ADVERTISEMENT

ಎಚ್‌3ಎನ್‌2 ಸೋಂಕು | ಆತಂಕದ ಸ್ಥಿತಿ ನಿರ್ಮಾಣ ಆಗಿಲ್ಲ: ಡಾ.ಕೆ. ಸುಧಾಕರ್‌

ತಪಾಸಣೆ ದರ ನಿಗದಿಗೆ ಸಮಿತಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 19:31 IST
Last Updated 6 ಮಾರ್ಚ್ 2023, 19:31 IST
ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌
ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌   

ಬೆಂಗಳೂರು: ‘ರಾಜ್ಯದಲ್ಲಿ ಎಚ್‌3ಎನ್‌2 ವೈರಾಣು ಸೋಂಕಿಗೆ ಸಂಬಂಧಿಸಿದಂತೆ ಆತಂಕದ ಸ್ಥಿತಿ ನಿರ್ಮಾಣವಾಗಿಲ್ಲ. ಆದರೆ, ಆಸ್ಪತ್ರೆಗಳ ಆರೋಗ್ಯ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ ಆದೇಶ ಹೊರಡಿಸಲಾಗುವುದು. ಜೊತೆಗೆ, ಜನರು ಮುನ್ನೆಚ್ಚರಿಕೆ ವಹಿಸಲು ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ಎಚ್‌3ಎನ್‌2 ವೈರಸ್‌ ಹರಡುತ್ತಿರುವ ಹಿನ್ನೆಲೆಯಲ್ಲಿ ತಾಂತ್ರಿಕ ಸಮಿತಿ ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸೋಮವಾರ ಸಭೆ ನಡೆಸಿದ ಬಳಿಕ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೊಸ ಸೋಂಕು ತಪಾಸಣೆಯ ದರ ನಿಯಂತ್ರಣ ಮಾಡಲು ಸಮಿತಿ ರಚಿಸಲಾಗುವುದು. ಸಮಿತಿಯ ವರದಿ ಬಂದ ಬಳಿಕ ತಪಾಸಣೆಯ ದರ ನಿಗದಿ ಮಾಡಲಾಗುವುದು’ ಎಂದರು.

‘ಜನವರಿಯಿಂದ ಮಾರ್ಚ್‌ವರೆಗೆ ಎಚ್‌1ಎನ್‌1ರ 20, ಎಚ್‌3ಎನ್‌2ರ 26 ಪ್ರಕರಣ ಪತ್ತೆಯಾಗಿದೆ. ಇನ್‌ಫ್ಲುಯೆಂಜ ಬಿ 10, ಅಡಿನೋ 69 ಪ್ರಕರಣ ಕಂಡುಬಂದಿದೆ. ಎಚ್‌3ಎನ್‌2 ಸೋಂಕು ಬಂದರೆ 2ರಿಂದ 5 ದಿನದೊಳಗೆ ನಿವಾರಣೆಯಾಗುತ್ತದೆ. ಕೋವಿಡ್‌ಗೊಳಗಾದವರಿಗೆ ಸೋಂಕು ಬಂದರೆ ಹೆಚ್ಚು ಕೆಮ್ಮು ಇರುತ್ತದೆ. ಬೆಂಗಳೂರಿನಲ್ಲಿ ಈ ಸೋಂಕಿನ ಎರಡು ಪ್ರಕರಣಗಳು ಕಂಡುಬಂದಿವೆ’ ಎಂದರು.

ADVERTISEMENT

‘‌ಇನ್‌ಫ್ಲುಯೆಂಜಗೆ ಪ್ರತಿ ವರ್ಷ ಲಸಿಕೆ ನೀಡುತ್ತಿದ್ದು, ಅದನ್ನು ಎಲ್ಲ ಆರೋಗ್ಯ ಸಿಬ್ಬಂದಿ ಪಡೆಯಲು ಲಿಖಿತ ಸೂಚನೆ ನೀಡಲಾಗುವುದು. ಐಸಿಯುನಲ್ಲಿ ಕೆಲಸ ಮಾಡುವವರು ಸೇರಿದಂತೆ ಕೆಲ ನಿರ್ದಿಷ್ಟ ವೈದ್ಯರು, ಸಿಬ್ಬಂದಿಗೆ ಸರ್ಕಾರದಿಂದಲೇ ಲಸಿಕೆ ನೀಡಲಾಗುವುದು’ ಎಂದರು.

‘ಪ್ರತಿವಾರ 25 ತಪಾಸಣೆ ಮಾಡಬೇಕೆಂದು ಕೇಂದ್ರ ಸರ್ಕಾರ ಗುರಿ ನೀಡಿದೆ. ಬೆಂಗಳೂರಿನ ವಿಕ್ಟೋರಿಯಾ ಮತ್ತು ವಾಣಿ ವಿಲಾಸ ಆಸ್ಪತ್ರೆಗಳಲ್ಲಿ ಸಾರಿ ಹಾಗೂ ಐಎಲ್‌ಐ ಪ್ರಕರಣಗಳ ಪೈಕಿ, 25 ಮಂದಿಯನ್ನು ತಪಾಸಣೆ ಮಾಡಿ ಯಾವ ಪ್ರಭೇದದ ವೈರಾಣು ಇತ್ತೆಂದು ಪತ್ತೆ ಮಾಡಲಾಗುವುದು’ ಎಂದರು.

’ವೈದ್ಯರ ಸಲಹೆ ಇಲ್ಲದೆ ಔಷಧಿ ಸೇವಿಸುವುದು ಸರಿಯಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.