ADVERTISEMENT

ಹಿಂದುಳಿದ ತಾಲ್ಲೂಕುಗಳ ಅಭಿವೃದ್ದಿಗೆ ₹15 ಸಾವಿರ ಕೋಟಿ ಮೀಸಲಿಡಿ–ಸಿಎಂಗೆ ಮನವಿ

ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆ ನಿಯೋಗದಿಂದ ಸಿಎಂಗೆ ಮನವಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 15:52 IST
Last Updated 1 ಮಾರ್ಚ್ 2026, 15:52 IST
<div class="paragraphs"><p>ಸಿದ್ದರಾಮಯ್ಯ, ಮುಖ್ಯಮಂತ್ರಿ</p></div>

ಸಿದ್ದರಾಮಯ್ಯ, ಮುಖ್ಯಮಂತ್ರಿ

   

-ಪ್ರಜಾವಾಣಿ ಚಿತ್ರ

ಬೆಂಗಳೂರು: ಉತ್ತರ ಕರ್ನಾಟಕ ಭಾಗದ (ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ) ಹಿಂದುಳಿದ ತಾಲ್ಲೂಕುಗಳ ಅಭಿವೃದ್ದಿಗೆ ಬಜೆಟ್‌ನಲ್ಲಿ ₹15 ಸಾವಿರ ಕೋಟಿ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ಮನವಿ ಮಾಡಿದೆ.

ADVERTISEMENT

ಮಹಾಸಂಸ್ಥೆಯ ಅಧ್ಯಕ್ಷ ಶಿವಕುಮಾರ್ ಮೇಟಿ ಮತ್ತು ಪ್ರಧಾನ ಕಾರ್ಯದರ್ಶಿ ಶಂಕರ ಪಾಗೋಜಿ ನೇತೃತ್ವದ ನಿಯೋಗವು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

‘ಪ್ರೊ. ಗೋವಿಂದರಾವ್ ಸಮಿತಿಯ ಶಿಫಾರಸಿನಂತೆ ಉತ್ತರ ಕರ್ನಾಟಕದ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ಪ್ರತಿ ವರ್ಷ ಕನಿಷ್ಠ ₹15 ಸಾವಿರ ಮೀಸಲಿಡಬೇಕು, ಹಿಂದುಳಿದ ತಾಲ್ಲೂಕುಗಳಲ್ಲಿ ಪ್ರತಿ ವರ್ಷ ಕನಿಷ್ಠ 25 ಪ್ರಾಥಮಿಕ ಶಾಲೆಗಳು ಹಾಗೂ ಕನಿಷ್ಠ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಅನುದಾನ ಮೀಸಲಿಡಬೇಕು. ಉತ್ತರ ಕರ್ನಾಟಕ ಭಾಗದಲ್ಲಿ ವಾಣಿಜ್ಯೋದ್ಯಮ ಬೆಳವಣಿಗೆಗೆ ಏರೋ ಸ್ಪೇಸ್ ಘಟಕ ಘೋಷಿಸಬೇಕು’ ಎಂದು ನಿಯೋಗ ಮನವಿ ಮಾಡಿದೆ. 

‘ಕಲಬುರಗಿ ವಿಮಾನ ನಿಲ್ದಾಣ ಪುನರ್ ಕಾರ್ಯಾರಂಭ ಮಾಡಲು ಅನುದಾನ ಮೀಸಲಿಡಬೇಕು. ವಾಯವ್ಯ ಕರ್ನಾಟಕ ಮತ್ತು ಈಶಾನ್ಯ ಕರ್ನಾಟಕ ಸಾರಿಗೆ ನಿಗಮಗಳಿಗೆ ಪ್ರತಿ ನಿಗಮಕ್ಕೆ ಕನಿಷ್ಠ 200 ಹೊಸ ಬಸ್ ಖರೀದಿಸಲು ಅನುದಾನ ನೀಡಬೇಕು. ಕಲಬುರಗಿ ಹಾಗೂ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಿ, ವಾರ್ಷಿಕ ಕನಿಷ್ಠ ₹ 5 ಸಾವಿರ ಕೋಟಿ ಮೀಸಲಿಡಬೇಕು. ಬೆಂಗಳೂರಿನ ದಾಸನಪುರ ಹೋಬಳಿ ಕಮ್ಮಸಂದ್ರದಲ್ಲಿ 3.24 ಎಕರೆ ಜಮಿನಿನಲ್ಲಿ ಹಾಸ್ಟೆಲ್ ನಿರ್ಮಾಣಕ್ಕೆ ₹ 10 ಕೋಟಿ ನೀಡಬೇಕು. ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಅನುಷ್ಠಾನಕ್ಕೆ ವಾರ್ಷಿಕ ಕನಿಷ್ಠ ₹10 ಸಾವಿರ ಕೋಟಿ ಒದಗಿಸಬೇಕು’ ಎಂದು ನಿಯೋಗ ಆಗ್ರಹಿಸಿದೆ.

ನಿಯೋಗದಲ್ಲಿ ಸಂಸ್ಥೆಯ ಕಾರ್ಯದರ್ಶಿ ಬಸಯ್ಯ ನಂದಿಕೋಲ್, ನಿರ್ದೇಶಕರಾದ ಶಾಂತೇಶ್ ಹಿರೇಮಠ, ರಾಮನಗೌಡ ಬಿರಾದಾರ, ದೇವರಾಜ ಕವಳಿಕಾಯಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.