ADVERTISEMENT

ಕಾಂಗ್ರೆಸ್‌ಗೆ ‘ಉತ್ತರ ಬಂಡಾಯ’ದ ಬಿಸಿ

ನೇತೃತ್ವ ವಹಿಸಿಕೊಂಡ ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 19:22 IST
Last Updated 14 ಡಿಸೆಂಬರ್ 2018, 19:22 IST
   

ಬೆಳಗಾವಿ : ವಿಧಾನಪರಿಷತ್‌ ಸಭಾಪತಿ ಹುದ್ದೆ ಎಸ್.ಆರ್. ಪಾಟೀಲರ ಕೈ ತಪ್ಪಿದ ಬೆನ್ನಲ್ಲೇ, ಉತ್ತರ ಕರ್ನಾಟಕ ಭಾಗದ ಕಾಂಗ್ರೆಸ್‌ ಶಾಸಕರು ಕೊತಕೊತ ಕುದಿಯಲಾರಂಭಿಸಿದ್ದು, ಬಂಡಾಯದ ಬಿಸಿ ಹೈಕಮಾಂಡ್‌ಗೆ ತಟ್ಟಲಿದೆ.

ನಾಲ್ಕೈದು ತಿಂಗಳಿನಿಂದ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಬುಸುಗುಡುತ್ತಿದ್ದರು. ಅವರು ಮೌನಕ್ಕೆ ಶರಣಾಗುತ್ತಿದ್ದಂತೆ ರೊಚ್ಚಿಗೆದ್ದಿರುವ ಅವರ ತಮ್ಮ ಹಾಗೂ ಜಾರಕಿಹೊಳಿ ಕುಟುಂಬದಲ್ಲಿ ತಂತ್ರಗಾರ ಎಂದೇ ಹೆಸರಾದ ಸತೀಶ ಈಗ ಅಖಾಡಕ್ಕೆ ಇಳಿದಿದ್ದಾರೆ. ಈ ಬೆಳವಣಿಗೆ ಕಾಂಗ್ರೆಸ್‌ನಲ್ಲಿ ಹಿಡಿತ ಹೊಂದಿರುವ ದಕ್ಷಿಣ ಭಾಗದ ನಾಯಕರಿಗೆ ತಲೆನೋವಾಗಲಿದೆ ಎಂದೂ ಹೇಳಲಾಗುತ್ತಿದೆ.

ಸಭಾಪತಿ ಹುದ್ದೆ ಪ್ರತಾಪಚಂದ್ರ ಶೆಟ್ಟಿ ಪಾಲಾಗುತ್ತಿದ್ದಂತೆ ಹುದ್ದೆಯ ಆಕಾಂಕ್ಷಿಯಾಗಿದ್ದ ಎಸ್‌.ಆರ್. ಪಾಟೀಲ ಸಿಡಿಮಿಡಿಗೊಂಡಿದ್ದರು. ಸಚಿವ ಸ್ಥಾನ, ಪಕ್ಷದ ಪ್ರಮುಖ ಹುದ್ದೆಗಳು ಈ ಭಾಗಕ್ಕೆ ಸಿಕ್ಕಿಲ್ಲ ಎಂದು ಸದನದಲ್ಲೇ ಬಹಿರಂಗವಾಗಿ ಹೇಳಿದ್ದರು.

ADVERTISEMENT

ಸತೀಶ ರಂಗಪ್ರವೇಶ ಮಾಡಿದ ಬೆನ್ನಲ್ಲೇ ಸಚಿವ ಸ್ಥಾನ ಆಕಾಂಕ್ಷಿಯೂ ಆಗಿರುವ ಎಂ.ಬಿ. ಪಾಟೀಲ ಕೂಡ ಜತೆಯಾದರು. ಉತ್ತರ ಭಾಗದ ಬಹುತೇಕ ಶಾಸಕರನ್ನು ಗುಂಪುಗೂಡಿಸಿ, ಸರಣಿ ಸಭೆಗಳನ್ನು ನಡೆಸಿರುವ ಇವರು ಪಕ್ಷದ ವೇದಿಕೆಯಲ್ಲಿ ‘ಅನ್ಯಾಯ’ವನ್ನು ಪ್ರಶ್ನಿಸಿ, ನ್ಯಾಯ ಕೇಳಲು ಸಿದ್ಧತೆ ನಡೆಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸತೀಶ ಜಾರಕಿಹೊಳಿ, ‘ಇದೇ 18ರಂದು ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ ಪ್ರಬಲ ಧ್ವನಿ ಎತ್ತುತ್ತೇವೆ. ಅಲ್ಲಿ ನ್ಯಾಯ ಸಿಗದೇ ಇದ್ದರೆ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿ, ನೋವು ತೋಡಿಕೊಳ್ಳುತ್ತೇವೆ. ಅಲ್ಲಿಯೂ ಫಲ ಸಿಗದೇ ಇದ್ದರೆ ಮತ್ತೆ ಸಭೆ ಸೇರಿ ಮುಂದಿನ ಹೆಜ್ಜೆಯ ಬಗ್ಗೆ ಚರ್ಚಿಸುತ್ತೇವೆ’ ಎಂದರು.

ಖರ್ಗೆ ಭೇಟಿಗೆ ತೀರ್ಮಾನ

ಸಚಿವ ಸ್ಥಾನ ಸಿಗದಿರುವ ಹಿರಿಯ ಕಾಂಗ್ರೆಸ್ ಶಾಸಕರು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಅಹವಾಲು ಸಲ್ಲಿಸಲು ತೀರ್ಮಾನಿಸಿದ್ದಾರೆ.

ಅಧಿವೇಶನದ ವೇಳೆ ರಹಸ್ಯ ಸಭೆ ನಡೆಸಿರುವ ಆರ್. ರೋಷನ್ ಬೇಗ್, ರಾಮಲಿಂಗಾರೆಡ್ಡಿ ಸೇರಿದಂತೆ 10 ಜನ ಶಾಸಕರು ಈ ಸಂಬಂಧ ಸುದೀರ್ಘ ಚರ್ಚೆ ನಡೆಸಿದ್ದಾರೆ.

ಹಿರಿಯರು-ಕಿರಿಯರು ಸೇರಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಾದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಹಿರಿಯರ ಅಹವಾಲನ್ನು ಕೇಳಲೂ ತಯಾರಿಲ್ಲ. ವಿಧಾನಸಭೆ, ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮುಂದೆ ನಿಂತು ಕೆಲಸ ಮಾಡಿ ಪಕ್ಷವನ್ನು ಗೆಲ್ಲಿಸಿದವರಿಗೆ ಆದ್ಯತೆ ಕೊಡುತ್ತಿಲ್ಲ ಎಂದು ಹಿರಿಯ ಶಾಸಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.