ADVERTISEMENT

ಅನುದಾನ, ಅಭಿವೃದ್ಧಿ ಇಲ್ಲ; ಶಾಸಕರು ಜನರ ಬಳಿ ಹೇಗೆ ಹೋಗುತ್ತಾರೆ?: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 15:46 IST
Last Updated 25 ಜೂನ್ 2025, 15:46 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ಅಧಿಕಾರಕ್ಕೆ ಬಂದು ಎರಡು ವರ್ಷಗಳಾದರೂ ಅನುದಾನ ಇಲ್ಲ, ಕ್ಷೇತ್ರಗಳ ಅಭಿವೃದ್ಧಿ ಆಗಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಆಡಳಿತ ಪಕ್ಷದ ಶಾಸಕರೇ ಆರೋಪ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನರ ಬಳಿಗೆ ಅವರು ಹೇಗೆ ಹೋಗುತ್ತಾರೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಹಣ ಇಲ್ಲ ಎಂದು ಗೃಹ ಸಚಿವ ಪರಮೇಶ್ವರ ಅವರು ತಮಾಷೆಗಾದರೂ ಸತ್ಯ ಹೇಳಿದ್ದಾರೆ’ ಎಂದರು. 

‘ಪ್ರತಿಯೊಂದು ಕೆಲಸಕ್ಕೂ ಹಣ ನೀಡಬೇಕಿದೆ. ಜನರು ದುಡಿದ ಹಣ ಭ್ರಷ್ಟಾಚಾರದ ಪಾಲಾಗುತ್ತಿದೆ. ಅಬಕಾರಿ, ಲೋಕೋಪಯೋಗಿ, ವಿದ್ಯುತ್‌ ಗುತ್ತಿಗೆದಾರರು ಪ್ರತಿಭಟನೆ ಮಾಡಿದರೂ, ಅವರ ಸಮಸ್ಯೆಗಳು ಬಗೆಹರಿಯಲಿಲ್ಲ. ವಿರೋಧ ಪಕ್ಷದಲ್ಲಿದ್ದಾಗ ಭ್ರಷ್ಟಾಚಾರದ ವಿರುದ್ದ ದೊಡ್ಡ ಹಂಗಾಮ ಮಾಡಿದರು. ಈಗ ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ’ ಎಂದು ಆರೋಪಿಸಿದರು. 

ADVERTISEMENT

‘ಕಾನೂನು ಸಚಿವ ಎಚ್‌.ಕೆ. ಪಾಟೀಲರು ಸಂಪುಟದ ಭಾಗವಾಗಿಲ್ಲವೇ? ಅಕ್ರಮ ಗಣಿ ತನಿಖೆ ಕುರಿತು ಮುಖ್ಯಮಂತ್ರಿ ಭೇಟಿ ಮಾಡಿ ಚರ್ಚಿಸದೆ ಪತ್ರ ಏಕೆ ಬರೆದರು. ಅವರೇನು ವಿರೋಧ ಪಕ್ಷದ ನಾಯಕರೇ? ಅವರ ಮಾತನ್ನು ಸಿದ್ದರಾಮಯ್ಯ ಕೇಳುವುದಿಲ್ಲವೇ? ಹಿಂದೆ ಬಿಜೆಪಿ ಅಧಿಕಾರದಲ್ಲಿ ಜಿಂದಾಲ್‌ಗೆ ಜಮೀನು ನೀಡಬಾರದು ಎಂದು ಇದೇ ಪಾಟೀಲರು ಪತ್ರ ಬರೆದಿದ್ದರು. ಅಧಿಕಾರಕ್ಕೆ ಬಂದ ಮೇಲೆ ಜಿಂದಾಲ್‌ಗೆ ಜಮೀನು ನೀಡಿದರು. ಇದು ಕಾಂಗ್ರೆಸ್‌ನ ದ್ವಿಮುಖ ನೀತಿ’ ಎಂದು ಟೀಕಿಸಿದರು. 

‘ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕಾಂಗ್ರೆಸ್‌ ಮಾಡಿದ್ದ ಭ್ರಷ್ಟಾಚಾರದ ಆರೋಪ ರಾಜಕೀಯ ಪ್ರೇರಿತವಾಗಿತ್ತು. ದಾಖಲೆ ನೀಡುವಂತೆ ಕೇಳಿದರೂ, ಕೊಡಲಿಲ್ಲ. ಈಗ ಅದೇ ಗುತ್ತಿಗೆದಾರರ ಸಂಘ ಅವರ ವಿರುದ್ಧವೇ ಆರೋಪ ಮಾಡಿದೆ. ಅವರದೇ ಪಕ್ಷದ ಬಿ.ಆರ್‌. ಪಾಟೀಲ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಅವರನ್ನು ಸಮಾಧಾನ ಮಾಡಲು ಸಂಪುಟದಲ್ಲಿ ಸ್ಥಾನ ನೀಡಬಹುದು’ ಎಂದರು.

ರಾಜ್ಯ ಸರ್ಕಾರದ ವಿರುದ್ಧ ಆಯಾ ಪ್ರದೇಶಗಳ ಸಮಸ್ಯೆ ಇಟ್ಟುಕೊಂಡು ಬಿಜೆಪಿ ಹೋರಾಟ ಮಾಡಲಿದೆ. ಯಡಿಯೂರಪ್ಪ ಅವರ ಪ್ರವಾಸದಿಂದ ಪಕ್ಷಕ್ಕೆ ಹೆಚ್ಚಿನ ಶಕ್ತಿ ಸಿಗಲಿದೆ. ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ
ಬಸವರಾಜ ಬೊಮ್ಮಾಯಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.