ADVERTISEMENT

ಬೆಂಗಳೂರು ಲಾಕ್‌ಡೌನ್‌ ಇಲ್ಲ: ರಾಜ್ಯ ಸರ್ಕಾರ ನಿರ್ಧಾರ

ರೋಗ ಲಕ್ಷಣ ಇಲ್ಲದಿದ್ದರೆ ಹೋಟೆಲ್‌, ಹಜ್‌ ಭವನದಲ್ಲಿ ಚಿಕಿತ್ಸೆ: ಆರ್. ಅಶೋಕ

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 20:31 IST
Last Updated 25 ಜೂನ್ 2020, 20:31 IST
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು: ನಗರವನ್ನು ಯಾವುದೇ ಕಾರಣಕ್ಕೂ ಲಾಕ್‌ಡೌನ್‌ ಮಾಡದೇ ಇರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ನಗರದಲ್ಲಿ ಕೋವಿಡ್ -19 ಪರಿಸ್ಥಿತಿ ನಿಯಂತ್ರಿಸುವ ಕುರಿತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಧ್ಯಕ್ಷತೆ
ಯಲ್ಲಿ ಗುರುವಾರ ನಡೆದ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಸಭೆಯ ಬಳಿಕ ಕಂದಾಯ ಸಚಿವ ಆರ್‌. ಅಶೋಕ ಅವರು ಈ ಕುರಿತ ವಿವರ ನೀಡಿದರು.

‘ಪರಿಸ್ಥಿತಿ ಕುರಿತಂತೆ ಚರ್ಚಿಸಲು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಸಚಿವರು, ಎಲ್ಲ ಪಕ್ಷಗಳ ಶಾಸಕರ ಸಭೆ ಕರೆಯಲಾಗಿದೆ. ಇನ್ನಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಈ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

ADVERTISEMENT

‘ಕೋವಿಡ್‌ ದೃಢಪಟ್ಟ ರೋಗಿಗಳು ಕಾಯುವ ಸ್ಥಿತಿ ಬರಬಾರದು. ತಪಾಸಣಾ ವರದಿ ಬಂದ 6–8 ಗಂಟೆ ಒಳಗೆ ಚಿಕಿತ್ಸಾ ಕೇಂದ್ರಕ್ಕೆ ತಲುಪಿಸಲು ಅಗತ್ಯವಾದ ಕ್ರಮ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ. ರೋಗ ಲಕ್ಷಣ ಕಡಿಮೆ ಇರುವವರಿಗೆ ಕೋವಿಡ್ ಕೇರ್ ಸೆಂಟರ್ (ಸಿಸಿಸಿ)ಗಳಲ್ಲಿ ಹಾಗೂ ರೋಗ ಲಕ್ಷಣ ಇಲ್ಲದವರಿಗೆ ಖಾಸಗಿ ಹೋಟೆಲ್‌ಗಳು ಮತ್ತು ಹಜ್ ಭವನದಲ್ಲಿ ಚಿಕಿತ್ಸಾ ಸೌಲಭ್ಯ ಕಲ್ಪಿಸಲಾಗುವುದು’ ಎಂದು ವಿವರಿಸಿದರು.

‘ಸೋಂಕು ದೃಢಪಟ್ಟರೆ ಅಂಥವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲು ಸದ್ಯ 100 ಆಂಬುಲೆನ್ಸ್‌ಗಳು ಲಭ್ಯವಿವೆ. ಎರಡು
ವಾರ್ಡ್‌ಗಳಿಗೆ ಒಂದು ಆಂಬುಲೆನ್ಸ್‌ ಸಿಗುವಂತೆ ವ್ಯವಸ್ಥೆ ಮಾಡಿದ್ದೇವೆ. ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಆಂಬುಲೆನ್ಸ್‌ಗಳನ್ನು ಈ ಉದ್ದೇಶಕ್ಕೆ ಬಳಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

‘ಕೋವಿಡ್ ಚಿಕಿತ್ಸಾ ವ್ಯವಸ್ಥೆ ಕುರಿತಂತೆ ಖಾಸಗಿ ವೈದ್ಯಕೀಯ ಕಾಲೇಜುಗಳ ಪ್ರಮುಖರ ಸಭೆ ಕರೆಯಲು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಖಾಸಗಿ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳಲ್ಲಿ 10 ಸಾವಿರ ಹಾಸಿಗೆಗಳಿವೆ. ಅವುಗಳಲ್ಲಿ 5 ಸಾವಿರ ಹಾಸಿಗೆಗಳನ್ನು ತೆಗೆದುಕೊಳ್ಳಲು ಉದ್ದೇಶಿಸಿದ್ದೇವೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಈಗಾಗಲೇ ಸೂಚನೆ ಹೋಗಿದೆ. ಅವರ ಜೊತೆ ಮಾತನಾಡಿ ದರ ನಿಗದಿಪಡಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.