ADVERTISEMENT

ಮಂಡ್ಯದ ಕೀಲಾರ ಗ್ರಾಮ ಪಂಚಾಯಿತಿ: ಲಿಂಗತ್ವ ಅಲ್ಪಸಂಖ್ಯಾತ ಮಹಿಳೆ ನಾಮಪತ್ರ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 15:13 IST
Last Updated 8 ಡಿಸೆಂಬರ್ 2020, 15:13 IST
ಕೆ.ಎನ್‌.ಪ್ರಫುಲ್ಲಾದೇವಿ
ಕೆ.ಎನ್‌.ಪ್ರಫುಲ್ಲಾದೇವಿ    

ಮಂಡ್ಯ: ಗ್ರಾಮ ಪಂಚಾಯಿತಿ ಚುನಾವಣೆ ಅಂಗವಾಗಿ ತಾಲ್ಲೂಕಿನ ಕೀಲಾರ ಗ್ರಾಮ ಪಂಚಾಯಿತಿ 1ನೇ ವಾರ್ಡ್‌ನಿಂದ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆ ಕೆ.ಎನ್‌.ಪ್ರಫುಲ್ಲಾದೇವಿ ಮಂಗಳವಾರ ನಾಮಪತ್ರ ಸಲ್ಲಿಸಿದರು.

‘ಕೀಲಾರ ಗ್ರಾಮಾಭಿವೃದ್ಧಿ ಟ್ರಸ್ಟ್‌’ ಮೂಲಕ ಕಳೆದ 2 ವರ್ಷಗಳಿಂದ ಅವರು ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಶಾಲಾ ಮಕ್ಕಳಿಗೆ ನೋಟ್‌ಬುಕ್‌, ಬ್ಯಾಗ್‌ ಸೇರಿ ಪಾಠೋಪಕರಣ ವಿತರಣೆ ಮಾಡುತ್ತಿದ್ದಾರೆ. ಬಡವರಿಗೆ ಕೈಲಾದ ಸಹಾಯ ಮಾಡುತ್ತಿದ್ದಾರೆ.

‘ಅಧಿಕಾರ ಸಿಕ್ಕಿದರೆ ಸಮಾಜಸೇವೆಗೆ ಇನ್ನೂ ಹೆಚ್ಚಿನ ಬಲ ದೊರೆಯಲಿದೆ. ಈ ಉದ್ದೇಶದಿಂದ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ನನಗೆ ಗ್ರಾಮಸ್ಥರ ಸಹಕಾರ ಇದೆ. ಗ್ರಾಮದ ಸೇವೆ ಮಾಡುವ ಜೊತೆಗೆ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವನ್ನು ಸಮಾಜದಲ್ಲಿ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತೇನೆ’ ಎಂದು ಪ್ರಫುಲ್ಲಾದೇವಿ ತಿಳಿಸಿದರು.

ADVERTISEMENT

154 ನಾಮಪತ್ರ

ಮೊದಲನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಅಂಗವಾಗಿ ನಾಮಪತ್ರ ಸಲ್ಲಿಕೆಯ 2ನೇ ದಿನವಾದ ಮಂಗಳವಾರ 154 ನಾಮಪತ್ರಗಳು ಸಲ್ಲಿಕೆಯಾಗಿವೆ.

ಮಂಡ್ಯ ತಾಲ್ಲೂಕಿನಲ್ಲಿ 35, ಮದ್ದೂರು 65, ಮಳವಳ್ಳಿ ತಾಲ್ಲೂಕಿನಲ್ಲಿ 54 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.