ADVERTISEMENT

ಮೇಲ್ಮನೆ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 11:59 IST
Last Updated 26 ನವೆಂಬರ್ 2020, 11:59 IST
ಕೆ.ಪ್ರತಾಪಚಂದ್ರ ಶೆಟ್ಟಿ
ಕೆ.ಪ್ರತಾಪಚಂದ್ರ ಶೆಟ್ಟಿ   

ಬೆಂಗಳೂರು: ವಿಧಾನಪರಿಷತ್ ಸಭಾಪತಿ ಕೆ.ಪ್ರತಾಪಚಂದ್ರಶೆಟ್ಟಿ ಅವರ ವಿರುದ್ಧ ಮುಂಬರುವ ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಸದಸ್ಯರು ಪರಿಷತ್ ಕಾರ್ಯದರ್ಶಿಯವರಿಗೆ ನೋಟಿಸ್‌ ನೀಡಿದೆ.

ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿಯವರು ಸದನದಲ್ಲಿ ನಿಷ್ಪಕ್ಷವಾಗಿ ವರ್ತಿಸದೇ ಕಾಂಗ್ರೆಸ್‌ ಸದಸ್ಯರಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ಭಾವನೆ ಮೂಡಿದೆ. ಸದಸ್ಯರಲ್ಲಿ ಅವರ ಬಗ್ಗೆ ವಿಶ್ವಾಸವಿಲ್ಲ. ಶಾಸಕಾಂಗ ಕರ್ತವ್ಯ ನಿರ್ವಹಣೆಯಲ್ಲಿ ಪಕ್ಷಪಾತಿಯಾಗಿದ್ದು, ಸಂವಿಧಾನದ ಆಶಯಕ್ಕೆ ಧಕ್ಕೆ ತಂದಿದ್ದಾರೆ ಎಂದು ನೋಟಿಸ್‌ನಲ್ಲಿ ಬಿಜೆಪಿ ತಿಳಿಸಿದೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಬಿಜೆಪಿಯ ಮಹಾಂತೇಶ ಕವಟಗಿಮಠ, ಬಿಜೆಪಿ ಮಾತ್ರವಲ್ಲ ಇತರ ಪಕ್ಷಗಳ ಸದಸ್ಯರಲ್ಲೂ ಸಭಾಪತಿಯವರ ಕಾರ್ಯನಿರ್ವಹಣೆ ವೈಖರಿ ಬಗ್ಗೆ ಅಸಮಾಧಾನವಿದೆ. ನಿಷ್ಪಕ್ಷವಾಗಿ ನಡೆಸುತ್ತಿಲ್ಲ ಎಂಬ ಭಾವನೆ ಇದೆ. ಕಳೆದ ಅಧಿವೇಶನದ ಸಂದರ್ಭದಲ್ಲಿ ಎರಡು ಮಸೂದೆಗಳ ಮಂಡನೆ ಆಗಲಿಲ್ಲ. ಕಾರ್ಮಿಕ ಕಾಯ್ದೆಯ ತಿದ್ದುಪಡಿ ಮಸೂದೆ ತಾರ್ಕಿಕ ಅಂತ್ಯಕ್ಕೆ ಒಯ್ಯದೇ, ಏಕಾಏಕಿ ಅನಿರ್ಧಿಷ್ಟ ಕಾಲ ಸದನವನ್ನು ಮುಂದೂಡಿದರು. ಈ ರೀತಿ ರಾಜ್ಯಸಭೆಯಲ್ಲೂ ನಡೆಯುವುದಿಲ್ಲ ಎಂದು ತಿಳಿಸಿದರು.

ADVERTISEMENT

ಸರ್ಕಾರಕ್ಕೆ ಮಸೂದೆ ಮಂಡಿಸಲು ಅವಕಾಶವನ್ನು ನೀಡಬೇಕು. ಮಧ್ಯರಾತ್ರಿವರೆಗೆ ಸದನ ನಡೆಸಿ ಮಸೂದೆ ಮಂಡಿಸಲು ಅವಕಾಶ ನೀಡದೇ ಸದನ ಮುಂದೂಡಿ ಎದ್ದು ಹೋಗುವುದು ಎಷ್ಟರ ಮಟ್ಟಿಗೆ ಸರಿ. ಯಾವುದೇ ಸರ್ಕಾರ ಇದ್ದಾಗ ಸಾಮಾನ್ಯವಾಗಿ ಪರಿಷತ್ತಿನಲ್ಲಿ ಬಹುಮತ ಇರುವುದಿಲ್ಲ. ಹಾಗೆಂದು ಮಸೂದೆಗಳಿಗೆ ಅಡ್ಡಿಪಡಿಸುವುದಿಲ್ಲ. ಕಳೆದ ಅಧಿವೇಶನದಲ್ಲಿ ಸರಿಯಾಗಿ ಕಲಾಪ ನಡೆಸಿದ್ದರೆ ಮೂರೂ ಮಸೂದೆಗಳು ಅಂಗೀಕಾರವಾಗುತ್ತಿದ್ದವು ಎಂದು ಕವಟಗಿಮಠ ಹೇಳಿದರು.

ಜೆಡಿಎಸ್‌ ನೆರವು ಪಡೆಯಲು ಚಿಂತನೆ

ಇತ್ತೀಚೆಗೆ ನಡೆದ ವಿಧಾನಪರಿಷತ್ತಿನ ನಾಲ್ಕು ಸ್ಥಾನಗಳ ಚುನಾವಣೆಯಲ್ಲಿ ಎಲ್ಲ ಸ್ಥಾನಗಳನ್ನೂ ಬಿಜೆಪಿ ಗೆದ್ದುಕೊಂಡಿದೆ. ಆದರೂ ಬಹುಮತಕ್ಕೆ 6 ಸ್ಥಾನಗಳ ಕೊರತೆ ಇದೆ. 37 ಸ್ಥಾನ ಇದ್ದರೆ ಬಹುಮತ ಇದ್ದಂತೆ. ಪರಿಷತ್ತಿನ ಒಟ್ಟು ಸದಸ್ಯರ ಬಲ 75 ಸ್ಥಾನಗಳು. ಬಿಜೆಪಿ 31, ಕಾಂಗ್ರೆಸ್‌ 28 ಮತ್ತು ಜೆಡಿಎಸ್‌ 14 ಸದಸ್ಯರ ಬಲವನ್ನು ಹೊಂದಿವೆ. ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಜೆಡಿಎಸ್‌ ಬೆಂಬಲ ಯಾಚಿಸಲು ಬಿಜೆಪಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಅವಿಶ್ವಾಸದ ಸಂದರ್ಭದಲ್ಲಿ ಮತದಾನಕ್ಕೆ ಒತ್ತಾಯಿಸಿದರೆ, ಬಿಜೆಪಿಗೆ ಇತರ ಪಕ್ಷಗಳಿಂದ 7 ಸದಸ್ಯರ ಬೆಂಬಲ ಬೇಕಾಗುತ್ತದೆ. ಆಗ ಜೆಡಿಎಸ್‌ ಬೆಂಬಲಿಸಬಹುದು ಎಂಬ ವಿಶ್ವಾಸವಿದೆ ಎಂದೂ ಮೂಲಗಳು ಹೇಳಿವೆ.

ಜೆಡಿಎಸ್ ಸದಸ್ಯರು ಬಿಜೆಪಿಗೆ ಬೆಂಬಲ ನೀಡುವ ಸೂಚನೆ ಕಂಡು ಬಂದರೆ ಸಭಾಪತಿಯವರು ರಾಜೀನಾಮೆ ನೀಡಬಹುದು. ಈ ಹಿಂದೆ ಸಭಾಪತಿಯಾಗಿದ್ದ ಡಿ.ಎಚ್‌.ಶಂಕರಮೂರ್ತಿ ವಿರುದ್ಧ ಕಾಂಗ್ರೆಸ್‌ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಕಾಂಗ್ರೆಸ್‌ಗೆ ಹೆಚ್ಚು ಸ್ಥಾನವಿದ್ದರೂ ಮತದಾನದಲ್ಲಿ ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.