ADVERTISEMENT

ಒಪಿಎಸ್‌ ಮರು ಜಾರಿ ಇಲ್ಲ | ಬಿಜೆಪಿ, ಜೆಡಿಎಸ್ ಸದಸ್ಯರ ಸಭಾತ್ಯಾಗ

ಬಿಜೆಪಿ, ಜೆಡಿಎಸ್ ಸದಸ್ಯರ ಸಭಾತ್ಯಾಗ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 20:13 IST
Last Updated 29 ಡಿಸೆಂಬರ್ 2022, 20:13 IST
   

ಬೆಳಗಾವಿ: ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (ಒಪಿಎಸ್‌) ಮರು ಜಾರಿಗೊಳಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಬಿಜೆಪಿಯ ಸಾಬಣ್ಣ ತಳವಾರ, ಪ್ರತಾಪಸಿಂಹ ನಾಯಕ, ಶಶೀಲ್‌ ಜಿ. ನಮೋಶಿ ಮತ್ತು ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ ಗುರುವಾರ ಮುಖ್ಯಮಂತ್ರಿಯವರ ಪರವಾಗಿ ಉತ್ತರ ನೀಡಿದ ಅವರು, ‘ಪುನಃ ಒಪಿಎಸ್‌ ಜಾರಿಗೊಳಿಸುವ ಯಾವ ಯೋಚನೆಯೂ ಇಲ್ಲ. ಆದರೆ, ನೌಕರರ ಬೇಡಿಕೆ ಕುರಿತು ಸರ್ಕಾರದ ಆರ್ಥಿಕ ಪರಿಸ್ಥಿತಿ ಆಧಾರದಲ್ಲಿ ತೀರ್ಮಾನಕ್ಕೆ ಬರುವುದಾಗಿ ಮುಖ್ಯಮಂತ್ರಿಯವರು ತಿಳಿಸಿದ್ದಾರೆ. ಅದನ್ನಷ್ಟೇ ಈಗ ಹೇಳಬಹುದು’ ಎಂದರು.

ನೌಕರರ ಬೇಡಿಕೆಯನ್ನು ಬೆಂಬಲಿಸಿ ಮಾತನಾಡಿದ ಬಿಜೆಪಿಯ ಸಾಬಣ್ಣ ತಳವಾರ, ಎಸ್‌.ವಿ. ಸಂಕನೂರ, ಆಯನೂರು ಮಂಜುನಾಥ, ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ, ಮಂಜುನಾಥ ಭಂಡಾರಿ, ಜೆಡಿಎಸ್‌ನ ಮರಿತಿಬ್ಬೇಗೌಡ ಸೇರಿದಂತೆ ಹಲವರು, ಪುನಃ ಒಪಿಎಸ್‌ ಜಾರಿಗೊಳಿಸುವಂತೆ ಆಗ್ರಹಿಸಿದರು.

ADVERTISEMENT

‘2010ರಲ್ಲಿ ಹೊಸ ಪಿಂಚಣಿ ಯೋಜನೆ ಜಾರಿಗೆ ಬಂತು. ಆದರೆ, 2006ರಿಂದಲೇ ಪೂರ್ವಾನ್ವಯಗೊಳಿಸಿ ಜಾರಿಗೊಳಿಸಲಾಗಿದೆ. ಇದರಿಂದ ನೌಕರರಿಗೆ ಅನ್ಯಾಯವಾಗಿದೆ’ ಎಂದು ಆಯನೂರು ಮಂಜುನಾಥ ದೂರಿದರು.

ಇದನ್ನು ಒಪ್ಪದ ಮಾಧುಸ್ವಾಮಿ, ‘ಸರ್ಕಾರಿ ನೌಕರರ ವೇತನ ಪಾವತಿಗೆ ವರ್ಷಕ್ಕೆ ₹ 80,000 ಕೋಟಿ ವೆಚ್ಚವಾಗುತ್ತಿದೆ. ₹ 24,000 ಕೋಟಿ ಪಿಂಚಣಿ ಪಾವತಿಗೆ ಬೇಕಿದೆ. ನೌಕರರು ನೇಮಕಾತಿ ಷರತ್ತು ಒಪ್ಪಿ ಉದ್ಯೋಗಕ್ಕೆ ಬಂದಿರುತ್ತಾರೆ. ನಂತರ ಷರತ್ತು ವಿಧಿಸುವುದು ಸರಿಯಲ್ಲ’ ಎಂದರು.

ಆಯನೂರು ಮಂಜುನಾಥ, ಎಸ್‌.ವಿ. ಸಂಕನೂರ ಮತ್ತು ಮರಿತಿಬ್ಬೇಗೌಡ ಸರ್ಕಾರದ ಉತ್ತರವನ್ನು ವಿರೋಧಿಸಿ ಸಭಾತ್ಯಾಗ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.