ADVERTISEMENT

ವಿಧಾನ ಪರಿಷತ್‌ ಚುನಾವಣೆ: ನಾಮಪತ್ರ ಸಲ್ಲಿಕೆ ಅಂತ್ಯ

96 ಮಂದಿಯಿಂದ ಉಮೇದುವಾರಿಕೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 3:18 IST
Last Updated 9 ಅಕ್ಟೋಬರ್ 2020, 3:18 IST
ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಪುಟ್ಟಣ್ಣ ನಾಮಪತ್ರ ಸಲ್ಲಿಸಿದರು. ಯಡಿಯೂರಪ್ಪ, ಅಶ್ವತ್ಥನಾರಾಯಣ ಹಾಜರಿದ್ದರು
ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಪುಟ್ಟಣ್ಣ ನಾಮಪತ್ರ ಸಲ್ಲಿಸಿದರು. ಯಡಿಯೂರಪ್ಪ, ಅಶ್ವತ್ಥನಾರಾಯಣ ಹಾಜರಿದ್ದರು   

ಬೆಂಗಳೂರು: ವಿಧಾನಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಇದೇ 28 ರಂದು ನಡೆಯುವ ಚುನಾವಣೆಗೆ ನಾಮಪತ್ರಗಳ ಸಲ್ಲಿಕೆ ಪ್ರಕ್ರಿಯೆ ಗುರುವಾರ ಕೊನೆಗೊಂಡಿತು.

ನಾಮಪತ್ರಗಳ ಕ್ರಮಬದ್ಧತೆಯ ಪರಿಶೀಲನೆ ನಾಳೆ (ಶುಕ್ರವಾರ) ನಡೆಯಲಿದೆ. ಅಂತಿಮವಾಗಿ ಕಣದಲ್ಲಿ ಉಳಿದವರ ಪಟ್ಟಿಯನ್ನು ಚುನಾವಣೆ ಆಯೋಗ ನಾಳೆ ಸಂಜೆಯೇ ಪ್ರಕಟಿಸಲಿದ್ದು, ಇದೇ 12 ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆ ದಿನವಾಗಿದೆ.

ನಾಲ್ಕೂ ಕ್ಷೇತ್ರಗಳಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಪಕ್ಷೇತರರು ಸೇರಿ ಒಟ್ಟು 96 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯಿಂದ ಪುಟ್ಟಣ್ಣ, ಕಾಂಗ್ರೆಸ್‌ನಿಂದ ಪ್ರವೀಣ್ ಪೀಟರ್‌ ಮತ್ತು ಜೆಡಿಎಸ್‌ನಿಂದ ಎ.ಪಿ.ರಂಗನಾಥ್‌ ಕಣದಲ್ಲಿದ್ದಾರೆ.

ADVERTISEMENT

ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಚಿದಾನಂದಗೌಡ (ಬಿಜೆಪಿ), ರಮೇಶ್ ಬಾಬು (ಕಾಂಗ್ರೆಸ್‌) ಮತ್ತು ಚೌಡರೆಡ್ಡಿ ತೂಪಲ್ಲಿ(ಜೆಡಿಎಸ್‌), ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶಶಿಲ್‌ ನಮೋಶಿ(ಬಿಜೆಪಿ), ಶರಣಪ್ಪ ಮಟ್ಟೂರು(ಕಾಂಗ್ರೆಸ್‌), ತಿಮ್ಮಯ್ಯ ಪುರ್ಲೆ(ಜೆಡಿಎಸ್‌),ಕನ್ನಡ ಚಳವಳಿ ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್, ಪಕ್ಷೇತರ ಅಭ್ಯರ್ಥಿಗಳಾಗಿ ನಿಂಗಯ್ಯ ಮಠ, ತುಳಸಪ್ಪ ದಾಸರ, ಡಾ.ಚಂದ್ರಕಾಂತ ಶಿಂಗೆ, ಪ್ರಭುಲಿಂಗಯ್ಯ, ಪಶ್ಚಿಮ ಪದವೀಧರ ಕ್ಷೇತ್ರದಿಂದ ಎಸ್‌.ವಿ.ಸಂಕನೂರ(ಬಿಜೆಪಿ), ಆರ್‌.ಎಂ.ಕುಬೇರಪ್ಪ (ಕಾಂಗ್ರೆಸ್‌) ಮತ್ತು ಶಿವಶಂಕರಪ್ಪ (ಜೆಡಿಎಸ್‌) ನಾಮಪತ್ರ ಸಲ್ಲಿಸಿದ್ದಾರೆ.

ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಂಡಾಯದ ಬಿಸಿ ಎದುರಿಸುತ್ತಿದ್ದು, ಈ ಕ್ಷೇತ್ರದಲ್ಲಿ ಬಿಜೆಪಿಯ ಹಿರಿಯೂರು ಕ್ಷೇತ್ರದಶಾಸಕಿ ಪೂರ್ಣಿಮಾ ಅವರ ಪತಿ ಶ್ರೀನಿವಾಸ್‌ ಅವರು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಹಿಂದಕ್ಕೆ ಪಡೆಯುವಂತೆ ಶ್ರೀನಿವಾಸ್‌ ಮನವೊಲಿಸುವ ಕಾರ್ಯದಲ್ಲಿ ಬಿಜೆಪಿ ನಾಯಕರು ತೊಡಗಿದ್ದಾರೆ.

ಪುಟ್ಟಣ್ಣ, ಚಿದಾನಂದಗೌಡ ನಾಮಪತ್ರ ಸಲ್ಲಿಕೆ

ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಪುಟ್ಟಣ್ಣ ಮತ್ತು ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಚಿದಾನಂದಗೌಡ ಅವರು ಬಿಜೆಪಿ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಹಾಜರಿದ್ದರು. ಇಬ್ಬರೂ ಅಭ್ಯರ್ಥಿಗಳು ಇತ್ತೀಚೆಗಷ್ಟೇ ಬಿಜೆಪಿಗೆ ವಲಸೆ ಬಂದಿದ್ದರು. ಶಾಂತಿನಗರದ ಪ್ರಾದೇಶಿಕ ಆಯಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿದರು. ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಸಚಿವರಾದ ಸಿ.ಟಿ.ರವಿ ಮತ್ತು ಡಾ.ಸುಧಾಕರ್ ಅವರು ಹಾಜರಿದ್ದರು.

ನಾಮಪತ್ರ ಸಲ್ಲಿಕೆಯ ಬಳಿಕ ಪುಟ್ಟಣ್ಣ ಅವರು ಮಾತನಾಡಿ, ‘ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಶಕ್ತಿಶಾಲಿಯಾಗಿದೆ. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿರುವುದರಿಂದ ನನ್ನನ್ನು ಪುನರಾಯ್ಕೆ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಎದುರಾಳಿ ಅಭ್ಯರ್ಥಿಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನಾನು ಮಾಡಿರುವ ಕೆಲಸಗಳೇ ನನಗೆ ಶ್ರೀರಕ್ಷೆಯಾಗಲಿವೆ’ ಎಂದು ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.