದ ಪದಕಗಳನ್ನು ಪಡೆದುಕೊಂಡರು. ಅತಿ ಹೆಚ್ಚು ಚಿನ್ನದ ಪದಕ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ವಿಶ್ವವಿದ್ಯಾಲಯದಲ್ಲಿಯೇ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ, ಬಿ.ಇ. ಸಿವಿಲ್‌ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಹಾಗೂ ಎಸ್‌.ಸಿ., ಎಸ್‌.ಟಿ ವಿದ್ಯಾರ್ಥಿಗಳಲ್ಲಿ ಅತಿ ಹೆಚ್ಚು ಅಂಕ ಪಡೆದಿದ್ದಾರೆ.

ಮಧುಶ್ರೀ ಮೂಲತಃ ಚಿತ್ರದುರ್ಗದವರು. ತಂದೆ ರಾಮಪ್ಪ ನಿವೃತ್ತ ಬ್ಯಾಂಕ್‌ ಮ್ಯಾನೇಜರ್‌. ತಾಯಿ ಸುವರ್ಣ ವಿಮಾ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ADVERTISEMENT

ಐಎಎಸ್‌ ಗುರಿ:
‘ಐಎಎಸ್‌ ಅಧಿಕಾರಿಯಾಗಬೇಕು ಎನ್ನುವ ಕನಸು ಇದೆ. ಇದಕ್ಕಾಗಿ ತಯಾರಿ ನಡೆಸುತ್ತಿದ್ದೇನೆ. ಸದ್ಯಕ್ಕೆ ಹೈದರಾಬಾದ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪಡೆಯುತ್ತಿದ್ದೇನೆ’ ಎಂದು ಮಧುಶ್ರೀ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಇದಕ್ಕಾಗಿ ಸಾಕಷ್ಟು ಸಮಯ ಹಾಗೂ ಹಣದ ಅವಶ್ಯಕತೆ ಇದೆ. ಅದಕ್ಕಾಗಿ ತುರ್ತಾಗಿ ಸರ್ಕಾರಿ ಉದ್ಯೋಗ ಹಿಡಿಯಬೇಕೆಂದು ಕೊಂಡಿದ್ದೇನೆ. ಸರ್ಕಾರಿ ಉದ್ಯೋಗ ಮಾಡಿಕೊಳ್ಳುತ್ತ ಹೆಚ್ಚಿನ ವಿದ್ಯಾಭ್ಯಾಸ ಮಾಡಿ, ಯುಪಿಎಸ್‌ಸಿಗೆ ಸಿದ್ಧಳಾಗುತ್ತೇನೆ’ ಎಂದರು.

ಘಟಿಕೋತ್ಸವದಲ್ಲಿ ವಿವಿಧ ವಿಭಾಗಗಳ 28 ವಿದ್ಯಾರ್ಥಿಗಳಿಗೆ 74 ಚಿನ್ನದ ಪದಕ ನೀಡಲಾಯಿತು. 64,881 ಬಿ.ಇ. 619 ಬಿ.ಆರ್ಕ್., 4,425 ಎಂಬಿಎ, 1,801 ಎಂಸಿಎ, 2859 ಎಂ.ಟೆಕ್., 172 ಎಂ.ಟೆಕ್ (ಪಿ–ಟೈಮ್), 26 ಎಂ.ಆರ್ಕ್., 33 ಎಂ.ಎಸ್ಸಿ. ಎಂಜಿನಿಯರಿಂಗ್, 6 ದ್ವಿ‍ಪದವಿ ಹಾಗೂ 418 ಪಿಎಚ್‌.ಡಿ. ಪದವಿಗಳನ್ನು ಪ್ರದಾನ ಮಾಡಲಾಯಿತು. ತೂಗು ಸೇತುವೆ ನಿರ್ಮಿಸುವುದರಲ್ಲಿ ಪರಿಣಿತರಾಗಿರುವ ಎಂಜಿನಿಯರ್ ಬಿ. ಗಿರೀಶ ಭಾರದ್ವಾಜ್ ಅವರಿಗೆ ‘ಡಾಕ್ಟರ್ ಆಫ್ ಸೈನ್ಸ್’ ಗೌರವ ಪದವಿ ನೀಡಿ, ಗೌರವಿಸಲಾಯಿತು.

ಸರಳ ಸಮಾರಂಭ:
ಗೋವಾ ಮುಖ್ಯಮಂತ್ರಿ ಹಾಗೂ ಮಾಜಿ ರಕ್ಷಣಾ ಸಚಿವ ಮನೋಹರ್‌ ಪರ್ರೀಕರ್‌ ಅವರ ನಿಧನದ ಹಿನ್ನೆಲೆಯಲ್ಲಿ ಶೋಕಾಚರಣೆ ನಡೆಸುತ್ತಿರುವ ಕಾರಣದಿಂದ ವಿಟಿಯು 18ನೇ ವಾರ್ಷಿಕ ಘಟಿಕೋತ್ಸವ ಸರಳವಾಗಿ ನಡೆಯಿತು. ಮುಖ್ಯ ಅತಿಥಿಯಾಗಿದ್ದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹಾಗೂ ಅಧ್ಯಕ್ಷತೆ ವಹಿಸಬೇಕಾಗಿದ್ದ ರಾಜ್ಯಪಾಲ ವಜೂಭಾಯಿ ವಾಲಾ ಗೈರುಹಾಜರಾಗಿದ್ದರು. ಕುಲಪತಿ ಡಾ. ಕರಿಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು.

‘ಶೈಕ್ಷಣಿಕ ಕಾರ್ಯಕ್ರಮವಾಗಿದ್ದರಿಂದ ನಡೆಸಬಹುದು. ರದ್ದುಪಡಿಸುವ ಅಗತ್ಯವಿಲ್ಲವೆಂದು ರಾಜ್ಯಪಾಲರ ಕಚೇರಿಯಿಂದ ಸೂಚನೆ ಬಂದ ನಂತರ ಕಾರ್ಯಕ್ರಮ ನಡೆಲಾಗಿದೆ’ ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.