ADVERTISEMENT

Hijab Ban | ಪಿಯು ಪರೀಕ್ಷೆ: ಹಿಜಾಬ್‌ ಧರಿಸಿ ಬರಲು ಅವಕಾಶವಿಲ್ಲ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 20:50 IST
Last Updated 1 ಮಾರ್ಚ್ 2023, 20:50 IST
   

ಬೆಂಗಳೂರು: ಇದೇ 9ರಿಂದ ಆರಂಭವಾಗಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಹಿಜಾಬ್ ಧರಿಸಿ ಹಾಜರಾಗಲು ಅನುಮತಿ ನೀಡಬೇಕೆಂಬ ಮುಸ್ಲಿಂ ವಿದ್ಯಾರ್ಥಿನಿಯರ ಮನವಿಯನ್ನು ಪರಿಗಣಿಸದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಅಧಿಕಾರಿಗಳಿಗೆ ಸೂಚಿಸಿದೆ.

‘ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಉಡುಪಿ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಪದವಿಪೂರ್ವ ಕಾಲೇಜುಗಳ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದ್ದಾರೆ’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

‘ಹಿಜಾಬ್‌ ವಿಷಯವು ಸುಪ್ರೀಂ ಕೋರ್ಟ್‌ನಲ್ಲಿದೆ. ಹೀಗಾಗಿ, ಪರೀಕ್ಷೆಯ ಸಮಯದಲ್ಲಿ ಹಿಜಾಬ್ ಅನುಮತಿಸುವ ಪ್ರಶ್ನೆಯೇ ಇಲ್ಲ’ ಎಂದು ಶಾಲಾ ಶಿಕ್ಷಣ ಸಚಿವಬಿ.ಸಿ. ನಾಗೇಶ್ ತಿಳಿಸಿದರು. ಅಲ್ಲದೆ, ‘ಈ ಕಾರಣಕ್ಕೆ ಯಾವುದೇ ವಿದ್ಯಾರ್ಥಿನಿ ಪರೀಕ್ಷೆಗೆ ಗೈರಾಗುತ್ತಾರೆ ಎಂದೂ ಭಾವಿಸುವುದಿಲ್ಲ’ ಎಂದೂ ಹೇಳಿದರು.

ADVERTISEMENT

‘ಹಿಜಾಬ್ ಧರಿಸುವುದು ಇಸ್ಲಾಮಿಕ್ ನಂಬಿಕೆಯ ಅಗತ್ಯ ಧಾರ್ಮಿಕ ಆಚರಣೆಯ ಭಾಗ ಅಲ್ಲ’ ಎಂದು ರಾಜ್ಯ ಹೈಕೋರ್ಟ್‌ ಕಳೆದ ವರ್ಷ ಮಾರ್ಚ್‌ನಲ್ಲಿ ಅಭಿಪ್ರಾಯಪಟ್ಟಿತ್ತು. ವಿದ್ಯಾರ್ಥಿಗಳು ನಿಗದಿಪಡಿಸಿದ ಸಮವಸ್ತ್ರವನ್ನು ಧರಿಸಬೇಕು ಎಂಬ 2022 ಫೆ. 5ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

‘ಕಳೆದ ಒಂದು ವಾರದಲ್ಲಿ ಪರೀಕ್ಷೆಗೆ ಹಿಜಾಬ್ ಧರಿಸಲು ಅನುಮತಿ ಕೋರಿ ಎರಡು ಮನವಿಗಳು ಬಂದಿವೆ. ನಾವು ಅವುಗಳನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದೇವೆ. ಎಲ್ಲ ವಿದ್ಯಾರ್ಥಿಗಳಿಗೆ ನಿಯಮಾವಳಿಗಳನ್ನು ಅನುಸರಿಸುವಂತೆ ಸೂಚನೆ ನೀಡಿದ್ದೇವೆ’ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜೊಂದರ ಪ್ರಾಂಶುಪಾಲರು ಹೇಳಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.