ADVERTISEMENT

ಮುಗಿದ ನಾಮಪತ್ರ: ಮೂರೂ ಪಕ್ಷಗಳಲ್ಲಿ ಅಸಹನೆ ಕುದಿ

ತೇಜಸ್ವಿನಿಗೆ ಟಿಕೆಟ್‌ ತಪ್ಪಿದ್ದಕ್ಕೆ ಅಸಹನೆ ಕುದಿ: ತುಮಕೂರಿನಲ್ಲಿ ಕೈ ನಾಯಕರೇ ತಂದಿತ್ತ ಬೇಗುದಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 19:52 IST
Last Updated 26 ಮಾರ್ಚ್ 2019, 19:52 IST
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೃಷ್ಣಬೈರೇಗೌಡ ಮಂಗಳವಾರ ನಾಮಪತ್ರ ಸಲ್ಲಿಕೆಗೆ ಆಗಮಿಸಿದಾಗ ಅಭಿಮಾನಿಗಳು ಹೆಗಲ ಮೇಲೆತ್ತಿ ಜೈಕಾರ ಹಾಕಿದರು –ಪ್ರಜಾವಾಣಿ ಚಿತ್ರ -
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೃಷ್ಣಬೈರೇಗೌಡ ಮಂಗಳವಾರ ನಾಮಪತ್ರ ಸಲ್ಲಿಕೆಗೆ ಆಗಮಿಸಿದಾಗ ಅಭಿಮಾನಿಗಳು ಹೆಗಲ ಮೇಲೆತ್ತಿ ಜೈಕಾರ ಹಾಕಿದರು –ಪ್ರಜಾವಾಣಿ ಚಿತ್ರ -   

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯಲಿರುವ ಲೋಕಸಭೆಯ 14 ಕ್ಷೇತ್ರಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಂಗಳವಾರ ಮುಕ್ತಾಯವಾಗಿದ್ದು, ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯ ವಿಷಯ ಮೂರೂ ಪಕ್ಷಗಳಲ್ಲಿ ಅಸಹನೆಯ ಕುದಿಯನ್ನೇ ಎಬ್ಬಿಸಿದೆ.

ಜೆಡಿಎಸ್‌–ಕಾಂಗ್ರೆಸ್‌ ಪಕ್ಷದ ನಾಯಕರು ಮೇಲುಹಂತದಲ್ಲಿ ಮೈತ್ರಿ ಮಾಡಿಕೊಂಡು ಕಣಕ್ಕೆ ಧುಮುಕಿದ್ದಾರೆ. ಆದರೆ, ಹಳೆ ಮೈಸೂರು ಭಾಗದ ಮೂರ್ನಾಲ್ಕು ಕ್ಷೇತ್ರಗಳಲ್ಲಿ ಸ್ಥಳೀಯ ನಾಯಕರು ಪರಸ್ಪರ ಕಚ್ಚಾಟದಲ್ಲಿ ತೊಡಗಿದ್ದಾರೆ. ನಾಯಕತ್ವ ಕೈಗೊಂಡ ತೀರ್ಮಾನಕ್ಕೆ ಅವರು ಒಪ್ಪಿಲ್ಲ. ಪ್ರಚಾರದ ಭರಾಟೆಯ ಮಧ್ಯೆಯೇ ಹಳೆಯ ‘ದ್ವೇಷ’ ಕರಗಿಹೋಗಲಿದೆಯೋ ಅಥವಾ ಗೆಲುವಿಗೆ ಅಡ್ಡಿಯಾಗಲಿದೆಯೋ ಎಂಬ ಆತಂಕ ಉಭಯ ಪಕ್ಷಗಳ ನಾಯಕರನ್ನು ಕಂಗೆಡಿಸಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತ್‌ ಕುಮಾರ್‌ ಬದಲು, ಯುವ ಮುಂದಾಳು ತೇಜಸ್ವಿ ಸೂರ್ಯ ಅವರಿಗೆ ಬಿಜೆಪಿ ವರಿಷ್ಠರು ಮಣೆ ಹಾಕಿದ್ದಾರೆ. ಅನಿರೀಕ್ಷಿತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಗೆಲ್ಲಿಸಿಕೊಂಡು ಬನ್ನಿ ಎಂದು ವರಿಷ್ಠರು ನಿರ್ದೇಶನ ನೀಡಿದ್ದಾರೆ. ಅನುಕಂಪ ಹಾಗೂ ಹಿರಿಯ ನಾಯಕ ಅನಂತ್‌ ಕುಮಾರ್ ಬಲದ ಮೇಲೆ ಗೆಲ್ಲುವ ವಿಶ್ವಾಸದಲ್ಲಿದ್ದ ನಾಯಕರು ಇದರಿಂದ ನಿದ್ದೆಗೆಟ್ಟ ಪರಿಸ್ಥಿತಿ ತಲುಪಿದ್ದಾರೆ ಎಂದು ಹೇಳಲಾಗುತ್ತಿದೆ.

ADVERTISEMENT

ತೇಜಸ್ವಿನಿ ಅವರಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಪಕ್ಷದಲ್ಲೇ ಅಸಮಾಧಾನ ಹೊಗೆ ಎದ್ದಿದೆ. ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಇಬ್ಬರು ವಿಧಾನಸಭಾ ಸದಸ್ಯರು ಅಪಸ್ವರ ತೆಗೆದಿದ್ದಾರೆ. ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ ವೇಳೆ ಹೊರಗುಳಿಯುವ ಮೂಲಕ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ‘ಸಂತೋಷ ಪಟ್ಟವರು ಅಸಂತೋಷ ಪಡುವ ಕಾಲ ಬರಲಿದೆ’ ಎಂದು ಹೇಳುವ ಮೂಲಕ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟಿಕೆಟ್‌ ತಪ್ಪಿಸಿದವರಿಗೆ ಕುಟುಕಿದ್ದಾರೆ.

ತುಮಕೂರು ಕೆಂಡ: ಬೆಂಗಳೂರು ಉತ್ತರದಲ್ಲಿ ನಿಲ್ಲುವುದಾಗಿ ಹೇಳಿದ್ದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ತುಮಕೂರಿಗೆ ವಲಸೆ ಬಂದಿದ್ದಾರೆ ಎಂದು ಆ ಜಿಲ್ಲೆಯ ಕಾಂಗ್ರೆಸ್ ನಾಯಕರು ಕೆಂಡಾಮಂಡಲರಾಗಿದ್ದಾರೆ.

ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡ ಹಾಗೂ ಮಧುಗಿರಿ ಕ್ಷೇತ್ರದ ಮಾಜಿ ಶಾಸಕ ಕೆ.ಎನ್‌. ರಾಜಣ್ಣ ಪಕ್ಷದ ನಾಯಕತ್ವಕ್ಕೆ ಸಡ್ಡು ಹೊಡೆದಿದ್ದಾರೆ.

ಸಿಡಿದೆದ್ದಿರುವ ಇಬ್ಬರು ನಾಯಕರನ್ನು ಸಮಾಧಾನ ಪಡಿಸುವ ಯತ್ನಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮುಂದಾಗಿದ್ದಾರೆ. ಸಂಧಾನಕ್ಕಾಗಿ ಬೆಂಗಳೂರಿನಲ್ಲಿ ಅವರು ಮಂಗಳವಾರ ಕರೆದ ಸಭೆಗೆ ಮುದ್ದಹನುಮೇಗೌಡರು ಬರಲಿಲ್ಲ. ರಾಜಣ್ಣ ಬಂದರೂ ದೇವೇಗೌಡರ ವಿರುದ್ಧ ಹರಿಹಾಯ್ದರು. ‘ದೇವೇಗೌಡರು ತಾವು ನಿಲ್ಲುವ ಬದಲು ಅವರ ಪತ್ನಿ ಚೆನ್ನಮ್ಮ ಅವರನ್ನೇ ಕಣಕ್ಕೆ ಇಳಿಸಬಹುದಿತ್ತು. ಮುದ್ದಹನುಮೇಗೌಡರೇನು ಒಕ್ಕಲಿಗರಲ್ಲವೇ ಎಂದು ಕಿಡಿಕಾರಿದ ರಾಜಣ್ಣ, ಮುದ್ದ ಹನುಮೇಗೌಡರು ನಾಮಪತ್ರ ವಾಪಸ್‌ ಪಡೆದರೆ ನಾನು ವಾಪಸ್ ಪಡೆಯುವೆ. ಇಲ್ಲದಿದ್ದರೆ ನಾನೂ ಕಣದಲ್ಲಿ ಉಳಿಯುವೆ’ ಎಂದು ಹೇಳಿದರು.

ಬಳಿಕ ಮಾತನಾಡಿದ ದಿನೇಶ್‌, ‘ಮೈತ್ರಿ ಧರ್ಮಕ್ಕೆ ಅನುಗುಣವಾಗಿ ತುಮಕೂರನ್ನು ಬಿಟ್ಟುಕೊಟ್ಟಿದ್ದೇವೆ. ಈಗ ನಾಮಪತ್ರ ಸಲ್ಲಿಸಿದವರನ್ನು ಮನವೊಲಿಸಿ ವಾಪಸ್ ತೆಗೆಸುತ್ತೇವೆ. ಮುದ್ದಹನುಮೇಗೌಡರು ನಮ್ಮ ಮನವಿಗೆ ಸ್ಪಂದಿಸುತ್ತಾರೆ. ರಾಜಣ್ಣ ಅವರ ಜತೆಗೆ ಚರ್ಚಿಸಿದ್ದೇನೆ’ ಎಂದರು.

ಪ್ರಜ್ವಲ್‌ ರಾಜಕೀಯ: ಹಾಸನದಲ್ಲಿ ಕಾಂಗ್ರೆಸ್‌ ನಾಯಕರು ಒಳೇಟು ಕೊಡಬಹುದು ಎಂಬ ಭೀತಿಯಲ್ಲಿರುವ ಮೈತ್ರಿ ಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಹಿರಿಯರ ಭೇಟಿ ಮಾಡಿ ಗೆಲುವಿಗೆ ಸಹಕರಿಸುವಂತೆ ಕೋರಿದರು.

ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಜಿ. ಪರಮೇಶ್ವರ, ದಿನೇಶ್ ಗುಂಡೂರಾವ್ ಭೇಟಿ ಮಾಡಿ ತಮ್ಮ ಬೆಂಬಲಕ್ಕೆ ನಿಲ್ಲುವಂತೆ, ತಮ್ಮ ಪರವಾಗಿ ಪ್ರಚಾರಕ್ಕೆ ಬರುವಂತೆ ಮನವಿ ಮಾಡಿದ್ದೂ ನಡೆಯಿತು.

ನಾಮಪತ್ರ ಸಲ್ಲಿಕೆ ಜೋರು–ಬಲಪ್ರದರ್ಶನದ ಅಬ್ಬರ

ಬೆಂಗಳೂರು ದಕ್ಷಿಣದಲ್ಲಿ ಬಿ.ಕೆ. ಹರಿಪ್ರಸಾದ್‌, ಉತ್ತರದಲ್ಲಿ ಸಚಿವ ಕೃಷ್ಣ ಬೈರೇಗೌಡ, ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ. ಸುರೇಶ್ ಕಾಂಗ್ರೆಸ್ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದರು. ಕೃಷ್ಣ ಬೈರೇಗೌಡರು ಅದ್ದೂರಿ ಇಲ್ಲದೇ ನಾಮಪತ್ರ ಸಲ್ಲಿಸಿದರು.

ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಚಿವ ಡಿ.ಕೆ. ಶಿವಕುಮಾರ್‌ ಅವರು, ಸುರೇಶ್‌ ಪರ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಪಾಲ್ಗೊಂಡು ಶಕ್ತಿ ಪ್ರದರ್ಶನ ನಡೆಸಿದರು.

ಉಡುಪಿಯಲ್ಲಿ ಶೋಭಾ ಕರಂದ್ಲಾಜೆ, ಚಿತ್ರದುರ್ಗದಲ್ಲಿ ಎ. ನಾರಾಯಣಸ್ವಾಮಿ, ಚಾಮರಾಜನಗರದಲ್ಲಿ ವಿ. ಶ್ರೀನಿವಾಸ್ ಪ್ರಸಾದ್‌, ತುಮಕೂರಿನಲ್ಲಿ ಜಿ.ಎಸ್‌. ಬಸವರಾಜು ಬಿಜೆಪಿ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದರು. ಚಿತ್ರದುರ್ಗದಲ್ಲಿ ಬಿ.ಎಸ್‌. ಯಡಿಯೂರಪ್ಪ, ಉಡುಪಿಯಲ್ಲಿ ನಿರ್ಮಲಾ ಸೀತಾರಾಮನ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.